You cannot copy content of this page.
. . .

ಸ್ವಚ್ಛತೆಗೆ ಇಂಧೋರ್ ಜನರ 7 ಹವ್ಯಾಸಗಳು, 4 ಸೂತ್ರಗಳು..!

  ಕಳೆದ 3 ವರ್ಷಗಳಿಂದ ಇಂಧೋರ್‍ ನಗರ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಯಾಕಂದ್ರೆ ಇಂಧೋರ್ ಸ್ವಚ್ಛವಾಗಿಟ್ಟುಕೊಳ್ಳಲು ಅಲ್ಲಿನ ಜನರು 7 ಪ್ರಮುಖ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ 4 ಸೂತ್ರಗಳನ್ನು ಅನುಸರಿಸಿಕೊಂಡಿದ್ದಾರೆ. ಇದನ್ನು ಮೈಸೂರಿನ ಜನರೂ ಅನುಸರಿಸಿದರೆ ನಮ್ಮ ನಗರವೂ ಸ್ವಚ್ಛವಾಗುವುದರಲ್ಲಿ ಅನುಮಾನವಿಲ್ಲ.

1. ಪ್ರತಿದಿನ ನಡೆಯುತ್ತದೆ ಕಸ ವಿಲೇವಾರಿ:
  ಮುಂಚೆ ನಗರಪಾಲಿಕೆ ರಸ್ತೆಯಲ್ಲಿ ಕಸದ ಬುಟ್ಟಿಗಳನ್ನಿಟ್ಟು ಅದರಲ್ಲಿ ಕಸ ಹಾಕಲು ಜನರಿಗೆ ಹೇಳಿತ್ತು. ಆ ಪ್ರಯತ್ನ ಫಲಕಾರಿಯಾಗದ ಕಾರಣ ಜನರು ತಮ್ಮ ಮನೆಯಲ್ಲೇ ಹಸಿ ಕಸ, ಒಣ ಕಸ ಬೇರ್ಪಡಿಸಿ ಪ್ರತಿದಿನ ಪೌರಕಾರ್ಮಿಕರಿಗೆ ಕೊಡಬೇಕು ಎಂದು ಆದೇಶಿಸಲಾಯಿತು. ಆಗಿನಿಂದ ಅಂದಿನ ಕಸ ಅಂದೇ ವಿಲೇವಾರಿಯಾಗುತ್ತದೆ.

2. ಕಸಕ್ಕೆ ಸಿಗುತ್ತದೆ ಗೊಬ್ಬರದ ರೂಪ:
  ಹಸಿ ಕಸವನ್ನು ಎಷ್ಟೋ ಜನ ಗೊಬ್ಬರವಾಗಿ ಪರಿವರ್ತಿಸಿ ಬಳಸಿಕೊಳ್ಳುತ್ತಾರೆ. ಅಲ್ಲಿನ ಲೋಕಮಾನ್ಯ ನಗರ ಎಂಬ ಸ್ಥಳದಲ್ಲಿ ಸುಮಾರು 75 ಕುಟುಂಬಗಳು ಇದೇ ವೃತ್ತಿಯಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗಿದೆ. ನಗರದಾದ್ಯಂತ ಅಂದಾಜು 700 ಗೊಬ್ಬರ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

3. ಪಾಲಿಥಿನ್ ಬಳಕೆ ನಿಷಿದ್ಧ:
  ಪಾಲಿಥಿನ್ ಬ್ಯಾಗ್‌ ಗಳನ್ನು ಬಳಕೆ ಮಾಡುವುದು ಪರಿಸರದ ಜೊತೆಗೆ ಸ್ವಚ್ಛತೆಗೂ ಮಾರಕ. ಆದ್ದರಿಂದ ಇಂಡೋರ್‌ನ ಜನರು ಪ್ಲಾಸ್ಟಿಕ್ ಬಳಸುವುದನ್ನು ಆದಷ್ಟೂ ಕಡಿಮೆ ಮಾಡಿದ್ದಾರೆ. ವರ್ತಕರು ಸಹ ಅನುಮತಿ ಇರುವಷ್ಟು ಮಾತ್ರ ಪಾಲಿಥಿನ್ ಬಳಸುತ್ತಾರೆ.

4. ವಾಹನದಲ್ಲೊಂದು ಕಸದ ಬುಟ್ಟಿ:
   ಜನರು ಸಿಕ್ಕಲ್ಲಿ ಕಸ ಹಾಕಬಾರದೆಂದು ತಮ್ಮ ಕಾರ್ ಒಳಗೊಂದು ಡಸ್ಟ್ ಬಿನ್ ಇರಿಸಿಕೊಂಡಿರುತ್ತಾರೆ. ಪಾನ್, ಗುಟ್ಕಾ ಜಗಿಯುವವರು ಸಹ ತಮ್ಮೊಂದಿಗೆ ಕಸದ ಬುಟ್ಟಿ ಕೊಂಡೊಯ್ಯುವ ಮೂಲಕ ಸ್ವಚ್ಛತೆ ಕಾಪಾಡುತ್ತಾರೆ.

5. ಮಕ್ಕಳಿಗೆ ಅರಿವು ಕಾರ್ಯಕ್ರಮ:
   ಮಕ್ಕಳಿಗೆ ಮನೆಯಲ್ಲಿ, ಶಾಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಸ್ವಚ್ಛತೆಯ ಬಗ್ಗೆ ಅತ್ಯಂತ ಆಸ್ಥೆಯಿಂದ ಅರಿವು ಮೂಡಿಸುತ್ತಾರೆ. ಇದರಿಂದಾಗಿ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿ ಅವರೇ ಹಿರಿಯರಿಗೆ ಸ್ವಚ್ಛತೆ ಬಗ್ಗೆ ಹೇಳಿಕೊಡುವಷ್ಟು ಪ್ರಬುದ್ಧರಾಗಿದ್ದಾರೆ.

6. ಸಮಾರಂಭಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ:
  ಮದುವೆ ಸಮಾರಂಭ, ಹಬ್ಬ, ಜಾತ್ರೆ ಏನೇ ಆದರೂ ಅದರಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತಾರೆ ಇಂಧೋರ್ ಜನರು. ಕಾರ್ಯಕ್ರಮ ಮುಗಿದ ತಕ್ಷಣ ಸ್ವಚ್ಛತೆ ಕಾರ್ಯ ನಡೆಯುತ್ತದೆ.

7. ಸಪ್ತಪದಿಯಲ್ಲಿ ಮತ್ತೊಂದು ಹೆಜ್ಜೆ!:
  ಸಾಂಪ್ರದಾಯಕ ಹಿಂದೂ ಮದುವೆಗಳಲ್ಲಿ ವಧುವರರು ಏಳು ಹೆಜ್ಜೆ ಜೊತೆಯಿಟ್ಟು ಏಳು ಪ್ರಮಾಣಗಳನ್ನು ಮಾಡುತ್ತಾರೆ. ಆದರೆ ಇಂಡೋರ್‌ನಲ್ಲಿ ಹೆಚ್ಚುವರಿಯಾಗಿ ಒಂದು ಪ್ರಮಾಣ ಮಾಡಲಾಗುತ್ತದೆ. ಅದು ಸ್ವಚ್ಛತೆಯ ಪ್ರತಿಜ್ಞೆ. ತಾವು ಸ್ವಚ್ಛತೆ ಕಾಪಾಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಮದುವೆಗಳಲ್ಲಿ ಬಂದ ಅತಿಥಿಗಳಿಗೆ ಡಸ್ಟ್ಬಿನ್‌ಗಳನ್ನು ವಿತರಿಸಲಾಗುತ್ತದೆ.
 
ಸ್ವಚ್ಛತೆಗೆ ನಾಲ್ಕು ಸೂತ್ರಗಳು:
  ಈ ಏಳು ಹವ್ಯಾಸಗಳೊಂದಿಗೆ ಇಂಧೋರ್ ಜನ ನಾಲ್ಕು ಸೂತ್ರಗಳನ್ನು ಅನುಸರಿಸುತ್ತಾರೆ. ಒಂದು, ರಸ್ತೆ ಬದಿಯಲ್ಲಿ ಕಸದ ಡ್ರಮ್‌ಗಳನ್ನು ಇಡುವ ಅಭ್ಯಾಸ ಇಂಡೋರ್‌ನಲ್ಲಿ ನಿಂತುಹೋಗಿದೆ. ನಾಯಿ ಮತ್ತಿತರ ಪ್ರಾಣಿಗಳು ಬಂದು ಅದರಿಂದ ಕಸ ಎಳೆದು ಗಲೀಜು ಮಾಡುತ್ತವೆ ಎಂಬ ಕಾರಣಕ್ಕೆ ಈ ನಿರ್ಧಾರ. ಜೊತೆಗೆ ಹಗಲು ಮಾತ್ರವಲ್ಲದೆ ಪೌರಕಾರ್ಮಿಕರು ರಾತ್ರಿಯೂ ಕೆಲಸ ಮಾಡುತ್ತಾರೆ. ಹಗಲಿಡೀ ತೆರೆದಿರುವ ಮಾರುಕಟ್ಟೆ, ಅಂಗಡಿಗಳ ಸ್ವಚ್ಛತೆಯನ್ನು ರಾತ್ರಿ ಹೊತ್ತು ಮಾಡಲಾಗುತ್ತದೆ. ದೇಶದ ಬೇರೆ ಭಾಗಗಳಲ್ಲಿ 1.8 ಕ್ಯುಬಿಕ್ ಮೀ. ಸಾಮರ್ಥ್ಯದ 300 ಮನೆಗಳ ಕಸ ಹೊರಬಹುದಾದ ವಾಹನ ಬಳಸಿದರೆ ಇಂಧೋರ್ 3.3 ಕ್ಯುಬಿಕ್ ಮೀ. ಸಾಮರ್ಥ್ಯದ 1000 ಮನೆಗಳ ಕಸ ಹೊರುವ ವಾಹನ ಬಳಸುತ್ತದೆ. ಸ್ವಚ್ಛತೆಗೆ ಮಕ್ಕಳನ್ನು ರಾಯಭಾರಿಗಳನ್ನಾಗಿ ಮಾಡಲಾಗುತ್ತದೆ. ಇದರಿಂದ ಮಕ್ಕಳಿಗೆ ಅರಿವು ಮೂಡುವುದಲ್ಲದೆ ಅವರು ಹಿರಿಯರನ್ನೂ ಸರಿದಾರಿಗೆ ತರುತ್ತಾರೆ.

 

%d bloggers like this: