You cannot copy content of this page.
. . .

   2012ರಲ್ಲಿ ನಡೆದ ದೆಹಲಿ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಗೆ ದಿನಾಂಕ FIX ಆಗಿದೆ. ಇದೇ ಜನವರಿ 22 ರಂದು ಬೆಳಗ್ಗೆ ನಾಲ್ವರು ಅಪರಾಧಿಗಳು ಗಲ್ಲಿಗೇರುತ್ತಿದ್ದಾರೆ. ಆದರೆ ಪ್ರಕರಣದ ಬಾಲಾಪರಾಧಿ 3 ವರ್ಷ ಅನುಭವಿಸಿ, 2015ರ ನವೆಂಬರ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾದರೆ ಆ ಬಾಲಾಪರಾಧಿ ಈಗ ಎಲ್ಲಿದ್ದಾನೆ..? ಏನು ಮಾಡುತ್ತಿದ್ದಾನೆ..? ಇದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆ ಕುತೂಹಲ ತಣಿಸುವ ಪ್ರಯತ್ನವೇ ಈ ವರದಿ.

 ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದರು. ಇದರಲ್ಲಿ ಅಕ್ಷಯ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ, ಮುಕೇಶ್ ಸಿಂಗ್, ರಾಮ್ ಸಿಂಗ್  ಗಲ್ಲುಶಿಕ್ಷೆಗೆ ಗುರಿಯಾಗಿದ್ದರು. ಇದರಲ್ಲಿ ರಾಮ್ ಸಿಂಗ್ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಆರನೇ ಬಾಲಾಪರಾಧಿ ಮಾತ್ರ ಕನಿಷ್ಠ ಶಿಕ್ಷೆ ಅಂದರೆ 3 ವರ್ಷ ಶಿಕ್ಷೆ ಅನುಭವಿಸಿ ಹೊರಬಂದಿದ್ದ.

 ಆದರೆ ಹೀನ ಕೃತ್ಯದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೂ ಮರಣದಂಡನೆ ಶಿಕ್ಷೆ ವಿಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತು. ಆದರೆ ಘಟನೆ ನಡೆದ ವೇಳೆ ಆತನಿಗೆ 17 ವರ್ಷ 2 ತಿಂಗಳಾಗಿತ್ತು ಎಂಬ ಅಂಶ ದೃಢಪಟ್ಟ ಹಿನ್ನೆಲೆಯಲ್ಲಿ ಬಾಲಾಪರಾಧಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಾಲಪರಾಧಿ ಕಾಯ್ದೆ ಪ್ರಕಾರ ಗರಿಷ್ಠ 3 ವರ್ಷ ಶಿಕ್ಷೆಯನ್ನು ವಿಧಿಸಿತ್ತು.

ದಕ್ಷಿಣ ಭಾರತದಲ್ಲಿದ್ದಾನಾ ಬಾಲಾಪರಾಧಿ..?

  3 ವರ್ಷ ಶಿಕ್ಷೆ ಅನುಭವಿಸಿದ ಮೇಲೆ ಬಾಲಾಪರಾಧಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಬದಲಾಗಿ ಪೊಲೀಸರು ಆತನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ಬಿಟ್ಟಿದ್ದಾರೆ. ಬಿಡುಗಡೆಯ ನಂತರ ಬಾಲಾಪರಾಧಿಯನ್ನು ಸರ್ಕಾರೇತರ ಸಂಸ್ಥೆಯೊಂದು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.

ಅಡುಗೆ ಕೆಲಸ ಮಾಡುತ್ತಿದ್ದಾನಾ ಬಾಲಾಪರಾಧಿ..?

  ಅಂದಿನ ಬಾಲಾಪರಾಧಿ ಸದ್ಯ ವಯಸ್ಕನಾಗಿದ್ದಾರೆ. ಆತನಿಗೀಗ 25 ವರ್ಷ ವಯಸ್ಸಾಗಿರಬಹುದು. ಅವನು ಬಾಲಾಪರಾಧಿಯಾಗಿ ದಿಲ್ಲಿಯ ಸುಧಾರಣಾ ಕೇಂದ್ರದಲ್ಲಿದ್ದಾಗ ಅಡುಗೆ ಮಾಡುವುದನ್ನು ಕಲಿತಿದ್ದನಂತೆ. ಈ ವೇಳೆ ಆತನಿಗೆ ಸುಧಾರಣಾ ಗೃಹದಲ್ಲಿಯೇ ಹೊಸ ಹೆಸರನ್ನು ಇಡಲಾಗಿತ್ತು ಎನ್ನಲಾಗಿದೆ.

  ಬಾಲಾಪರಾಧಿಯ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಏನನ್ನೂ ಅವರು ಬಾಯಿಬಿಡುವುದಿಲ್ಲ. ಆದರೆ ನಾವು ಆತನನ್ನು ರಾಷ್ಟ್ರ ರಾಜಧಾನಿಗಿಂತ ತುಂಬಾ ದೂರಕ್ಕೆ ಆತನನ್ನು ಕಳುಹಿಸಿದ್ದೇವೆ. ಜನರಿಗೆ ಆತನನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಇದೀಗ ಆತ ಹೊಸ ಜೀವನ ಆರಂಭಿಸಿದ್ದಾನೆ ಎಂದು ಅವರು ಹೇಳುತ್ತಾರೆ. ಆತ ದಕ್ಷಿಣ ಭಾರತದಲ್ಲಿ ಅಡುಗೆ ಕೆಲಸವನ್ನು ಮಾಡಿಕೊಂಡಿದ್ದಾನೆ ಎಂಬುದನ್ನೂ ಅವರು ಹೇಳುತ್ತಾರಾದರೂ, ಎಲ್ಲಿದ್ದಾನೆ ಎಂಬುದನ್ನು ಗುಟ್ಟಾಗಿಯೇ ಇರಿಸಿದ್ದಾರೆ. ಇದಕ್ಕೆ ಕಾರಣ ಆತನ ಭದ್ರತೆ.

 ಮಾಲೀಕನಿಗೂ ಈತ ಯಾರೆಂದು ಗೊತ್ತಿಲ್ಲ..!

  ಅಧಿಕಾರಿಗಳು ಹೇಳುವ ಪ್ರಕಾರ ದಕ್ಷಿಣ ಭಾರತದ ಹೋಟೆಲ್ ಒಂದರಲ್ಲಿ ಬಾಲಾಪರಾಧಿ ಕೆಲಸ ಮಾಡುತ್ತಿದ್ದಾನೆ. ಆದರೆ ಆ ಹೋಟೆಲ್‍ ಮಾಲೀಕನಿಗೂ ಆತ ಯಾರೆಂದು ಗೊತ್ತಿಲ್ಲ. ಯಾಕಂದ್ರೆ ಅಧಿಕಾರಿಗಳು ಮೊದಲೇ ಆತನ ಹೆಸರು ಬದಲಿಸಿದ್ದಾರೆ. ಜೊತೆಗೆ ವಿಚಾರವನ್ನೂ ಗೌಪ್ಯವಾಗಿ ಇಟ್ಟಿದ್ದಾರೆ.

  ಯಾರಿಗೂ ಈತನ ಬಗ್ಗೆ ತಿಳಿಯದಿರಲಿ ಎಂದು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಆತನನ್ನು ಸ್ಥಳಾಂತರಿಸುತ್ತಲೇ ಇರುತ್ತೇವೆ ಎಂದು ಹೆಸರು ಹೇಳಲು ಇಚ್ಚಿಸದ ಎನ್ ಜಿಒ ಅಧಿಕಾರಿಯೊಬ್ಬರು ಹೇಳುತ್ತಾರೆ ಎಂಬ ಮಾಹಿತಿ ಮಾಧ್ಯಮವೊಂದರಲ್ಲಿ ಬರೆಯಲಾಗಿದೆ. ಹೀಗಾಗಿ ಬಾಲಾಪರಾಧಿ ಕರ್ನಾಟಕಕ್ಕೂ ಬಂದಿರಬಹುದು. ಇಲ್ಲಿಯ ಹೋಟೆಲ್‍ ಗಳಲ್ಲೂ ಕೆಲಸ ಮಾಡಿರಬಹುದು.

  ಬಾಲಾಪರಾಧಿ ಉತ್ತರ ಪ್ರದೇಶದ ಒಂದು ಕುಗ್ರಾಮದವನು. ಚಿಕ್ಕ ಹುಡುಗನಾಗಿದ್ದಾಗಲೇ ಮನೆ ಬಿಟ್ಟು ದಿಲ್ಲಿಗೆ ಓಡಿ ಬಂದಿದ್ದ. ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ.

 

%d bloggers like this: