You cannot copy content of this page.
. . .

ಮದುವೆಯಲ್ಲಿ DUSTBIN ಉಡುಗೊರೆ, ಇಲ್ಲಿ ಮಕ್ಕಳೇ ಸ್ವಚ್ಛತಾ ರಾಯಭಾರಿಗಳು..!

  ಇಲ್ಲಿ ಮಕ್ಕಳೇ ಸ್ವಚ್ಛತೆಯ ರಾಯಭಾರಿಗಳು. ಪ್ರತಿ ಮನೆಯಲ್ಲೂ ಹಸಿ ಕಸ, ಒಣ ಕಸ ಬೇರ್ಪಡಿಸಿ ಇಡಲಾಗುತ್ತದೆ. ಪ್ರತಿದಿನ ಕಸ ವಿಲೇವಾರಿ ನಡೆಯುತ್ತದೆ. ಮದುವೆಯಲ್ಲಿ ಡಸ್ಟ್ಬಿನ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ!
ಇದು ಮಧ್ಯಪ್ರದೇಶದ ಇಂಧೋರ್‌ನ ಚಿತ್ರಣ. ಕಳೆದ ಮೂರು ಬಾರಿಯಿಂದ ಸತತವಾಗಿ ಸ್ವಚ್ಛ ನಗರಿ ಪಟ್ಟ ಪಡೆಯುತ್ತಾ ಬಂದಿರುವ ಮಧ್ಯಪ್ರದೇಶದ ಇಂಧೋರ್ ನಗರದಲ್ಲಿ ನಾವೂ ಊಹಿಸಲೂ ಆಗದ ಸರಳ ವಿಧಾನಗಳನ್ನು ಬಳಸಿಕೊಂಡು ಸ್ವಚ್ಛತೆ ಕಪಾಡಿಕೊಳ್ಳಲಾಗುತ್ತಿದೆ. ಅಲ್ಲಿನ ನಗರಪಾಲಿಕೆಯೊಂದಿಗೆ ಜನರು ಕೈಜೋಡಿಸಿ ತಮ್ಮ ನಗರವನ್ನು ಸ್ವಚ್ಛವಾಗಿರಿಸಿಕೊಂಡಿದ್ದಾರೆ.
ಇಂಧೋರ್ ೧೯ -೨೦ ಲಕ್ಷ ಜನಸಂಖ್ಯೆಯುಳ್ಳ ನಗರ. ಮೈಸೂರಿಗಿಂತ ಐದು ಪಟ್ಟು ಹೆಚ್ಚು ಕಸ ಇಲ್ಲಿ ಉತ್ಪಾದನೆಯಾಗುತ್ತದೆ. ಆದರೂ ಇಡೀ ನಗರ ಅತ್ಯಂತ ಸ್ವಚ್ಛತೆಯಿಂದ ಕೂಡಿರುತ್ತದೆ. ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಇರುವ ಜಾಗೃತಿ ಹಾಗೂ ನಗರಪಾಲಿಕೆಯ ಶ್ರಮ ಇದಕ್ಕೆ ಪ್ರಮುಖ ಕಾರಣಗಳು.

  ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಕಸ ವಿಂಗಡಣೆ ಮಾಡಕಾಗುತ್ತದೆ. ಹಸಿ ಹಾಗೂ ಒಣಕಸವನ್ನು ಶೇ.೧೦೦ರಷ್ಟು ಜನರೂ ವಿಂಗಡಿಸುತ್ತಾರೆ. ಪ್ರತಿದಿನ ಪೌರಕಾರ್ಮಿಕರು ಮನೆ ಮನೆಗೂ ಹೋಗಿ ಕಸ ಸಂಗ್ರಹ ಮಾಡುತ್ತಾರೆ. ಇನ್ನು ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ತೆರವು ಕಾಮಗಾರಿಗಳಲ್ಲಿ ಉತ್ಪಾದನೆಯಾಗುವ ಶೇ.೧೦೦ರಷ್ಟು ಕಟ್ಟಡ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ. ಅದನ್ನು ಮರುಬಳಕೆ ಮಾಡುವುದು ಅಥವಾ ತಗ್ಗು ಪ್ರದೇಶದಲ್ಲಿ ಹಾಕಿ ಸಂಸ್ಕರಿಸುವುದು ಮಾಡುತ್ತಾರೆ.
ಇಲ್ಲಿ ರಸ್ತೆಗಳನ್ನು ಸ್ವಚ್ಛಗೊಳಿಸಲು ೧೩ ರಸ್ತೆಯಲ್ಲಿ ಕಸ ಗುಡಿಸುವ ಮಷಿನ್‌ಗಳನ್ನು ಬಳಕೆ ಮಾಡುತ್ತಾರೆ. ಜೊತೆಗೆ ಸಂಗ್ರಹವಾದ ಶೇ.೧೦೦ರಷ್ಟು ಕಸವನ್ನು ಮರುಬಳಕೆ ಮಾಡಲಾಗುತ್ತದೆ. ಸುಸಜ್ಜಿತ ವೇಸ್ಟೇಜ್ ಪ್ರೊಸೆಸಿಂಗ್ ಯೂನಿಟ್ ಈ ನಿಟ್ಟಿನಲ್ಲಿ ಅದ್ಭುತ ಕಾರ್ಯ ನಿರ್ವಹಿಸುತ್ತಿದೆ. ದಿನಕ್ಕೆ ಇಲ್ಲಿ ೮ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತದೆ. ಅದರ ಮೂಲಕ ಡೀಸೆಲ್ ಉತ್ಪಾದಿಸುವ ಘಟಕ ಸ್ಥಾಪನೆ ಮಾಡಲಾಗಿದೆ. ಅದರಲ್ಲಿ ದಿನಕ್ಕೆ ೩ ಸಾವಿರ ಲೀಟರ್ ಆಯಿಲ್ ಉತ್ಪಾದನೆ ಆಗುತ್ತದೆ.
ಏಷ್ಯಾದ ಅತಿದೊಡ್ಡ ಬಯೋ ಮೆತಾನೇಷನ್ ಪ್ಲಾಂಟ್ ಇರುವುದು ಇಂಧೋರ್‌ನಲ್ಲಿ. ಇದರಲ್ಲಿ ೬೮೪ ಪ್ರೊಸೆಸಿಂಗ್ ಯೂನಿಟ್‌ಗಳ ಮೂಲಕ ಪ್ರತಿ ದಿನ ೬೮ ಟನ್ ಹಸಿತ್ಯಾಜ್ಯ ಪ್ರೊಸೆಸಿಂಗ್ ಮಾಡಲಾಗುತ್ತದೆ.
ಒಳಚರಂಡಿ ನೀರು ನಿರ್ವಹಣೆಗೆ ಎಸ್‌ಬಿಆರ್ ಟೆಕ್ನಾಲಜಿ ಬಳಕೆ ಮಾಡಿ ವಾಟರ್ ಟ್ರೀಟ್‌ಮೆಂಟ್ ಮಾಡುತ್ತಾರೆ. ಆ ನೀರನ್ನು ತೋಟಗಾರಿಕೆಗೆ ಹಾಗೂ ರಸ್ತೆಗಳನ್ನ ತೊಳೆಯಲು ಬಳಕೆ ಮಾಡಲಾಗುತ್ತದೆ.
ಘಟಕಗಳಲ್ಲಿ ಕಸದ ವಿಂಗಡಣೆ ಮಾಡಲು ಸುಮಾರು ೭೦೦ ರಿಂದ ೮೦೦ ನೌಕರರು ಇದ್ದಾರೆ. ಮರು ವಿಂಗಡಣೆ ಮಾಡಿದ ಮೇಲೆ ಸುಮಾರು ೨೭ ಕ್ಯಾಟಗರಿಗಳನ್ನು ರಿಸೇಲ್ ಮಾಡಲಾಗುತ್ತದೆ ೩ ಏಜೆನ್ಸಿಗಳಿಂದ ೧೭ ಮಷಿನ್‌ಗಳು ಸ್ಥಾಪನೆಯಾಗಿವೆ. ಇಷ್ಟು ಶ್ರಮದಿಂದ ೧೩ ಲಕ್ಷ ಮೆಟ್ರಿಕ್ ಟನ್ ಕಸವನ್ನು ಕೇವಲ ೬ ತಿಂಗಳಲ್ಲಿ ಖಾಲಿ ಮಾಡಲಾಗಿದೆ. ನಗರದಲ್ಲಿರುವ ೧೦೦ ಎಕರೆಯಲ್ಲಿ ೧೦ ಎಕರೆ ಉದ್ಯಾನ ಹಾಗೂ ೯೦ ಎಕರೆಯಲ್ಲಿ ನಗರ ಕಾಡು ನಿರ್ಮಾಣ ಮಾಡಲಾಗಿದೆ.

Leave a Reply

 

%d bloggers like this: