You cannot copy content of this page.
. . .

   ಪಶುವೈದ್ಯೆ ಮೇಲೆ ನಡೆದ ಕ್ರೂರ ದೌರ್ಜನ್ಯದ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ಮಹಿಳೆಯರು ಸಮಾಜದಲ್ಲಿ ನಿರ್ಭೀತಿಯಿಂದ ಓಡಾಡಲು ಹೆದರುತ್ತಿದ್ದಾರೆ.
ಈ ಹಿಂದೆಯೇ ಅತ್ಯಾಚಾರಕ್ಕೆ ಒಳಗಾಗಿ ಕೊಲೆ ಸಂಚಿಗೂ ಗುರಿಯಾಗಿ, ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ಉನ್ನಾವ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು.
 2017ರ ಡಿಸೆಂಬರ್ ನಲ್ಲಿ ಈ ಯುವತಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಆರೋಪಿಯನ್ನು ಬಂಧಿಸುವಂತೆ ಸಂತ್ರಸ್ತೆ ಕುಟುಂಬಸ್ಥರು ದೂರು ನೀಡಿದಾಗ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದರಿಂದ ನೊಂದ ಸಂತ್ರಸ್ತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನೆ ಮುಂದೆ ಧರಣಿ ಕುಳಿತರೂ ಪ್ರಯೋಜನವಾಗಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿದರೂ ಪ್ರಯೋಜನವಾಗಿರಲಿಲ್ಲ.

  ಅತ್ಯಾಚಾರ ಖಂಡಿಸಿ ದೇಶಾದ್ಯಂತ ಪ್ರತಿರೋಧ, ಪ್ರತಿಭಟನೆ ವ್ಯಕ್ತವಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲದೀಪ್ ಹಾಗೂ ೯ ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು. ಪ್ರಮುಖ ರಾಜಕೀಯ ಪಕ್ಷಗಳ ತಿಕ್ಕಾಟಕ್ಕೂ ಕಾರಣವಾಗಿತ್ತು. ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಸಂತ್ರಸ್ತೆಗೆ ಬಿಜೆಪಿ ಉಚ್ಛಾಟಿತ ಶಾಸಕ ಕುಲ್ದೀಪ್‌ರಿಂದ ಒತ್ತಡ ಹೇರಲಾಯಿತು. ಅದನ್ನು ಒಪ್ಪದ ಸಂತ್ರಸ್ತೆ ಮೇಲೆ ಮತ್ತೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಅಲ್ಲದೇ, ಸಾಕಷ್ಟು ಬಾರಿ ಕೊಲೆ ಯತ್ನ ಕೂಡ ನಡೆದಿತ್ತು.
ಈ ನಡುವೆ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋದಳು. ಆಗ ಕುಲದೀಪ್ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಯನ್ನು ಸಿಬಿಐ ಕಷ್ಟಡಿಗೆ ತೆಗೆದುಕೊಳ್ಳಲಾಯಿತು. ಹೀಗಿರುವಾಗ ಕುಲದೀಪ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಆತನ ಬೆಂಬಲಿಗರು ಸಂತ್ರಸ್ತೆ ಹಾಗೂ ಕುಟುಂಬಸ್ಥರಿಗೆ ಪ್ರಾಣ ಬೆದರಿಕೆ ಒಡ್ಡಿ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. ಇದಾದ ಕೆಲ ತಿಂಗಳ ನಂತರ ಅತ್ಯಾಚಾರ ಪ್ರಕರಣದ ಸಾಕ್ಷಿಯಾಗಿದ್ದ ಮೊಹಮ್ಮದ್ ಯೂನಸ್ ಕೂಡ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟರು.
 ಏತನ್ಮಧ್ಯೆ ಸಂಬಂಧಿಕರು ಹಾಗೂ ವಕೀಲರೊಂದಿಗೆ ರಾಯ್‌ ಬರೇಲಿಯಲ್ಲಿ ಸಂತ್ರಸ್ತೆ ತೆರಳುತ್ತಿದ್ದ ಕಾರಿಗೆ ಲಾರಿಯಿಂದ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನಿಸಲಾಯಿತು. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಸಂತ್ರಸ್ತೆಗೆ ಭದ್ರತೆ, ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿತು. ಅಲ್ಲದೇ, ಪ್ರಕರವನ್ನು ಉತ್ತರ ಪ್ರದೇಶ ಸಿಬಿಐ ನ್ಯಾಯಾಲಯದಿಂದ ದೆಹಲಿ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿತು. ಜೊತೆಗೆ ಪ್ರಮುಖ ಆರೋಪಿ ಕುಲದೀಪ್, ಸಹ ಆರೋಪಿ ಶಶಿ ಸಿಂಗ್ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

    ಇದಾದ ಕೆಲ ತಿಂಗಳುಗಳ ನಂತರ ವಿಚಾರಣೆಗೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಕೊನೆಗೆ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ ಬದುಕಿನುದ್ದಕ್ಕೂ ನ್ಯಾಯಕ್ಕಾಗಿ ಹೋರಾಟ ನಡೆಸಿ ದುರುಳರ ಕ್ರೋಧಕ್ಕೆ ಬಲಿಯಾಗಿದ್ದಾಳೆ.

 

%d bloggers like this: