You cannot copy content of this page.
. . .

    ಅರ್ಧ ಗಂಟೆ ಸಂತೆ.. ಅರ್ಧ ಗಂಟೆ ವ್ಯಾಪಾರ.. ಅರ್ಧ ಗಂಟೆ ಚೌಕಾಸಿ.. ಅರ್ಧ ಗಂಟೆ ಗಜಿಬಿಜಿ.. ಎಲ್ಲವೂ ಆ ಅರ್ಧ ಗಂಟೆಯಲ್ಲೇ ನಡೆದುಬಿಡುತ್ತೆ.. ಇದು ರಾಜ್ಯದಲ್ಲೇ ವಿಶೇಷವೆನಿಸುವ ಸಂತೆಯೊಂದು ಸ್ಪೆಷಾಲಿಟಿ.. ಬರೀ ವೀಳ್ಯದೆಲೆ ಮಾತ್ರ ವ್ಯಾಪಾರ ಮಾಡುವ ರಾಜ್ಯದ ಏಕೈಕ ಸಂತೆ ಇದು.. ಎಲ್ಲಾ ಸಂತೆಗಳೂ ವಾರಕ್ಕೊಮ್ಮೆ ನಡೆದರೆ, ಇಲ್ಲಿ ಪ್ರತಿದಿನವೂ ನಡೆಯುತ್ತೆ ಸಂತೆ.. ಅರ್ಧ ತಾಸಲ್ಲೇ ಮುಗಿಯೂ ಸಂತೆಯಲ್ಲಿ ನೂರಾರು ಜನ ಸೇರ್ತಾರೆ.. ಸಾವಿರಾರು ರೂಪಾಯಿ ವಹಿವಾಟು ನಡೆಯುತ್ತೆ..

    ಮೈಸೂರು ನಗರದಿಂದ ಕೇವಲ 10 ಕಿಲೋ ಮೀಟರ್‍ ದೂರದಲ್ಲಿರುವ ಉದ್ಬೂರು ಗ್ರಾಮದಲ್ಲೇ ನಡೆಯೋದು ಈ ವಿಶೇಷವಾದ ವೀಳದೆಲೆ ಸಂತೆ..!. ಸಂಜೆ 4 ಗಂಟೆ ಆದರೆ ಸಾಕು ಉದ್ಬೂರು ಗ್ರಾಮದ ಬಸ್‍ ನಿಲ್ದಾಣದ ಎದುರೇ ಇರುವ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ವೀಳ್ಯದೆಲೆ ಸಂತೆ ಗಿಜಿಗುಡೋದಕ್ಕೆ ಶುರು ಮಾಡುತ್ತದೆ.4.30 ಗಂಟೆಯಾಗುವಷ್ಟರಲ್ಲಿ ಎಲ್ಲಾ ವ್ಯಾಪಾರ ವ್ಯವಹಾರ ಬಂದ್‍.. ಮತ್ತೇನಿದ್ದರೂ ರೈತರಿಗೆ ಹಣ ಎಣಿಸಿಕೊಳ್ಳುವ ಕೆಲಸ, ವ್ಯಾಪಾರಿಗಳಿಗೆ ಖರೀದಿ ಮಾಡಿದ ವೀಳ್ಯದೆಲೆಯನ್ನು ಸಾಗಿಸುವ ಉಸಾಬರಿ.. ಹೊತ್ತು ಮುಳುಗೋ ಸಮಯದಲ್ಲಿ ನಡೆಯೋ ಈ ಸಂತೆ ಇಡೀ ಉದ್ಬೂರು ಗ್ರಾಮಕ್ಕೇ ಕಳೆ ತಂದು ಕೊಟ್ಟಿದೆ.. ಬೇರೆ ಸಮಯದಲ್ಲಿ ಸಾಮಾನ್ಯ ಹಳ್ಳಿಯಂತೆ ಗೋಚರಿಸುವ ಉದ್ಬೂರು, ಸಂಜೆ 4 ರಿಂದ 6 ಗಂಟೆ ಸಮಯದಲ್ಲಿ ವಾಣಿಜ್ಯ ಕೇಂದ್ರವಾಗಿ ಮಾರ್ಪಾಟಾಗಿರುತ್ತದೆ.. ಈ ದೃಶ‍್ಯವನ್ನು ಕಣ್ತುಂಬಿಕೊಳ್ಳುವುದೇ ಒಂದು ವೈಭವ..!

  ಉದ್ಬೂರು ಸುತ್ತಮುತ್ತಲಿನ ಗ್ರಾಮಗಳಾದ ಟಿ.ಕಾಟೂರು, ಕಳಲೆ, ಮಾರ್ಬಳ್ಳಿ, ಗುಮಚನಹಳ್ಳಿ ಹೀಗೆ ಹಲವಾರು ಗ್ರಾಮಗಳ ರೈತರು ಹೆಚ್ಚಾಗಿ ಮೈಸೂರು ವೀಳ್ಯದೆಲೆ ಬೆಳೆಯುತ್ತಾರೆ. ಬಿಳಿ ಎಲೆ, ಮಧ್ಯಮ ಎಲೆ, ಕಡು ಹಸಿರು ಬಣ್ಣ ಹೀಗೆ ಮೂರು ರೀತಿಯಾಗಿ ಎಲೆಗಳನ್ನು ವಿಂಗಡಿಸಿ ರೈತರು ಇಲ್ಲಿನ ಸಂತೆಗೆ ತರುತ್ತಾರೆ. ಮೈಸೂರು ವೀಳ್ಯದೆಲೆಗೆ ಕರ್ನಾಟಕವಲ್ಲದೆ, ಹೊರರಾಜ್ಯಗಳಲ್ಲೂ ಭಾರೀ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ದಿನವೂ ಇಲ್ಲಿಗೆ ಬಂದು ರೈತರಿಂದ ವೀಳ್ಯದೆಲೆಯನ್ನು ಖರೀದಿ ಮಾಡಿಕೊಂಡು ಹೋಗುತ್ತಾರೆ.

    ಇಲ್ಲಿ ಸಿಗುವ ವೀಳ್ಯದೆಲೆ ಬೆಳೆಯಲು ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಸಂಪೂರ್ಣ ಸಾವಯನ ಗೊಬ್ಬರ ಬಳಸಿ ಬೆಳೆಯುವುದರಿಂದ ಇದರ ರುಚಿ ಹೆಚ್ಚು. ರೈತರು ಮಾರುಕಟ್ಟೆಗೆ ತರುವ ಮುನ್ನ ಎಲೆಗಳನ್ನು ಪಿಂಡಿ ಕಟ್ಟಿ ನೀರಿನಲ್ಲಿ ಅದ್ದಿ ಕೆಲವು ನಿಮಿಷಗಳ ಕಾಲ ಬಿಡಲಾಗುತ್ತದೆ. ಹೀಗೆ ಮಾರುಕಟ್ಟೆಗೆ ಬರುವ ಎಲೆ ತಾಜಾ ಆಗಿರುತ್ತದೆ. ಬೇರೆ ಕಡೆ ಹೋಗಿ ಈ ಎಲೆಗಳನ್ನು ಮಾರುವವರು, ಇವರ ಬಳಿ ಕೊಂಡು ಮತ್ತೊಬ್ಬ ವ್ಯಾಪಾರಿಗೆ ಇದನ್ನು ಮಾರುತ್ತಾರೆ.. ಹೀಗೆ ಬೇರೆ ಬೇರೆಯವರು ಬಂದು ಇಲ್ಲಿ ಎಲೆ ಕೊಳ್ಳುತ್ತಾರೆ. ಕೌಳಿಗೆ ಲೆಕ್ಕದಲ್ಲಿ ಮಾತ್ರ ವೀಳ್ಯದೆಲೆ ಕೊಂಡು ರೂಢಿಯಿರುವವರಿಗೆ ಪಿಂಡಿಗಟ್ಟಲೆ ವೀಳ್ಯದೆಲೆಯನ್ನು ಮಾರುವ ಈ ಮಾರುಕಟ್ಟೆ ವಿಶಿಷ್ಟವಾಗಿ ಕಾಣುತ್ತದೆ. ಜೊತೆಗೆ ಮೈಸೂರು ಭಾಗದ ವೀಳ್ಯದೆಲೆ ರೈತರಿಗೆ ಪ್ರಮುಖ ವೇದಿಕೆಯಾಗಿ ನಿಲ್ಲುತ್ತದೆ.

   ನೀವು ಅಂಗಡಿಗೆ ಹೋದರೆ ಮೊದಲೇ ದರ ನಿಗದಿಯಾಗಿರುತ್ತದೆ. ಆದರೆ ಇಲ್ಲಿ ವಿಭಿನ್ನ. ರೈತರು ಮಾರುಕಟ್ಟೆಗೆ ಬರುವ ತನಕ ಅವರಿಗೇ ಎಷ್ಟು ಬೆಲೆ ನಿಗದಿ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಈ ಸಂತೆಗೆ ಎಷ್ಟು ವೀಳ್ಯದೆಲೆ ಬಂದಿದೆ..?, ವ್ಯಾಪಾರಿಗಳು ಎಷ್ಟು ಜನ ಬಂದಿದ್ದಾರೆ..?, ಆ ದಿನ ವೀಳ್ಯದೆಲೆಗೆ ಎಷ್ಟು ಬೇಡಿಕೆ ಇದೆ..? ಎಂಬುದರ ಮೇಲೆ ದರ ನಿಗದಿಯಾಗುತ್ತದೆ. ಹಲವಾರು ದಶಕಗಳಿಂದ ಈ ಸಂತೆ ನಡೆಯುತ್ತಿದ್ದು, ೬ ವರ್ಷಗಳ ಹಿಂದೆ ತಾ.ಪಂ.ಸದಸ್ಯ ಮಹದೇವ್ ಈ ಆವರಣಕ್ಕೆ ಛಾವಣಿ ನಿರ್ಮಿಸಿಕೊಟ್ಟಿದ್ದಾರೆ.
– ಸಿರಿ ಮೈಸೂರು

 

%d bloggers like this: