You cannot copy content of this page.
. . .

`ನಾದಾಲಯ’ ಉದ್ಘಾಟಿಸಿದ ರಾಜವಂಶಸ್ಥ ಯದುವೀರ್ ಒಡೆಯರ್

 ಮೈಸೂರು: ವಾದ್ಯಗಳಿಗೆ ವಯಸ್ಸಾಗಬಹುದೇ ಹೊರತು ಅದರಿಂದ ಹೊರಹೊಮ್ಮುವ ಸಂಗೀತಕ್ಕಲ್ಲ. ವೀಣೆ, ಹಾರ್ಮೋನಿಯಂ, ಕೊಳಲುಗಳನ್ನು ನುಡಿಸಿದಾಗ ಹೊರಹೊಮ್ಮುವ ಇಂಪಾದ ನಾದ ಕೇಳಿದರೆ ಆಗುವಷ್ಟೇ ಆನಂದ ಅವುಗಳನ್ನು ನೋಡಿದಾಗಲೂ ಆಗುತ್ತದೆ.

 ನಗರದ ಆಕಾಶವಾಣಿಯಲ್ಲಿ ನೂತನವಾಗಿ ಸಿದ್ಧಪಡಿಸಿರುವ `ನಾದಾಲಯ-ಸಂಗೀತ ಸನ್ನಿಧಿ’ಯನ್ನು ಗುರುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.

 ಸುಮಧುರ ನಾದವನ್ನು ಹೊಮ್ಮಿಸುವ ಸಂಗೀತ ವಾದ್ಯಗಳನ್ನು ನಾದಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ತಬಲ, ಮೃದಂಗ, ಕೊಳಲು, ಹಾರ್ಮೋನಿಯಂ, ಗಿಟಾರ್, ವೀಣೆ, ಪಿಟೀಲು ಮುಂತಾದ ಸಂಗೀತ ವಾದ್ಯಗಳನ್ನು ಇಲ್ಲಿ ಕಾಣಬಹುದು. ವರ್ಷಾನುಗಟ್ಟಲೆಯಿಂದ ಆಕಾಶವಾಣಿಯ ಸಂಗೀತ ಕಾರ್ಯಕ್ರಮಗಳಿಗೆ ಬಳಸುತ್ತಾ ಬಂದಿರುವ ಈ ವಾದ್ಯಗಳು ಆಕಾಶವಾಣಿಯ ಪ್ರಮುಖ ದನಿ. ಶ್ರೋತೃಗಳಿಗೆ ಕಲಾವಿದರ ಧ್ವನಿಯಷ್ಟೇ ಹತ್ತಿರವಾಗಿರುವ ಸುಮಧುರ ಸಂಗೀತ ಹೊರಹೊಮ್ಮಲು ಕಾರಣವಾಗಿರುವ ಸಾಧನ.

 ವಿವಿಧ ಅಳತೆಯ ಕೊಳಲುಗಳು, ವಿವಿಧ ವಿನ್ಯಾಸದ ವೀಣೆಗಳು, ಬೇರೆ ಮಾದರಿಯ ತಬಲ, ಮೃದಂಗಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಮತ್ತೊಂದು ಗೋಡೆಯ ಮೇಲೆ ರಚಿಸಿರುವ ಸಂಗೀತ ಕಛೇರಿಯಂತಹ ಕಲಾಕೃತಿಗಳು ಕಣ್ಮನ ಸೆಳೆಯುತ್ತದೆ. ಅದಲ್ಲದೆ ಶತಮಾನದ ಅತ್ಯಂತ ಪ್ರಸಿದ್ಧ ಕಲಾವಿದರಾದ ವೀಣೆ ಶೇಷಣ್ಣ, ಎಂ.ಎಸ್.ಸುಬ್ಬಲಕ್ಷ್ಮಿ, ವಾಸುದೇವಾಚಾರ್ಯ, ಟಿ.ಚೌಡಯ್ಯ, ಮೈಸೂರು ವಿ.ದೊರೆಸ್ವಾಮಿ ಅಯ್ಯಂಗಾರ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ.

 `ನಾದಾಲಯ’ವನ್ನು ಉದ್ಘಾಟಿಸಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ನಮ್ಮ ತಾತ ಜಯಚಾಮರಾಜ ಒಡೆಯರ್ ಅವರು ಸಂಗೀತ ಕ್ಷೇತ್ರದಲ್ಲಿ ಬಹಳ ಆಸಕ್ತಿ ಉಳ್ಳವರಾಗಿದ್ದರು. ಆಕಾಶವಾಣಿಯೊಂದಿಗಿನ ಅವರ ಸಂಬಂಧ ಅವಿನಾಭವವಾದುದು. ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ಮುಂದೆಯೂ ಈ ಸಂಬಂಧ ಹೀಗೇ ಇರಲಿದೆ. ಆಕಾಶವಾಣಿಗಾಗಲೀ, ಸಂಗೀತ ಕ್ಷೇತ್ರಕ್ಕಾಗಲೀ ಏನಾದರೂ ಸಹಕಾರ ಬೇಕೆಂದರೆ ಅರಮನೆ ಸದಾ ಸಿದ್ಧವಿರುತ್ತದೆ ಎಂದು ಹೇಳಿದರು.

 ಆಕಾಶವಾಣಿಯ ಹಿರಿಯ ಕಲಾವಿದೆ ಡಾ.ಎಚ್.ಆರ್.ಲೀಲಾವತಿ, ಆಕಾಶವಾಣಿಯ ಮುಖ್ಯಸ್ಥರಾದ ಸುನಿಲ್ ಭಾಟಿಯಾ, ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್, ತಾಂತ್ರಿಕ ವಿಭಾಗದ ಸಹ ನಿರ್ದೇಶಕ ರಾಮಾಂಜನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

%d bloggers like this: