ರಫೇಲ್ ಅಂದಾಕ್ಷಣ ನೆನಪಾಗೋದು ಫ್ರೆಂಚ್ ಯುದ್ಧ ವಿಮಾನ. ಆಯುಧ ಪೂಜೆಯಂದು ನಮ್ಮ ರಕ್ಷಣಾ ಸಚಿವರು ರಫೇಲ್ ಯುದ್ಧ ವಿಮಾನಕ್ಕೆ ನಿಂಬೆ ಹಣ್ಣಿಟ್ಟು ಪೂಜೆ ಸಲ್ಲಿಸಿದ್ದನ್ನೂ ನಾವು ಇಲ್ಲಿ ನೆನಪಿಸಿಕೊಳ್ಳಬಹುದು. ಯುಪಿಎ ಹಾಗೂ ಎನ್ಡಿಎ ಎರಡೂ ಸರ್ಕಾರಗಳಲ್ಲಿ ಫ್ರೆಂಚ್ನ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈಗಲೂ ವಾಕ್ಸಮರಗಳು ನಡೆಯುತ್ತಲೇ ಇವೆ. ಹೀಗಿರುವಾಗಲೇ ಭಾರತದ ಮೂಲೆಯೊಂದರಲ್ಲಿರುವ ರಫೇಲ್ ದೇಶದ ಗಮನ ಸೆಳೆಯುತ್ತಿದೆ.
ಹೌದು, ರಫೇಲ್ ಅನ್ನೋದು ಒಂದು ಗ್ರಾಮದ ಹೆಸರು.. ಛತ್ತಿಸ್ಗಢ ರಾಜ್ಯದ ಮಹಾಸಮುಂದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ರಫೇಲ್ ಅನ್ನೋ ಕುಗ್ರಾಮ ಬರುತ್ತೆ. ಈ ಹಳ್ಳಿಯಲ್ಲಿರೋದು ಬರೀ 200 ಕುಟುಂಬಗಳು ಮಾತ್ರ.. ಮೂಲ ಸೌಕರ್ಯಗಳೇ ಇಲ್ಲದ ಈ ಗ್ರಾಮ ಈಗ ಹೆಚ್ಚು ಚರ್ಚೆಗೆ ಬರುತ್ತಿದೆ..
ರಫೇಲ್ ಅನ್ನೋದು ಹೆಸರಲ್ಲಿ ಯುದ್ಧ ವಿಮಾನ ಇದೆ ಅನ್ನೊದು ಈ ಗ್ರಾಮದ ಜನಕ್ಕೆ ಗೊತ್ತಿರಲಿಲ್ಲ.. ಆದರೆ ಯಾವಾಗ ವಿವಾದ ಶುರುವಾಯ್ತೋ ಆಗ ಗ್ರಾಮದ ಜನಕ್ಕೆ ತಮ್ಮ ಊರಿನ ಹೆಸರಿನ ವಿಮಾನದ ಪರಿಚಯವಾಯ್ತು. ಆದರೆ ಇದರಿಂದ ಅವರು ಖುಷಿಪಡುವ ಹಾಗಿರಲಿಲ್ಲ. ಯಾಕೆಂದರೆ, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದೆ ಅಂತ ಕಾಂಗ್ರೆಸ್-ಬಿಜೆಪಿ ನಾಯಕರು ಕಿತ್ತಾಡುತ್ತಿದ್ದಾರೆ. ಇದು ರಫೇಲ್ ಗ್ರಾಮದ ಜನಕ್ಕೆ ಮುಜುಗರವನ್ನುಂಟು ಮಾಡಿದೆ.