You cannot copy content of this page.
. . .

ಡ್ರಾಪ್‍ ನೀಡುವುದಾಗಿ ಹೇಳಿ ಹಾಡಹಗಲೇ ಸುಲಿಗೆ ಮಾಡಿದ ದರೋಡೆಕೋರರು

 ಮೈಸೂರು: ಬೆಂಗಳೂರಿಗೆ ಡ್ರಾಪ್ ನೀಡುವುದಾಗಿ ಹೇಳಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರನ್ನು ಕಾರಿಗೆ ಹತ್ತಿಸಿಕೊಂಡ ಮೂವರು ದುಷ್ಕರ್ಮಿಗಳು ಅವರ ಬಳಿ ಇದ್ದ ಎಟಿಎಂ ಬಳಸಿ ೪೩ ಸಾವಿರ ರೂ. ನಗದು ಹಾಗೂ ೧೫ ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

 ನಗರದ ಗೌರಿಶಂಕರನಗರ ನಿವಾಸಿ ಬಸವಣ್ಣ ಎಂಬವರ ಮಗ ಮಧು ವಿಕಾಸ್ (೩೪) ಎಂಬವರೇ ದುಷ್ಕರ್ಮಿಗಳ ದಾಳಿಗೊಳಗಾಗಿ ಹಣ ಹಾಗೂ ಚಿನ್ನಾಭರಣ ಕಳೆದುಕೊಂಡವರು. ಇಂತಹುದ್ದೇ ಪ್ರಕರಣ ಕಳೆದ ಎರಡು ತಿಂಗಳ ಹಿಂದೆ ನಗರದಲ್ಲಿ ನಡೆದಿದ್ದು, ಇದೀಗ ಮತ್ತೆ ಮರುಕಳಿಸಿರುವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

 ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಮಧು ಅವರು ಕೆಲಸದ ನಿಮಿತ್ತ ಮನೆಗೆ ಬಂದಿದ್ದರು. ವಾಪಸ್ ಬೆಂಗಳೂರಿಗೆ ತೆರಳುವ ಸಲುವಾಗಿ ಸೋಮವಾರ ಮುಂಜಾನೆ ೫ ಗಂಟೆ ವೇಳೆಯಲ್ಲಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿಗೆ ಬಂದಿದ್ದಾರೆ. ಬಸ್ ಕಾಯುತ್ತಿದ್ದ ವೇಳೆ ಸ್ವಿಫ್ಟ್ ಡಿಸೈರ್ ಕಾರು ಅವರ ಮುಂದೆ ಬಂದು ನಿಂತಿದೆ.

 ಬೆಂಗಳೂರಿಗೆ ಬರುವವರನ್ನು ಕೂಗಿ ಕರೆದಿದ್ದಾರೆ. ಇದೇ ವೇಳೆ ಅಲ್ಲಿಯೇ ಇದ್ದ ಮಧು ವಿಕಾಸ್ ಕಾರನ್ನು ಹತ್ತಿದ್ದಾರೆ. ಕಾರು ಸ್ವಲ್ಪ ದೂರ ತೆರಳುತ್ತಿದ್ದಂತೆ ಕಾರಿನಲ್ಲಿದ್ದ ಮೂವರು ಮಧು ಅವರನ್ನು ಬೆದರಿಸಿ ಹಣ ನೀಡುವಂತೆ ಒತ್ತಡ ಹೇರಿದ್ದಾರೆ. ಆದರೆ, ಅವರ ಬಳಿ ಹೆಚ್ಚು ಹಣವಿರಲಿಲ್ಲ. ಹೀಗಾಗಿ, ಅವರ ಬಳಿ ಎಟಿಎಂ ಕಾರ್ಡ್ ಪಡೆದುಕೊಂಡಿದ್ದಾರೆ.

 ನಂತರ ವಿವಿಪುರಂ ಹಾಗೂ ಒಂಟಿಕೊಪ್ಪಲು ಬಳಿ ಇದ್ದ ಎಟಿಎಂ ಬಳಿಗೆ ತೆರಳಿ ಒಂದರಲ್ಲಿ ೨೦ ಸಾವಿರ ರೂ. ಹಾಗೂ ಮತ್ತೊಂದು ಎಟಿಎಂನಲ್ಲಿ ೨೩ ಸಾವಿರ ರೂ. ಹಣವನ್ನು ಡ್ರಾ ಮಾಡಿದ್ದಾರೆ. ನಂತರ ಅವರ ಬೆರಳಿನಲ್ಲಿದ್ದ ೫ ಗ್ರಾಂ ಚಿನ್ನದ ಉಂಗುರ ಹಾಗೂ ಕೊರಳಿನಲ್ಲಿದ್ದ ೧೦ ಗ್ರಾಂ ಚಿನ್ನದ ಸರವನ್ನು ಕೂಡ ಬಲವಂತದಿಂದ ಬಿಚ್ಚಿಸಿಕೊಂಡಿದ್ದಾರೆ.

 ಕಾರು ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಕಾರಿನಿಂದ ಮಧು ಅವರನ್ನು ಕೆಳಗೆ ನೂಕಿ ವೇಗವಾಗಿ ಹೊರಟುಹೋಗಿದ್ದಾರೆ. ಕೂಡಲೇ ಅವರು ಲಷ್ಕರ್ ಪೊಲೀಸ್ ಠಾಣೆಗೆ ತೆರಳಿ ನಡೆದ ವಿಚಾರವನ್ನು ವಿವರಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಮಂಡ್ಯ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿ ಸ್ವಿಫ್ಟ್ ಡಿಸೈರ್ ಕಾರುಗಳನ್ನು ತಪಾಸಣೆ ಮಾಡುವಂತೆ ಸೂಚನೆ ನೀಡಿದರಾದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಅಪರಿಚಿತರ ಕಾರನ್ನು ಹತ್ತಬೇಡಿ

 ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿರುವ ಲಷ್ಕರ್ ಠಾಣೆ ಇನ್‍ಸ್ಪೆಕ್ಟರ್ ಮುನಿಯಪ್ಪ, ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬೆಂಗಳೂರಿಗೆ ಕರೆದೊಯ್ಯುವುದಾಗಿ ಕಾರುಗಳನ್ನು ತರುವುದು ಸಾಮಾನ್ಯ. ಆದರೆ, ಪ್ರಯಾಣಿಕರು ಅಪರಿಚಿತ ವಾಹನಗಳನ್ನು ಹತ್ತಬಾರದು. ಇದರಿಂದ ಅಪಾಯ ಖಂಡಿತ. ಕೆಎಸ್‌ಆರ್‌ಟಿಸಿ ಬಸ್ಸುಗಳು ಸಾಕಷ್ಟಿದ್ದರೂ ಕೂಡ ಅಪರಿಚಿತರ ವಾಹನದಲ್ಲಿ ಏಕೆ ತೆರಳಬೇಕು ಎಂಬುದು ಅರ್ಥವಾಗುತ್ತಿಲ್ಲ. ಇನ್ನು ಮುಂದಾದರೂ ಪ್ರಯಾಣಿಕರು ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Leave a Reply

 

%d bloggers like this: