You cannot copy content of this page.
. . .

   ಕೆಂಪುಬಣ್ಣದ ಮಂಕುಬೂದಿ ಕೊಟ್ಟು ನಗದು, ದುಬಾರಿ ಮೊಬೈಲ್‍ ಗಳನ್ನು ದೋಚುತ್ತಿದ್ದ ರಾಜಸ್ಥಾನ ಮೂಲದ ನಾಲ್ವರು ನಾಗಾಸಾಧು ವೇಷಧಾರಿಗಳನ್ನುಕೊಡಗು ಜಿಲ್ಲೆ ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

  ರಾಜಸ್ಥಾನ ಮೂಲದ ನಾಗನಾಥ್, ಮಜೂರ್‌ ನಾಥ್, ಸುರಬ್‌ ನಾಥ್ ಮತ್ತು ಉಮೇಶ್‌ ನಾಥ್ ಬಂಧಿತ ಆರೋಪಿಗಳು. ನಾಗಾ ಸಾಧುಗಳ ವೇಷ ಧರಿಸಿ ಇಬ್ಬರು ಉದ್ಯಮಿಗಳನ್ನು ಮರುಳು ಮಾಡಿ ನಗದು ಹಾಗೂ ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಎಗರಿಸಿದ್ದರು. ನ.೨೪ರಂದು ಕುಶಾಲನಗರದ ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರಿಗೆ ಕೆಂಪು ಪುಡಿ ನೀಡಿದ್ದರು. ಬಳಿಕ ತಾವು ಹೇಳಿದ ಜಾಗಕ್ಕೆ ಬರುವಂತೆ ಮಾಡಿ, ೨೫ ಸಾವಿರ ಮೌಲ್ಯದ ಮೊಬೈಲ್ ಹಾಗೂ ಒಂದೂವರೆ ಸಾವಿರ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು.
   ಈ ಕೃತ್ಯ ನಡೆಯುವುದಕ್ಕೂ ಹದಿನೈದು ದಿನಗಳ ಮುನ್ನ ಫೋಟೊ ಶಾಪ್ ಮಾಲೀಕ ನಾಗೇಶ್ ಎಂಬುವವರಿಗೂ ಇದೇ ರೀತಿ ಯಾಮಾರಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು, ಕುಶಾಲನಗರ ಸಿಪಿಐ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ತಂಡ ರಚಿಸಿ, ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದರು.
 ಸೋಮವಾರ ಸಂಜೆ ಕೊಪ್ಪ ಗೇಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ನಾಲ್ವರು ಸಾಧು ವೇಷಧಾರಿಗಳು ಪತ್ತೆಯಾಗಿದ್ದರು. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ಕಾರು ಹಾಗೂ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಆರೋಪಿಗಳು ಕುಶಾಲನಗರ ಅಷ್ಟೇ ಅಲ್ಲದೆ ಕೊಡಗು ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಇದೇ ರೀತಿ ಕೃತ್ಯ ಎಸಗಿರಬಹುದು ಎಂಬ ಅನುಮಾನ ಇದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

%d bloggers like this: