You cannot copy content of this page.
. . .

ರೈತರಿಂದ ಟ್ರ್ಯಾಕ್ಟರ್ ಜಪ್ತಿ ಮಾಡುವುದನ್ನು ನಿಲ್ಲಿಸಿ; ಬಡಗಲಪುರ ನಾಗೇಂದ್ರ

 ಮೈಸೂರು: ಪಿಎಲ್‌ಡಿ ಬ್ಯಾಂಕ್‌ಗಳು ರೈತರಿಂದ ಬಲವಂತವಾಗಿ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುತ್ತಿರುವುದು ಖಂಡನೀಯ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಬ್ಯಾಂಕ್ ಕೇಂದ್ರಗಳ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟ ನಡೆಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು.

 ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಹಾಗೂ ಜಲಪ್ರಳಯದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಈ ಸಂದಿಗ್ಧತೆಯಲ್ಲೂ ಬಲವಂತವಾಗಿ ರೈತರಿಂದ ಸಾಲ ವಸೂಲಿ ಮಾಡಬಾರದು ಎಂದು ಈ ಹಿಂದಿನ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಬ್ಯಾಂಕ್ ಅಧಿಕಾರಿಗಳು ಸುತ್ತೋಲೆಯನ್ನು ಗಾಳಿಗೆ ತೂರಿ ಎರಡು ಮೂರು ಕಂತು ಬಾಕಿ ಇರುವ ರೈತರ ಟ್ರ್ಯಾಕ್ಟರ್ ಇನ್ನಿತರ ಕೃಷಿಯಂತ್ರೋಪಕರಣಗಳನ್ನು ಪಿಎಲ್‌ಡಿ ಬ್ಯಾಂಕ್‌ಗಳು ರಾಜ್ಯಾದ್ಯಂತ ಜಪ್ತಿ ಮಾಡಿ ಹರಾಜು ನೋಟಿಸ್ ಕಳುಹಿಸುತ್ತಿವೆ. ಇದು ಖಂಡನೀಯವಾಗಿದ್ದು, ಟ್ರ್ಯಾಕ್ಟರ್ ಜಪ್ತಿಗೆ ಅಧಿಕಾರಿಗಳು ಮುಂದಾದರೆ ಕೂಡಲೇ ಸ್ಥಳೀಯ ರೈತ ಸಂಘಟನೆಗಳಿಗೆ ರೈತರು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

 ಈಗಾಗಲೇ ಮೈಸೂರು ಜಿಲ್ಲೆಯಲ್ಲಿ 7, ಮಂಡ್ಯದಲ್ಲಿ 9, ತುಮಕೂರಿನಲ್ಲಿ 13 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಮಾಹಿತಿ ತಿಳಿದು ಬಂದಿದೆ. ಹಾಗಾಗಿ, ಪಿಎಲ್‌ಡಿ ಬ್ಯಾಂಕ್‌ಗಳ ಎದುರು ಸಂಘವು ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದು ಹೇಳಿದರು.

 ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲ್ಲೂಕು ಅಧ್ಯಕ್ಷ ಪಿ. ಮರಂಕಯ್ಯ, ಚಂದ್ರೇಗೌಡ, ಮಂಡಕಳ್ಳಿ ಮಹೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ

 ಜೆಎನ್‌ಯು ಪ್ರಕರಣ ಖಂಡಿಸಿ ಮೈಸೂರು ವಿ.ವಿ.ಯ ಮಾನಸಗಂಗೋತ್ರಿ ಆವರಣದಲ್ಲಿ ನಡೆದ ಪ್ರತಿಭಟನೆ ವೇಳೆ ಒಬ್ಬರು ‘ಫ್ರೀ ಕಾಶ್ಮೀರ’ ಎಂಬ ಫಲಕ ಪ್ರದರ್ಶಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನೆ ಆಯೋಜಕರ ವಿರುದ್ಧ ಪ್ರಕರಣದ ದಾಖಲಿಸಿರುವುದು ಸರಿಯಲ್ಲ. ಕಾರಣ, ಅವರ ಉದ್ದೇಶ ದೇಶದ ಸಮಗ್ರತೆ ವಿರೋಧಿಸುವುದಾಗಿರಲಿಲ್ಲ. ಹೀಗಾಗಿ, ಸೂಕ್ತ ತನಿಖೆ ನಡೆಸಿ ನಿರಪರಾಧಿಗಳ ವಿರುದ್ಧದ ಪ್ರಕರಣ ಕೈಬಿಡಬೇಕು. ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಾವು ಭಾರತೀಯರು ಸಂಘಟನೆಯನ್ನು ರೂಪಿಸುತ್ತಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

 

 

%d bloggers like this: