You cannot copy content of this page.
. . .

ಕೆ.ಎಸ್.ಈಶ್ವರಪ್ಪ, ಎಚ್‍.ಡಿ.ಕುಮಾರಸ್ವಾಮಿ ಟ್ವೀಟ್ ಸಮರ

 ಸಂಸದ ತೇಜಸ್ವಿ ಸೂರ್ಯ ಹಾಗೂ ಯುವಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಅವರ ಹತ್ಯೆಗೆ ಸಂಚು ನಡೆದಿತ್ತು ಎಂಬ ಸುದ್ದಿ ಹೆಚ್ಚು ಸದ್ದು ಮಾಡಿತ್ತು. ಈ ಕುರಿತು ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ‘ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಯುಗಪುರುಷರೇ?’ ಎಂದು ಲೇವಡಿ ಮಾಡಿದ್ದು ಪರ-ವಿರೋಧದ ಚರ್ಚೆಗೆ ಕಾರಣವಾಯಿತು. ಇದೇ ವಿಚಾರವಾಗಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಎಚ್‍.ಡಿ.ಕುಮಾರಸ್ವಾಮಿ ಅವರ ನಡುವೆ ಟ್ಟೀಟ್ ಸಮರ ಏರ್ಪಟ್ಟಿದೆ.

 ಎಚ್​ಡಿಕೆ ಹೇಳಿಕೆಗೆ ಟ್ವೀಟರ್​ನಲ್ಲಿ ಕಿಡಿಕಾರಿದ್ದ ಸಚಿವ ಕೆ.ಎಸ್.ಈಶ್ವರಪ್ಪ, ‘ಅಂದು ತಿನ್ನಲು ಗತಿ ಇಲ್ಲದವರು ಮಾತ್ರ ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳಿದ ಈ ಯುಗಪುರುಷ, ಪುಲ್ವಾಮ ದಾಳಿಗೆ ಭಾರತೀಯ ಸೈನ್ಯ ಪ್ರತ್ಯುತ್ತರ ನೀಡಿದಾಗ ಸಂಭ್ರಮಾಚರಣೆ ಮಾಡಬೇಡಿ ಒಂದು ಕೋಮಿಗೆ ಬೇಜಾರಾಗುತ್ತದೆ ಎಂದೂ ತಮ್ಮ ಅಣಿಮುತ್ತುಗಳನ್ನು ಉದುರಿಸಿ ಅತ್ತಿದ್ದರು. ಇಂತಹ ಯುಗಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಯೋಗ್ಯತೆಗೆ ತಕ್ಕ ಮಾತು” ಎಂದು ಪ್ರತ್ಯುತ್ತರ ನೀಡಿದ್ದರು.

 ಅದಕ್ಕೆ ಪ್ರತಿಯಾಗಿ ಟ್ವೀಟ್‍ ಮಾಡಿರುವ ಎಚ್‍.ಡಿ.ಕುಮಾರಸ್ವಾಮಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸುತ್ತಾರಾ? ಎಂದು ನಾನು ಪ್ರಶ್ನೆ ಮಾಡಿದ್ದರಲ್ಲಿ ತಪ್ಪೇನಿದೆ’ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.

 ‘ಮನೆಯಲ್ಲಿ ನೋಟು ಎಣಿಸುವ ಯಂತ್ರ ಇಟ್ಟುಕೊಂಡವನು ನಾನಲ್ಲ. ನಿಮ್ಮ ಮೇಲೆ ಅತ್ಯಾಚಾರ ನಡೆದರೆ ಸರ್ಕಾರ ಏನು ಮಾಡೋಕಾಗುತ್ತೆ ಎಂದು ವರದಿಗಾರ್ತಿಗೆ ಪೆಕರನಂತೆ ಪ್ರಶ್ನಿಸಿದವನು ನಾನಲ್ಲ’ ಎಂದು ಎಚ್‍ಡಿಕೆ ಖಾರವಾಗಿ ನುಡಿದಿದ್ದಾರೆ.

 ಹೀಗೆ, ಈಶ್ವರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ನಡುವೆ ಸಾಲು ಸಾಲು ಟ್ಟೀಟ್‍ ಸಮರ ನಡೆದಿದೆ. ಇದಕ್ಕೆ ಇಬ್ಬರು ನಾಯಕರ ಅಭಿಮಾನಿಗಳು ತಮ್ಮ ನಾಯಕನ ಪರವಾಗಿ ನಿಂತು ಎದುರು ನಾಯಕನ ವಿರುದ್ಧ ಟ್ಟೀಟ್‍ ಮಾಡಿ ಚಾಟಿ ಬೀಸಿದ್ದಾರೆ.  

 

%d bloggers like this: