You cannot copy content of this page.
. . .

   ಉಪಚುನಾವಣೆಯಲ್ಲಿ ಕೋಟಿ ಕೋಟಿ ಹಣ ಹಾರಿದಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಂತ ಮತದಾನ ಮುಗಿದ ಮೇಲೆ ಎಲ್ಲಾ ತಣ್ಣಗಾಗಿದೆ ಎಂದುಕೊಂಡರೆ ಅದು ತಪ್ಪಾಗುತ್ತೆ. ಯಾಕಂದ್ರೆ, ಈಗಲೂ ಮತ ಕ್ಷೇತ್ರಗಳಲ್ಲಿ ಝಣಝಣ ಕಾಂಚಾಣದ್ದೇ ಸದ್ದು. ಸೋಮವಾರ ಬರುವ ಫಲಿತಾಂಶದ ಮೇಲೆ ಬೆಟ್ಟಿಂಗ್‍ ಭರಾಟೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ಅರಳಿಕಟ್ಟೆ, ಟೀ ಸ್ಟಾಲ್‍, ಹೋಟೆಲ್‍ ಹೀಗೆ ಎಲ್ಲಿ ನೋಡಿದರೂ ಬೆಟ್ಟಿಂಗ್‍ ದೇ ಮಾತು..

   ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಬಿಜೆಪಿಗೆ ಗೆಲ್ಲುವ ವಿಶ್ವಾಸವೇ ಇರಲಿಲ್ಲ. ಆದರೆ ಈ ಬಾರಿ ಕೆ.ಆರ್‍.ಪೇಟೆಯಲ್ಲಿ ಖಾತೆ ತೆರೆಯುವ ವಿಶ್ವಾಸದಲ್ಲಿದೆ ಬಿಜೆಪಿ. ಜೊತೆಗೆ ಜೆಡಿಎಸ್‍ ಕೂಡಾ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ. ಹೀಗಾಗಿ ಈ ಎರಡೂ ಪಕ್ಷಗಳ ಕಾರ್ಯಕರ್ತರು ಬೆಟ್ಟಿಂಗ್‍ ಮೂಲಕ ಚಾಲೆಂಜ್‍ ಹಾಕುತ್ತಿದ್ದಾರೆ. ಮೂಲಗಳ ಪ್ರಕಾರ ಬೆಟ್ಟಿಂಗ್‍ ನಲ್ಲಿ ಬಿಜೆಪಿಯೇ ಮುಂದಿದೆ. ಜೆಡಿಎಸ್‍ ಪರ 700 ರೂಪಾಯಿ ಕಟ್ಟಿದರೆ ಬಿಜೆಪಿಯವರು 1000 ರೂಪಾಯಿ ಕೊಡ್ತಾರಂತೆ. ಕೆ.ಆರ್‍.ಪೇಟೆಯಲ್ಲಿ ತ್ರಿಕೋನ ಸ್ಪರ್ಧೆ ಇದೆಯಾದರೂ ಬೆಟ್ಟಿಂಗ್‍ ವಿಚಾರದಲ್ಲಿ ಮಾತ್ರ ಕಾಂಗ್ರೆಸ್‍ ಮಂಕಾಗಿದೆ. ಜೆಡಿಎಸ್‍—ಬಿಜೆಪಿ ನಡುವೆ ಮಾತ್ರ ಬೆಟ್ಟಿಂಗ್‍ ನಡೀತಿದೆ. ಒಂದು ವೇಳೆ ಇಬ್ಬರೂ ಬಿಟ್ಟು ಕಾಂಗ್ರೆಸ್‍ ಗೆದ್ದುಬಿಟ್ಟರೆ ಯಾರಿಗೂ ದುಡ್ಡು ಕೊಡಬೇಕಾಗಿಲ್ಲ ಎಂಬ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆಯಂತೆ.

   ಅಂದಹಾಗೆ ಬರೀ ಹಣವನ್ನಷ್ಟೇ ಪಣಕ್ಕಿಡುತ್ತಿಲ್ಲ. ಕಾರು, ಬೈಕ್‍, ಟ್ರ್ಯಾಕ್ಟರ್‍ ಗಳನ್ನೂ ಬಾಜಿ ಕಟ್ಟಿದ್ದಾರಂತೆ. ಅಷ್ಟೇ ಅಲ್ಲ, ಹಸು, ಎಮ್ಮೆ, ಕುರಿ, ಕೋಳಿಗಳನ್ನೂ ಪಣಕ್ಕಿಟ್ಟಿದ್ದಾರಂತೆ. ಅಂದಹಾಗೆ ಬಾಜಿ ಕಟ್ಟುವುದು ಕಾನೂನು ಪ್ರಕಾರ ಅಪರಾಧ. ಆದರೂ ಲೆಕ್ಕಸದೇ ಉಪಚುನಾವಣೆಯಲ್ಲಿ ಬೆಟ್ಟಿಂಗ್ ಜೋರಾಗೇ ನಡೆಯುತ್ತಿದೆ.

  ಅಂದಹಾಗೆ ಕೆ.ಆರ್‍.ಪೇಟೆ ಕ್ಷೇತ್ರದಲ್ಲಿ ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಬಿ.ಎಲ್‍.ದೇವರಾಜ್‍ ಜೆಡಿಎಸ್‍ ನಿಂದ ಹಾಗೂ ಚಂದ್ರಶೇಖರ್‍ ಕಾಂಗ್ರೆಸ್‍ನಿಂದ ಅಖಾಡದಲ್ಲಿದ್ದಾರೆ.

 

%d bloggers like this: