. . .
60 Views

     ವಿಶ್ವದ ಶ್ರೀಮಂತ ದೇಶಗಳಲ್ಲಿ ಅಮೆರಿಕ ಕೂಡಾ ಒಂದು. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಗಳಿಸಿರೋ ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ ಸಿಟಿಗೆ ರಸ್ತೆಯೇ ಸರಿ ಇಲ್ಲ. ಇಲ್ಲಿನ ಜನಕ್ಕೆ ಕುಡಿಯೋಕೆ ನೀರೂ ಸಿಗುತ್ತಿಲ್ಲ ಅಂದ್ರೆ ನಂಬೋಕೆ ಆಗುತ್ತಾ..? ಸಾಧ್ಯಾನೇ ಇಲ್ಲ ಬಿಡಿ. ಹಾಗಂತ ನಾವು ಹೇಳೋಕೆ ಹೊರಟಿರೋದು ಅಮೆರಿಕದ ನ್ಯೂಯಾರ್ಕ್ ಬಗ್ಗೆ ಅಲ್ಲ. ಮಂಡ್ಯದ ನ್ಯೂಯಾರ್ಕ್ ಬಗ್ಗೆ..

   ಹೌದು, ಮಂಡ್ಯ ಜಿಲ್ಲೆ ಮದ್ದೂರು ಬಳಿ ಒಂದು ನ್ಯೂಯಾರ್ಕ್ ಇದೆ. ಮದ್ದೂರು-ಕೆಎಂ ದೊಡ್ಡಿ ಮಾರ್ಗದಲ್ಲಿ ಹುಣ್ಣನ ದೊಡ್ಡಿ ಅನ್ನೋ ಗ್ರಾಮ ಇದೆ. ಈ ಗ್ರಾಮಕ್ಕೆ 2001ರಲ್ಲಿ ನ್ಯೂಯಾರ್ಕ್ ಅಂತ ನಾಮಕರಣ ಮಾಡಲಾಗಿದೆ. ಗ್ರಾಮಕ್ಕೆ ಭೇಟಿ ಕೊಡುತ್ತಿದ್ದಂತೆ ಮೊದಲ ಕಾಣಿಸೋದೇ ನ್ಯೂಯಾರ್ಕ್ ‍ಅನ್ನೋ ನಾಮಫಲಕ. ಈ ಹೆಸರು ನೋಡಿದ ತಕ್ಷಣ ಎಲ್ಲರಿಗೂ ಕುತೂಹಲ ಹೆಚ್ಚುತ್ತೆ.

   ಅಂದಹಾಗೆ ಸರ್ಕಾರಿ ದಾಖಲೆಗಳಲ್ಲಿ ಈಗಲೂ ಗ್ರಾಮದ ಹೆಸರು ಹುಣ್ಣನ ದೊಡ್ಡಿ ಅಂತಾನೇ ಇದೆ. ಆದರೆ ಗ್ರಾಮದ ಯುವಕರು ಮಾತ್ರ ಇದನ್ನು ನ್ಯೂಯಾರ್ಕ್ ಅಂತ ಕರೆಯುತ್ತಾರೆ. ಅಂದಹಾಗೆ 2001 ಸೆಪ್ಟೆಂಬರ್‍ 11 ರಂದು ಅಮೆರಿಕದ ನ್ಯೂಯಾರ್ಕ್ನಲ್ಲಿರುವ ವರ್ಲ್ಡ್ ಟ್ರೇಡ್‍ ಸೆಂಟರ್‍ ಮೇಲೆ ಉಗ್ರರ ದಾಳಿ ನಡೆಯಿತು. ಈ ಹಿನ್ನೆಲೆಯಲ್ಲಿ  ಹುಣ್ಣನ ದೊಡ್ಡಿ ಗ್ರಾಮದ ಯುವಕರು ಸಂತಾಪ ಸೂಚಕ ಸಭೆ ನಡೆಸಿದರು. ಈ ವೇಳೆ ಯುವಕರೆಲ್ಲಾ ಸೇರಿ ತಮ್ಮ ಹಳ್ಳಿಗೆ ನ್ಯೂಯಾರ್ಕ್ ಎಂದು ಹೆಸರಿಡಲು ತೀರ್ಮಾನಕ್ಕೆ ಬಂದರು. ಅಂದಿನಿಂದ ಆ ಹಳ್ಳಿಯಲ್ಲಿ ನ್ಯೂಯಾರ್ಕ್ ಎಂಬ ಹೆಸರಿನ ಬೋರ್ಡ್‍ ಹಾಕಲಾಗಿದೆ.

  ಈ ಪುಟ್ಟ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಆದ್ರೆ ಗ್ರಾಮಕ್ಕೆ ಸರಿಯಾಗಿ ರಸ್ತೆಯೇ ಇಲ್ಲ. ಶೌಚಾಲಯ, ಕುಡಿಯುವ ನೀರು, ಬೀದಿ ದೀಪಗಳು, ಚರಂಡಿ ವ್ಯವಸ್ಥೆ ಏನೇನೂ ಇಲ್ಲ.. ಹೀಗಾಗಿ, ಜನಪ್ರತಿನಿಧಿಗಳ ಗಮನ ಸೆಳೆಯೋದಕ್ಕಾಗಿ ಯುವಕರು ತಮ್ಮ ಗ್ರಾಮಕ್ಕೆ ನ್ಯೂಯಾರ್ಕ್ ಎಂದು ಹೆಸರಿಟ್ಟಿದ್ದಾರೆ. ಈ ಹೆಸರಿಟ್ಟು ಎರಡು ದಶಕಗಳಾಗುತ್ತಾ ಬಂದಿದೆ. ಆದರೆ ಇದುವರೆಗೂ ಗ್ರಾಮ ಇದ್ದಂಗೇ ಇದೆ. ಹೀಗಾಗಿ ಇದು ಭಾರತದ ಹಿಂದುಳಿದ ನ್ಯೂಯಾರ್ಕ್ ಆಗಿದೆ.

Leave a Reply

 

%d bloggers like this: