You cannot copy content of this page.
. . .

 ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ. ಮಕ್ಕಳ ನಿರ್ಲಕ್ಷ್ಯದಿಂದ ಎಲ್ಲೆಡೆ ವೃದ್ಧಾಶ್ರಮಗಳೂ ಹೆಚ್ಚುತ್ತಿದ್ದು, ದೈಹಿಕ ಹಲ್ಲೆಗಳೂ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

 ಪೋಷಕರು ಅಥವಾ ಹಿರಿಯ ನಾಗರಿಕರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷಿಸಿದರೆ, ದೈಹಿಕ ಹಲ್ಲೆ ಮಾಡಿದರೆ ಅಂಥವರು ಇನ್ನು ಮುಂದೆ 6 ತಿಂಗಳು ಜೈಲು, 10 ಸಾವಿರ ದಂಡ ಅಥವಾ ಈ ಎರಡು ಶಿಕ್ಷೆಗಳಿಗೆ ಗುರಿಯಾಗುತ್ತಾರೆ.

 ಕೇಂದ್ರ ಸರ್ಕಾರ ಹಿರಿಯ ನಾಗರಿಕರ ರಕ್ಷಣೆಗಾಗಿ 2007ರ ಹಿರಿಯ ನಾಗರಿಕರ ಮಸೂದೆಗೆ ತಿದ್ದುಪಡಿ ತಂದಿದೆ. ಪೋಷಕರು ಹಾಗೂ ಹಿರಿಯ ನಾಗರಿಕರನ್ನು ಪೋಷಿಸುವ, ವೃದ್ಧಾಶ್ರಮಗಳ ನೋಂದಣಿ, ಕಾರ್ಯನಿರ್ವಹಣೆಯಲ್ಲಿ ಏಕರೂಪತೆ ತರುವ ಮತ್ತು ಲಭ್ಯವಿರಬೇಕಾದ ಕನಿಷ್ಠ ಸೌಲಭ್ಯಗಳನ್ನು ನಿಗದಿಪಡಿಸುವ ‘ಪೋಷಕರು ಅಥವಾ ಹಿರಿಯ ನಾಗರಿಕರ ಕಲ್ಯಾಣ (ತಿದ್ದುಪಡಿ) ಮಸೂದೆ 2019’ ಅನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ ಚಂದ್‌ ಗೆಹ್ಲೋಟ್‌ ಲೋಕಸಭೆಯಲ್ಲಿ ಬುಧವಾರ ಮಂಡಿಸಿದರು. 

 ಪೋಷಕರು ಅಥವಾ ಹಿರಿಯ ನಾಗರಿಕರಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುವುದು, ಅಗತ್ಯ  ಸೌಕರ್ಯಗಳನ್ನು ನೀಡದಿರುವುದು ಕೂಡ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ತಿದ್ದುಪಡಿ ಮಸೂದೆಯಲ್ಲಿ ಹೇಳಲಾಗಿದೆ. ಸರಿಯಾಗಿ ನೋಡಿಕೊಳ್ಳದಿರುವ ಪೋಷಕರ ಅಥವಾ ಹಿರಿಯ ನಾಗರಿಕರ ಮಗ, ಮಗಳು ಅಥವಾ ದತ್ತು ಪುತ್ರ, ದತ್ತು ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಶಿಕ್ಷೆಗೆ ಗುರಿಪಡಿಸಲಾಗುವುದು. 

 ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕಾನೂನು ಬಲ ನೀಡಲಾಗಿದೆ. ದೇಶದ ಪ್ರತಿ ಪೊಲೀಸ್‌ ಠಾಣೆಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಶ್ರೇಣಿಯ ಒಬ್ಬರು ನೋಡಲ್‌ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ. ಇವರು ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದ ವಿಶೇಷ ಪೊಲೀಸ್‌ ಘಟಕವನ್ನು ರಚಿಸಲಾಗುತ್ತದೆ. ಈ ಘಟಕದ ನೇತೃತ್ವವನ್ನು ಡಿಎಸ್‌ಪಿ ಶ್ರೇಣಿಯ ಪೊಲೀಸ್‌ ಅಧಿಕಾರಿ ವಹಿಸಿಕೊಳ್ಳುತ್ತಾರೆ. 

 ಹಿರಿಯ ನಾಗರಿಕರ ಯೋಗಕ್ಷೇಮ, ಸಮಸ್ಯೆಗಳ ಪರಿಹಾರ ಮತ್ತು ಸಲಹೆಗಳಿಗಾಗಿ ನ್ಯಾಯಾಧೀಕರಣ ಸ್ಥಾಪನೆ ಮಾಡಲಾಗುತ್ತದೆ. 80 ವರ್ಷ ಮೇಲ್ಪಟ್ಟವರು ಸಲ್ಲಿಸಿದ ಅರ್ಜಿಗಳನ್ನು 60 ದಿನಗಳ ಒಳಗಾಗಿ ಇತ್ಯರ್ಥಪಡಿಸಬೇಕು. ರಾಜ್ಯ ಸರ್ಕಾರಗಳು ನಿರ್ವಹಣಾ ಅಧಿಕಾರಿಯನ್ನು ನೇಮಿಸಬೇಕು. ಅವರು ಪೋಷಕರು ಅಥವಾ ಹಿರಿಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಮಸೂದೆಯಲ್ಲಿ ಪೋಷಕರು ಅಥವಾ ಹಿರಿಯ ನಾಗರಿಕರು ಎಂದರೆ ತಂದೆ, ತಾಯಿ, ಅತ್ತೆ, ಮಾವ, ತಾತ, ಅಜ್ಜಿ ಎಂದು ವ್ಯಾಖ್ಯಾನಿಸಲಾಗಿದೆ. ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗಿದೆ. ಇನ್ನು ಚರ್ಚೆಯಾಗಿಲ್ಲ, ಉಭಯ ಸದನಗಳಲ್ಲಿ ಅಂಗೀಕಾರವಾದರೆ ಮಾತ್ರ ಮಸೂದೆ ಜಾರಿಗೆ ಬರಲಿದೆ.

 

%d bloggers like this: