You cannot copy content of this page.
. . .

ಇದು ಮನುಷ್ಯ ಭಾರತವಲ್ಲ ಪೇಶ್ವೆಗಳ ಭಾರತ: ಜ್ಞಾನಪ್ರಕಾಶ ಸ್ವಾಮೀಜಿ

 ಮೈಸೂರು: ಈಗ ಇರುವುದು ಮನುಷ್ಯ ಭಾರತವಲ್ಲ, ಪೇಶ್ವೆಗಳ ಭಾರತ ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಸಂಘದ ವತಿಯಿಂದ ಬಲ್ಲಾಳ್ ವೃತ್ತದ ಬಳಿಯ ಬುದ್ಧ ವಿಹಾರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

 ಪೊಲೀಸ್ ಆಗಿದ್ದು, ಕರ್ತವ್ಯ ನಿರತಳಾಗಿದ್ದ ದಲಿತ ಸಮುದಾಯದ ಹೆಣ್ಣುಮಗಳೊಬ್ಬಳನ್ನು ಉಡುಪಿಯ ಶ್ರೀ ಕೃಷ್ಣಮಠದಿಂದ ಹೊರಗೆ ಇಡಲಾಗಿದೆ. ಪ್ಲಾಸ್ಟಿಕ್ ವಸ್ತುವೊಂದನ್ನು ಮುಟ್ಟಿದ ಕಾರಣಕ್ಕೆ ದಲಿತ ಹೆಣ್ಣುಮಗಳನ್ನು ಕೊಲೆ ಮಾಡಲಾಗಿದೆ. ಇದು ಯಾವ ಭಾರತ? ಮನುಷ್ಯ ಭಾರತವೋ? ಪೇಶ್ವೆಗಳ ಭಾರತವೋ ಎಂದು ಖಾರವಾಗಿ ಪ್ರಶ್ನಿಸಿದರು.

 ರಾಮರಾಜ್ಯ ಮಾಡುತ್ತೇವೆ ಎಂದರೆ, ಪೇಶ್ವೆಗಳ ಭಾರತ ನಿರ್ಮಿಸುತ್ತೇವೆ ಎಂದರ್ಥ. ರಾಮರಾಜ್ಯದಲ್ಲಿ ವರ್ಣ ವ್ಯವಸ್ಥೆಯೇ ಮುಖ್ಯವಾಗುತ್ತದೆ. ಶೂದ್ರರನ್ನು ತುಳಿಯಲಾಗುತ್ತದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣೆ (ಎನ್‌ಪಿಆರ್) ಕೈಪಿಡಿಯಲ್ಲಿ ಅಂಬೇಡ್ಕರ್ ಜಯಂತಿ ಮತ್ತು ಬಕ್ರಿದ್ ಹಬ್ಬಗಳನ್ನು ಹೊರಗಿಡಲಾಗಿದೆ. ಆದರೆ, ರಾಮನವಮಿಯನ್ನು ಸೇರಿಸಲಾಗಿದೆ. ಅಂಬೇಡ್ಕರ್ ಇಲ್ಲದ ಭಾರತ, ತಾಯಿ ಇಲ್ಲದ ತಬ್ಬಲಿ ಭಾರತವಾಗುತ್ತದೆ. ಸಂವಿಧಾನದ ಮೂಲ ಬೇರುಗಳನ್ನು ಕಿತ್ತು ಹಾಕಲಾಗುತ್ತಿದೆ ಎಂದು ಎಚ್ಚರಿಸಿದರು.

 ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಇತರರು ಹಾಜರಿದ್ದರು.

 

%d bloggers like this: