You cannot copy content of this page.
. . .

‘ಮಾಗಿ’ ಫಲ ಪುಷ್ಪಗಳಿಗೆ ‘ವಿದೇಶಿ ದುಂಬಿ’ಗಳ ಮುತ್ತಿಗೆ..

  ಮಾಗಿ ಉತ್ಸವದಿಂದ ಮೈಸೂರು ಎಂದಿಗಿಂತ ಕಳೆಗಟ್ಟಿದೆ. ಅರಮನೆ ಆವರಣದಲ್ಲಿ ವರ್ಣರಂಜಿತವಾಗಿ ನಳನಳಿಸುತ್ತಿರುವ ಹೂವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಮಾಗಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಪ್ರಪಂಚದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ. ದೂರದ ಫ್ರಾನ್ಸ್, ಇಟಲಿ, ಜರ್ಮನಿ, ಅಮೆರಿಕಾ ದೇಶಗಳಿಂದ ಪ್ರವಾಸಿಗರು ಅರಮನೆಗೆ ಆಗಮಿಸಿ ಮಾಗಿ ಉತ್ಸವದಲ್ಲಿ ಉತ್ಸಾಹದಿಂದ ಸಮಯ ಕಳೆಯುತ್ತಿದ್ದಾರೆ.
 ಜೊತೆಗೆ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಂಜಾಬ್ ನಿಂದ ಬಂದಿರುವ ಪ್ರವಾಸಿಗರನ್ನೂ ಕಾಣಬಹುದು. ವಿಶೇಷವೆಂದರೆ ಇಡೀ ಅರಮನೆ ಆವರಣದಲ್ಲಿರುವ ಶೇ.70ರಷ್ಟು ಪ್ರವಾಸಿಗರು ಬೇರೆ ರಾಜ್ಯ ಹಾಗೂ ದೇಶದವರೇ. ಅಲ್ಲಲ್ಲಿ ಮಾತ್ರ ಕನ್ನಡಿಗರು ಕಾಣಸಿಗುತ್ತಾರೆ.
ಕ್ಯಾಮರಾ ಹೊತ್ತು ತಿರುಗಾಡಿದ ವಿದೇಶಿಗರು:
ಮೈಸೂರಿನ ಸೊಬಗನ್ನು ಅಚ್ಚಳಿಯದಂತೆ ಉಳಿಸಿಕೊಳ್ಳಲು ವಿದೇಶಿಗರು ತಮ್ಮೊಂದಿಗೆ ಕ್ಯಾಮರಾಗಳನ್ನು ತಂದು ಅರಮನೆಯ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬೆರಗುಗಣ್ಣಿನಿಂದ ಅರಮನೆಯ ವೈಭವ ನೋಡಿ ಸಂತಸಪಡುತ್ತಿದ್ದರು.
ಅರಮನೆ ಆವರಣದಲ್ಲಿ ಮಕ್ಕಳ ಉತ್ಸವ:
ಮಾಗಿ ಉತ್ಸವಕ್ಕೆ ವಿವಿಧ ಶಾಲೆ, ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಶಿಕ್ಷಕರ ಕಣ್ಗಾವಲಿನಲ್ಲಿ ಓಡಾಡುತ್ತಾ ವಿದ್ಯಾರ್ಥಿಗಳು ಮಾಗಿ ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅರಳಿ ನಿಂತಿರುವ ಹೂವುಗಳನ್ನು ಕಣ್ಣರಳಿಸಿ ನೋಡುತ್ತಿದ್ದ ಮಕ್ಕಳು ಖುಷಿಯಿಂದ ಅತ್ತಿತ್ತ ಓಡಾಡುತ್ತಿದ್ದಾರೆ.
  ಬೊಂಬೆಮನೆಯಲ್ಲೂ ಜನರಿಂದ ನೂಕುನುಗ್ಗಲು ಸೃಷ್ಟಿಯಾಗುತ್ತಿದೆ. ಪ್ರದರ್ಶನಕ್ಕಿಟ್ಟಿದ ವಿವಿಧ ರೀತಿಯ ಬೊಂಬೆಗಳು, ಹಳೆಯ ಕಾಲದ ಚಿತ್ರಪಟಗಳನ್ನು ನೋಡುತ್ತಾ ಪ್ರವಾಸಿಗರು ಸಂತಸಪಡುತ್ತಿದ್ದಾರೆ. 2020 ಜನವರಿ 1ರ ಸಂಜೆ ಈ ಮಾಗಿ ಉತ್ಸವ ಮುಕ್ತಾಯವಾಗಲಿದೆ.

 

ಮೈಸೂರಿಗೆ ಹತ್ತು ವರ್ಷಗಳ ಹಿಂದೆ ಬಂದಿದ್ದೆ. ಆಗ ಆದಷ್ಟೇ ಖುಷಿ ಈಗಲೂ ಆಗುತ್ತಿದೆ. ಮಾಗಿ ಉತ್ಸವದ ಅಂಗವಾಗಿ ಏರ್ಪಾಡು ಮಾಡಿರುವ ಈ ಫಲಪುಷ್ಪ ಪ್ರದರ್ಶನ ನಮಗೆ ಬಹಳ ಖುಷಿಕೊಟ್ಟಿದೆ. ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದೇವೆ.
ವಿಸೆಂಟ್
ಫ್ರಾನ್ಸ್
ಮೈಸೂರು ಮಾಗಿ ಉತ್ಸವ ನಮ್ಮಲ್ಲಿ ಚೈತನ್ಯ ತುಂಬಿದೆ. ಇದು ಅತ್ಯಂತ ಆಕರ್ಷಕವಾದ ಫಲಪುಷ್ಪ ಪ್ರದರ್ಶನ. ನಾನು ಇದೇ ಮೊದಲ ಬಾರಿ ಮೈಸೂರಿಗೆ ಬರುತ್ತಿರುವುದರಿಂದ ಇದನ್ನೆಲ್ಲಾ ನೋಡಿ ಖುಷಿಯಾಗುತ್ತಿದೆ. ಮತ್ತೊಮ್ಮೆ ಇಲ್ಲಿಗೆ ಬರುತ್ತೇವೆ.
ಸೈಲ್ವೀ
ಫ್ರಾನ್ಸ್
ಈಗಷ್ಟೇ ಮೈಸೂರಿಗೆ ಬಂದಿದ್ದೇವೆ. ಯುರೋಪ್ನಲ್ಲಿ ಈ ರೀತಿಯ ವೈಭವ ನಾವೆಲ್ಲೂ ಕಂಡಿಲ್ಲ. ಇಲ್ಲಿನ ವಾತಾವರಣ, ಮಾಗಿ ಉತ್ಸವದ ರಂಗು ನಮಗೆ ಬಹಳ ಅಚ್ಚುಮೆಚ್ಚಾಗಿದೆ. ನಾವು ಮತ್ತೆ ಮೈಸೂರಿಗೆ ಬರಬೇಕೆಂದು ನಿರ್ಧಾರ ಮಾಡಿದ್ದೇವೆ.
ಒಂಡ್ರೇಜ್
ಜೆಕ್ ರಿಪಬ್ಲಿಕ್, ಯುರೋಪ್

 

%d bloggers like this: