You cannot copy content of this page.
. . .

ಸಚಿವ ಸ್ಥಾನ ಆಕಾಂಕ್ಷಿಗಳ ಋಣ ತೀರಿಸುತ್ತೇವೆ; ಕೆ.ಎಸ್.ಈಶ್ವರಪ್ಪ

 ಸಚಿವ ಸ್ಥಾನ ಆಕಾಂಕ್ಷಿಗಳ ಋಣ ನಮ್ಮ ಮೇಲಿದೆ. ಅವರ ಋಣ ತೀರಿಸುವುದು ನಮ್ಮ ಕರ್ತವ್ಯ ಎಂದು ಸಚಿವ ಕೆ.ಎಸ್‍.ಈಶ್ವರಪ್ಪ ಹೇಳಿದರು.

 ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಆಕಾಂಕ್ಷಿಗಳ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅವರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಹೀಗಾಗಿ, ಅವರ ಋಣ ತೀರಿಸಬೇಕಾಗಿದೆ ಅಷ್ಟೆ ಎಂದು ನುಡಿದರು.

 ಕೇಂದ್ರ ಸಚಿವ ಅಮಿತ್ ಶಾ ಅವರ ರಾಜ್ಯ ಪ್ರವಾಸಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿದ್ದರು. ಸ್ಥಳೀಯ ಮುಖಂಡರೊಡನೆ ಏನು ಚರ್ಚೆ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮಗೆ ಇರುವಷ್ಟೇ ಮಾಹಿತಿ ನನಗಿರುವುದು ಎಂದು ಹಾರಿಕೆಯ ಉತ್ತರ ನೀಡಿದರು.

 ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಟೀಕೆ ಮಾಡುತ್ತಿರುವ ವಿಚಾರಕ್ಕೆ ಉತ್ತರಿಸಿದ ಅವರು, ಅವರದ್ದು ಅಯೋಗ್ಯ ಸರ್ಕಾರ ಎಂದು ರಾಜ್ಯದ ಜನರು ಮನೆಯಲ್ಲಿ ಕೂರಿಸಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನ ವಿರೋಧಿ ಕೆಲಸ ಮಾಡಿದರು. ಜಾತಿ ಜಾತಿಗಳ ನಡುವೆ ಬಿರುಕು ಮೂಡಿಸಿದರು. ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚಿದರು. ಈ ಕಾರಣಕ್ಕಾಗಿ ಅವರನ್ನು ಜನ ಮನೆಗೆ ಕಳುಹಿಸಿದರು ಎಂದು ಆರೋಪಗಳ ಸುರಿಮಳೆಗೈದರು.

 ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ನಿಷೇಧ ಚಿಂತನೆ: ಎಸ್‌ಡಿಪಿಐ ಹಾಗೂ ಪಿಎಫ್‌ಐ ಭಯೋತ್ಪಾದನಾ ಸಂಘಟನೆಗಳು. ಅವುಗಳ ಚಟುವಟಿಕೆ ಏನು ಎಂಬುದು ಮೈಸೂರು, ಶಿವಮೊಗ್ಗದವರಿಗೂ ಅನುಭವ ಆಗಿದೆ. ಕೇರಳದಿಂದ ಬಂದು ಪಾಕಿಸ್ತಾನಕ್ಕೆ ಜೈ ಎಂದು ಘೋಷಣೆ ಕೂಗಿದ್ದನ್ನು ನೋಡಿದ್ದೇವೆ. ಕೊಲೆ ಮಾಡಿದ ಪ್ರಕರಣಗಳೂ ನಮ್ಮ ಮುಂದಿವೆ. ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಚಿಂತಿಸಲಾಗುವುದು ಎಂದರು.

 ಕುಮಾರಸ್ವಾಮಿ ಸಿನಿಮಾ ಮಾಡಿಕೊಂಡು ಇರಲಿ: ಈಶ್ವರಪ್ಪ ಬಗ್ಗೆ ಕುಮಾರಸ್ವಾಮಿ ಟ್ವೀಟ್‌ಗೆ ಸಂಬಂಧ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಅವರ ಸ್ಥಾನಕ್ಕೆ ತಕ್ಕಂತೆ ಪದ ಬಳಕೆ ಮಾಡಬೇಕು. ಅಷ್ಟು ಮಾತ್ರ ನಾನು ಹೇಳಬಲ್ಲೆ. ಅವರು ಸಿನಿಮಾ ಮಾಡಿಕೊಂಡು ಇದ್ದರೆ ಇದೆಲ್ಲಕ್ಕಿಂತ ಒಳ್ಳೆಯದು ಎಂದು ಹೇಳಿದರು.

 

%d bloggers like this: