You cannot copy content of this page.
. . .

ಆದಿವಾಸಿ ಕುಟುಂಬಗಳಿಗೆ ವಿತಣೆಯಾಗದ ಆಹಾರ ಸಾಮಗ್ರಿ

 -ಬಿ.ಎನ್.ಧನಂಜಯಗೌಡ

 ಮೈಸೂರು: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಆದಿವಾಸಿಗಳಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ (ಪಿಡಿಎಸ್) ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ. ಆದರೆ, ಎಚ್.ಡಿ.ಕೋಟೆಯಲ್ಲಿ ಇರುವ ಆದಿವಾಸಿ ಕುಟುಂಬಗಳಿಗೆ ೩ ತಿಂಗಳಿಂದ ಆಹಾರ ಸಾಮಗ್ರಿಗಳು ದೊರೆತ್ತಿಲ್ಲ. ಇದರಿಂದಾಗಿ, ಇಲ್ಲಿನ ಜನರು ಮೂರು ತಿಂಗಳಿಂದ ದುಸ್ತರ ಜೀವನ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ.

 ಹೌದು..ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯ ಬುಡಕಟ್ಟು ಜನರು ಇರುವುದು ಎಚ್.ಡಿ.ಕೋಟೆ ತಾಲೂಕಿನಲ್ಲಿ ಸುಮಾರು ೧೨೦ ಹೆಚ್ಚು ಹಾಡಿಗಳು ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರೂ, ಅವು ತಲುಪುದು ಮಾತ್ರ ತೀರಾ ತಡವಾಗುತ್ತಿದೆ. ಅಲ್ಲದೇ, ಬುಡಕಟ್ಟು ಜನರು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಆಧುನಿಕ ಸಮಾಜದೊಂದಿಗೆ ಒಡನಾಟ ಹೊಂದಿರುವುದು ತೀರಾ ವಿರಳ. ಹೀಗಿರುವಾಗ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಇವರಿಗೆ ಈ ಕೂಲಿಯೂ ಇಲ್ಲ. ಸರಿಯಾದ ಪೌಷ್ಠಿಕ ಆಹಾರವು ಇಲ್ಲ.

 ಕೂಲಿಯೂ ಇಲ್ಲ, ಆಹಾರವೂ ಇಲ್ಲ : ಇಲ್ಲಿನ ಬಹುತೇಕ ಹಾಡಿಗಳಾದ ಬಾವುಲಿ, ಬಳ್ಳೆ, ಹೊಸಹಳ್ಳಿ,ಜಾಗನಕೋಟೆ, ಕೆಂಪನಹಾಡಿ, ಭೀಮನಕೆರೆ ಹಾಡಿ, ಭೀಮನಕಟ್ಟೆ ಹಾಡಿ, ಆಲನಹಳ್ಳಿ ಹಾಡಿ ಇದೇ ಮುಂತಾದ ಹಾಡಿಗಳ ಜನರು ಕೂಲಿ ಕಾರ್ಮಿಕರಾಗಿದ್ದಾರೆ. ಹೆಚ್ಚು ಅನಕ್ಷರಸ್ಥರಾಗಿರುವ ಬುಡಕಟ್ಟು ಜನರು ತಮ್ಮ ಮಕ್ಕಳನ್ನು ಆಶ್ರಮ ಶಾಲೆಗಳಿಗೆ ಸೇರಿಸಿ. ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪ, ಕುಟ್ಟಾ ಇದೇ ಮುಂತಾದ ಕಡೆಗೆ ಕಾಫಿ ಕೆಲಸಕ್ಕೆ ಹೋಗುತ್ತಾರೆ. ಈ ಬಾರಿ ಜೂನ್ ಮತ್ತು ಆಗಸ್ಟ್‌ನಲ್ಲಿ ಹೆಚ್ಚು ಮಳೆಯಾದ ಕಾರಣ ಕೊಡಗಿನಲ್ಲಿ ಕಾಫಿಕೊಯ್ಲು ಕಡಿಮೆಯಾಗಿದೆ. ಹಾಗಾಗಿ, ಕೂಲಿ ಇಲ್ಲದ ಸ್ಥಿತಿಯಲ್ಲಿ ಬದುಕುತ್ತಿರುವ ಹಾಡಿ ಜನರಿಗೆ ಈಗ ಸರ್ಕಾರದಿಂದ ಸಿಗಬಹುದಾದ ಆಹಾರ ಆಹಾರ ಪದಾರ್ಥವು ಸಿಗದಾಗಿದೆ.

 ಏನಿದು ಐಟಿಡಿಪಿ: ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ ಮೂಲಸೌಕರ್ಯ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಆದಾಯ ಉತ್ಪಾದಿಸುವ ಯೋಜನೆಗಳ ಮೂಲಕ ಬುಡಕಟ್ಟು ಸಮುದಾಯಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮತ್ತು ಶೋಷಣೆ ವಿರುದ್ಧ ಬುಡಕಟ್ಟು ಸಮುದಾಯಗಳ ರಕ್ಷಣೆ ಮಾಡುವುದಾಗಿದೆ.

 ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮತ್ತು ರಕ್ಷಣೆಗೆ ಕೆಲಸ ಮಾಡುತ್ತದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಕಾಡಿನ ಮೂಲದ ಆದಿವಾಸಿಗಳು ಸೇರುತ್ತಾರೆ ಉದಾ : ಜೇನುಕುರುಬ, ಕಾಡು ಕುರುಬ, ಸೋಲಿಗ (ನಾಯಕ ಸಮುದಾಯವನ್ನು ಹೊರತುಪಡಿಸಿ) ಸೇರುತ್ತಾರೆ. ಇವರಿಗೆ ಪೌಷ್ಟಿಕ ಆಹಾರ ಧಾನ್ಯಗಳನ್ನು ಒದಗಿಸುವುದು, ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದಾಗಿದೆ.

 ಈ ಯೋಜನೆಯಡಿಯಲ್ಲಿ ಬುಡಕಟ್ಟು ಜನರಿಗೆ ಕುಟುಂಬದಲ್ಲಿ ಇರುವ ಜನಸಂಖ್ಯೆಯ ಆಧಾರದ ಮೇಲೆ ಒಂದು ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳಾದ ಅಕ್ಕಿ, ರಾಗಿ, ಮೊಟ್ಟೆ, ಅಡುಗೆ ಎಣ್ಣೆ, ಉಪ್ಪು ಮತ್ತು ಸಾಂಬಾರು ಪದಾರ್ಥಗಳನ್ನು ಪಿಡಿಎಸ್ ಮೂಲಕ ವಿತರಿಸಲಾಗುತ್ತದೆ. ಆದರೆ, ಎಚ್.ಡಿ.ಕೋಟೆ ತಾಲೂಕಿನ ಬುಡಕಟ್ಟು ಸಮುದಾಯದವರಿಗೆ ಮೂರು ತಿಂಗಳಿಂದ ಈ ಯಾವ ಪದಾರ್ಥವೂ ದೊರೆತಿಲ್ಲ. ಇನ್ನು ಅವರೇ ಸ್ವಂತ ಹಣದಲ್ಲಿ ಪದಾರ್ಥಗಳನ್ನು ಖರೀದಿಸುವಷ್ಟು ಸ್ಥಿತಿವಂತರಾಗಿಲ್ಲ. ಹಾಗಾಗಿ, ಅಪೌಷ್ಠಿಕತೆಯಿಂದ ಸರಿಯಾದ ಆಹಾರ ಇಲ್ಲದೆ ಬಳಲುತ್ತಿದ್ದಾರೆ.

 ಹಲವು ಬಾರಿ ಪ್ರತಿಭಟನೆ : ಶೀಘ್ರವಾಗಿ ಆಹಾರ ಸಾಮಗ್ರಿಗಳನ್ನು ಒದಗಿಸುವಂತೆ ಒತ್ತಾಯಿಸಿ ಬುಡಕಟ್ಟು ಸಮುದಾಯದವರು ತಾಲೂಕು ಕಚೇರಿ ಮುಂದೆ ಒಂದೆರಡು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಟೆಂಡರ್ ಸಮಸ್ಯೆಯಾಗಿದೆ. ಈ ವಾರ ಬರುತ್ತದೆ, ಮುಂದಿನ ವಾರ ಬರುತ್ತದೆ ಎಂದು ಹೇಳುತ್ತಾರೆ ಎಂಬುದು ಬುಡಕಟ್ಟು ಜನರ ಆರೋಪ.

 ‘ಟೆಂಡರ್ ಸಮಸ್ಯೆಯಿಂದಾಗಿ ಬುಡಕಟ್ಟು ಸಮುದಾಯದವರಿಗೆ ಐಟಿಡಿಪಿ ಯೋಜನೆಯಡಿ ವಿತರಿಸಬೇಕಾದ ಆಹಾರವನ್ನು ವಿತರಿಸಲು ಸಾಧ್ಯವಾಗಿರಲಿಲ್ಲ. ಈಗ ಟೆಂಡರ್ ಸಮಸ್ಯೆ ಬಗೆಹರಿದಿದೆ. ಮುಂದಿನ ವಾರದಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗಲಿದ್ದು, ಅದನ್ನು ತಕ್ಷಣ ವಿತರಿಸುವ ಕೆಲಸವಾಗಲಿದೆ.’
– ಪ್ರಕಾಶ್, ಯೋಜನೆ ಸಮನ್ವಯಾಧಿಕಾರಿ, ಐಟಿಡಿಪಿ 

 

 

%d bloggers like this: