You cannot copy content of this page.
. . .

     ಗೂಗಲ್‍.. ಈ ಹೆಸರು ಪ್ರಪಂಚದ ಮೂಲೆಮೂಲೆಗೂ ಗೊತ್ತು.. ಗೂಗಲ್‍ ಅನ್ನೋ INTERNET ಫೇಮಸ್‍ ಸರ್ಚ್‍ ಎಂಜಿನ್‍ ಕಾರ್ಯರೂಪಕ್ಕೆ ಬಂದಿದ್ದು 1997 ಸೆಪ್ಟೆಂಬರ್‍ 15ರಂದು.. ಕೇವಲ 2 ದಶಕಗಳ ಹಿಂದೆ ಬಂದ ಗೂಗಲ್‍ ಬಹುತೇಕ ಎಲ್ಲರಿಗೂ ಗೊತ್ತಿದೆ.. ಆದರೆ 12ನೇ ಶತಮಾನದಲ್ಲಿ ಹುಟ್ಟಿದ ಗೂಗಲ್‍ ಮಾತ್ರ ಹೆಚ್ಚು ಜನಕ್ಕೆ ಗೊತ್ತಿಲ್ಲ..

   ಇಂಟರ್‍ ನೆಟ್‍ ಹಾಗೂ ಗೂಗಲ್‍ ಅನ್ನೋ ಸರ್ಚ್‍ ಎಂಜಿನ್‍ ಇಡೀ ಪ್ರಪಂಚವನ್ನು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ. ಆದರೆ ಇದೇ ಈ ಗೂಗಲ್‍ ಅನ್ನೋ ಹೆಸರು 12ನೇ ಶತಮಾನದಿಂದ ಇಂದಿಗೂ ಒಂದು ಹಳ್ಳಿಯಾಗಿಯೇ ಇದೆ. ಹೌದು, ನಾವು ಹೇಳ್ತಾ ಇರೋದು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗೂಗಲ್‍ ಅನ್ನೋ ಪುಟ್ಟ ಹಳ್ಳಿಯ ಬಗ್ಗೆ..

   ಬೆಂಗಳೂರಿನಿಂದ 510 ಕಿಲೋ ಮೀಟರ್‍, ರಾಯಚೂರಿನಿಂದ 60 ಕಿಲೋ ಮೀಟರ್‍ ದೂರದಲ್ಲಿ ಕೃಷ್ಣಾನದಿ ದಡದಲ್ಲಿ ಒಂದು ಪುಟ್ಟ ಹಳ್ಳಿ ಇದೆ.. ಅದರ ಹೆಸರು ಗೂಗಲ್‍.. ಶತಮಾನಗಳಿಂದ ಇದಕ್ಕೆ ಇದೇ ಹೆಸರಿದೆ.. ಇಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು, ವ್ಯವಸಾಯವೇ ಇವರ ಪ್ರಮುಖ ಕಸುಬು. ಹೀಗಾಗೇ ಈ ಗ್ರಾಮದ ಬಹುತೇಕ ಜನಕ್ಕೆ ಸರ್ಚ್‍ ಎಂಜಿನ್‍ ಗೂಗಲ್‍ ಬಗ್ಗೆ ಗೊತ್ತೇ ಇಲ್ಲ..

   ಕನ್ನಡದ ಈ ಹಳ್ಳಿಗೆ ಗೂಗಲ್‍ ಎಂಬ ಹೆಸರು ಯಾಕೆ ಬಂತು ಎಂಬುದೇ ಒಂದು ಕುತೂಹಲ. 12ನೇ ಶತಮಾನದಲ್ಲಿ ಖ್ಯಾತ ಶಿವಶರಣ ಹಾಗೂ ವಚನಕಾರ ಅಲ್ಲಮಪ್ರಭು ಬಸವ ಕಲ್ಯಾಣದಿಂದ ಶ್ರೀಶೈಲಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಈ ಗ್ರಾಮದ ಬಳಿಯ ಕಲ್ಲಿನ ಗುಹೆಯಲ್ಲಿ ತಪಸ್ಸು ಮಾಡಿದ್ದರು. ಕಲ್ಲಿನ ಗುಹೆಯಾದ್ದರಿಂದ ಗವಿ ಕಲ್ಲು ಎಂದು ಪ್ರಚಲಿತಕ್ಕೆ ಬಂತು. ವರ್ಷಗಳ ಕಳೆಯುತ್ತಾ ಅದು ಗೂಗಲ್ಲು ಎಂದು ಕರೆಯುವಂತಾಯಿತು.

  ಇನ್ನೂ ಕೆಲವರು ಹೇಳುವ ಪ್ರಕಾರ ಕೃಷ್ಣಾ ನದಿಯ ನೀರಿನ ಅಲೆಗಳು ಅಲ್ಲಿನ ಕಲ್ಲುಗಳಿಗೆ ಬಡಿಯುವಾಗ ಸಂಗೀತ ಹೊರಹೊಮ್ಮುತ್ತದಂತೆ. ಹೀಗಾಗಿ ಅದಕ್ಕೆ ಕೂಗುವ ಕಲ್ಲು ಎಂದು ಕರೆಯುತ್ತಿದ್ದರು. ಅದು ಬರಬರುತ್ತಾ ಗೂಗಲ್‍ ಎಂದು ಕರೆದಿರಬಹುದು.

   ಅನಾದಿ ಕಾಲದಲ್ಲಿ ನದಿ ದಾಟಿ ಬೇರೊಂದು ದಡದಲ್ಲಿರುವ ಗ್ರಾಮವನ್ನು ಸಂಪರ್ಕಿಸಲು ಕಷ್ಟವಾಗುತ್ತಿತ್ತು. ಹೀಗಾಗಿ ಬೇರೆ ದಡದಲ್ಲಿರುವ ಜನರಿಗೆ ಸಂದೇಶ ಕಳುಹಿಸಬೇಕಾದರೆ ಕಲ್ಲಿನಿಂದ ಬಂಡೆಯನ್ನು ಹೊಡೆದು ಸಂಗೀತ ಹೊರಹೊಮ್ಮಿಸುವ ಮೂಲಕ ಸಂದೇಶ ರವಾನಿಸುತ್ತಿದ್ದರು. ಇದೂ ಕೂಡಾ ಗ್ರಾಮಕ್ಕೆ ಗೂಗಲ್‍ ಎಂದು ಹೆಸರು ಬರಲು ಕಾರಣ ಎಂದು ಸ್ಥಳೀಯರು ಹೇಳುತ್ತಾರೆ.

 

%d bloggers like this: