You cannot copy content of this page.
. . .

   ರಾಮಸ್ವಾಮಿ ಸರ್ಕಲ್. ಮೈಸೂರಿನ ಪ್ರಮುಖ ವೃತ್ತಗಳಲ್ಲೊಂದು. ನಗರದ ಬಹುತೇಕ ಭಾಗಗಳಿಗೆ ಹೋಗಬೇಕೆಂದರೆ ಈ ಸರ್ಕಲ್ ಮೂಲಕವೇ ಹಾದುಹೋಗಬೇಕು. ಹೀಗಾಗಿ ರಾಮಸ್ವಾಮಿ ಸರ್ಕಲ್ ಎಲ್ಲರಿಗೂ ಚಿರಪರಿಚಿತ. ಆದ್ರೆ ರಾಮಸ್ವಾಮಿ ಬಗ್ಗೆಯೇ ಹೆಚ್ಚು ಜನಕ್ಕೆ ಗೊತ್ತಿಲ್ಲ. ದಶಕಗಳಿಂದ ಈ ಸರ್ಕಲ್‍ನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೂ ರಾಮಸ್ವಾಮಿ ಬಗ್ಗೆ ಅರಿವಿಲ್ಲ. ಹಾಗಾದರೆ ಈ ರಾಮಸ್ವಾಮಿ ಯಾರು..? ಈ ಸರ್ಕಲ್‍ಗೆ ಯಾಕೆ ಆ ಹೆಸರಿಟ್ಟರು..? ಅನ್ನೋದೇ ಕುತೂಹಲದ ಸಂಗತಿ.

   ನಾಲ್ಕು ದಶಕಗಳ ಹಿಂದಿನ ತನಕ ಈ ಸರ್ಕಲ್‍ನ್ನು ಫೈವ್‍ ಲೈಟ್‍ ಸರ್ಕಲ್ ಅಂತ ಕರೆಯಲಾಗುತ್ತಿತ್ತು. 1980ರಲ್ಲಿ ಇದಕ್ಕೆ ರಾಮಸ್ವಾಮಿ ಸರ್ಕಲ್ ಅಂತ ನಾಮಕರಣವಾಯಿತು. ಈ ರಾಮಸ್ವಾಮಿ ಯಾವುದೋ ಗಣ್ಯ ವ್ಯಕ್ತಿ ಅಲ್ಲ. ಮೈಸೂರು ಅರಸರ ಒಡನಾಡಿಯೂ ಅಲ್ಲ. ಒಬ್ಬ ಸಾಮಾನ್ಯ ವಿದ್ಯಾರ್ಥಿ. ಪೊಲೀಸ್ ಅಧಿಕಾರಿಯ ಗುಂಡೇಟಿಗೆ ಬಲಿಯಾದ 8ನೇ ತರಗತಿಯ ಬಾಲಕ.

   ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಬಂದಿತ್ತು. ದೇಶದೆಲ್ಲೆಡೆ ಸಂಭ್ರಮಾಚರಣೆಗಳು ಮೊಳಗುತ್ತಿದ್ದವು. ಆದರೆ ಕೆಲ ಪ್ರಾಂತ್ಯಗಳು ಸ್ವತಂತ್ರ ಭಾರತದಲ್ಲಿ ಸೇರಿರಲಿಲ್ಲ. ಮೈಸೂರು ಪ್ರಾಂತ್ಯವನ್ನೂ ಸಹಾ ಮೊದಲಿಗೆ ಸ್ವತಂತ್ರ ಭಾರತದಲ್ಲಿ ವಿಲೀನ ಮಾಡಿರಲಿಲ್ಲ. ಈ ಕಾರಣಕ್ಕಾಗಿ ಮೈಸೂರಿನಲ್ಲಿ ಹೋರಾಟ ಶುರುವಾಗುತ್ತದೆ. 

ಅದು 1947 ಸೆಪ್ಟೆಂಬರ್ 13ನೇ ತಾರೀಖು. ಸ್ವಾತಂತ್ರ ಭಾರತದೊಳಗೆ ಮೈಸೂರು ಪ್ರಾಂತ್ಯವನ್ನು ಸೇರಿಸಬೇಕೆಂದು ದೊಡ್ಡ ಹೋರಾಟ ನಡೆದಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಹೋರಾಟಗಾರರು ಆಗಮಿಸಿದ್ದರು. ಮೈಸೂರಿನ ವಿವಿಧ ಭಾಗಗಳಿಂದ ಪ್ರತಿಭಟನಾ ಮೆರವಣಿಗೆಗಳು ಶುರುವಾಗಿದ್ದವು. ಅದೇ ರೀತಿಯ ಮಹಾರಾಜ ಕಾಲೇಜು ಮುಂಭಾಗದಿಂದಲೂ ಬೃಹತ್‍ ಮೆರವಣಿಗೆ ಹೊರಟಿತ್ತು. ಈ ಮೆರವಣಿಗೆಯಲ್ಲಿ ಮೆಥಡಿಸ್ಟ್ ಶಾಲೆ (ಈಗಿನ ಹಾರ್ಡ್ವಿಕ್ ಶಾಲೆ) ಯ 8ನೇ ತರಗತಿ ವಿದ್ಯಾರ್ಥಿ ರಾಮಸ್ವಾಮಿ ಕೂಡಾ ಪಾಲ್ಗೊಂಡಿದ್ದರು. ಮೆರವಣಿಗೆ ಫೈವ್‍ ಲೈಟ್‍ ಸರ್ಕಲ್ ಬಳಿ ಬರುತ್ತಿದ್ದಂತೆ ಪ್ರತಿಭಟನೆ ತೀವ್ರವಾಯಿತು. ಕೆಲ ಪ್ರತಿಭಟನಾಕಾರರು ಹಿಂಸಾಚಾರಕ್ಕಿಳಿದರು. ಆಗ ಡೆಪ್ಯೂಟಿ ಕಮಿಷನರ್‍ ಆಗಿದ್ದ ನಾಗರಾಜ ರಾವ್‍ ಎಂಬುವವರು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದರು. ಆ ಗುಂಡು ತಗುಲಿದ್ದರಿಂದ ವಿದ್ಯಾರ್ಥಿ ರಾಮಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರು.

ರಾಮಸ್ವಾಮಿ ಹಾಸನ ಜಿಲ್ಲೆಯ ಬಾಣಾವರ ಗ್ರಾಮದವರು. ಮೈಸೂರಿನ ಹಳ್ಳದಕೇರಿಯಲ್ಲಿದ್ದ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದು ಓದುತ್ತಿದ್ದರು. ಅಂದು ಪ್ರತಿಭಟನೆಯಲ್ಲಿ ಬಹುತೇಕರು ಯುವಕರೇ ಪಾಲ್ಗೊಂಡಿದ್ದರಿಂದ ರಾಮಸ್ವಾಮಿ ಕೂಡಾ ಆಕರ್ಷಿತರಾಗಿ ಪ್ರತಿಭಟನೆಗೆ ಬಂದಿದ್ದರು. ಹೀಗಾಗಿ ರಾಮಸ್ವಾಮಿ ಬಲಿಯಾದ ಸ್ಥಳಕ್ಕೆ ರಾಮಸ್ವಾಮಿ ಸರ್ಕಲ್ ಎಂದು ನಾಮಕರಣ ಮಾಡಬೇಕು ಅಂತ ಕನ್ನಡ ಹೋರಾಟಗಾರರ ನಾ ನಾಗಲಿಂಗಸ್ವಾಮಿ ಆಗ್ರಹಿಸುತ್ತಾ ಬಂದರು. ಕೊನೆಗೆ 1980ರಲ್ಲಿ ಮೈಸೂರು ಪಾಲಿಕೆ ಈ ಸ್ಥಳಕ್ಕೆ ರಾಮಸ್ವಾಮಿ ಸರ್ಕಲ್ ಎಂದು ನಾಮಕರಣ ಮಾಡಿತು.

ಈ ಸಮಾರಂಭಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್.ಜೋಯಿಸ್ ಮುಖ್ಯ ಅತಿಥಿಯಾಗಿದ್ದರು. ಆಗ ರಾಮಸ್ವಾಮಿಯವರ ಚಿಕ್ಕಮ್ಮರನ್ನೂ ಸನ್ಮಾನಿಸಲಾಯಿತು. ಸರ್ಕಲ್‍ನಲ್ಲಿ ರಾಮಸ್ವಾಮಿಯವರ ವಿವರವಿರುವ ಫಲಕವನ್ನೂ ಅಳವಡಿಸಲಾಯಿತು. ಆದರೆ ಹಳೆಯ ಫಲಕ ಹಾಳಾಗಿದ್ದರಿಂದಾಗಿ ಈಗ ಹೊಸ ಫಲಕ ಅಳವಡಿಸಲಾಗಿದೆ. ಈ ಫಲಕದಲ್ಲಿ ಬಾಣಾವರದ ರಾಮಸ್ವಾಮಿ ಬಿನ್‍ ತಿಮ್ಮಯ್ಯ, ಹುಟ್ಟಿದ ದಿನಾಂಕ 13/09/1930 ಹಾಗೂ ನಿಧನ 13/09/1947 ಎಂದು ಬರೆಯಲಾಗಿದೆ. ಇದರ ಜೊತೆಗೆ ಸಿಂಹ, ನವಿಲು ಹಾಗೂ ಹೂವಿನ ಚಿತ್ರಗಳನ್ನೂ ಬಿಡಿಸಲಾಗಿದೆ.

 

%d bloggers like this: