You cannot copy content of this page.
. . .
69 Views

  ಈಗ ರೂಪಾಯಿಗೇ ಬೆಲೆ ಇಲ್ಲ. ಆದರೆ ಆ ಕಾಲವೊಂದಿತ್ತು. ಆಗ ಪೈಸೆ, ಆಣೆಗಳ ಲೆಕ್ಕದಲ್ಲಿ ವ್ಯಾಪಾರ ವ್ಯವಹಾರ ನಡೆಯುತ್ತಿತ್ತು. ಪೈಸೆಗಳಲ್ಲಿ ಲೆಕ್ಕ ಹಾಕಿದರೆ ಒಂದು ರೂಪಾಯಿಗೆ ನೂರು ಪೈಸೆಯಾಗುತ್ತದೆ. ಅದೇ ಆಣೆ ಲೆಕ್ಕ ಆದರೆ ರೂಪಾಯಿಗೆ ಎಂಟು ಆಣೆ. ಮೈಸೂರಿನಲ್ಲಿ ಒಂದು ಗಲ್ಲಿ ಇತ್ತು. ಆ ಗಲ್ಲಿಯಲ್ಲಿ ಏನು ಕೊಂಡರೂ ಬರೀ ಒಂದೂವರೆ ಆಣೆ. ಅಂದರೆ ಸುಮಾರು 8 ಪೈಸೆ. ಒಂದೂವರೆ ಆಣೆಗೆ ಒಂದು ವಸ್ತು ಸಿಗುತ್ತಿದ್ದರಿಂದ ಈ ಗಲ್ಲಿ ಒಂದೂವರೆ ಆಣೆ ಗಲ್ಲಿ ಎಂದೇ ಫೇಮಸ್ ಆಗಿತ್ತು.

  ಮೈಸೂರಿನ ದೇವರಾಜ ಮಾರುಕಟ್ಟೆ ಎದುರಿನ ಬೀದಿಯೇ ಒಂದೂವರೆ ಆಣೆ ಗಲ್ಲಿ. 1799ರಲ್ಲಿ ಮೈಸೂರಿನಲ್ಲಿ ಟಿಪ್ಪು ಆಳ್ವಿಕೆ ಅಂತ್ಯಗೊಂಡು ಮುಮ್ಮಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೇರಿದ್ದರು. ಈ ವೇಳೆ ಅರಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಏರ್ಪಟ್ಟಿತ್ತು. ಹೀಗಾಗಿ ಅಂದಿನ ದಿವಾನರಾಗಿದ್ದ ಪೂರ್ಣಯ್ಯ ಅವರು ಕಾವೇರಿ ನೀರು ತರಲು ಬಲಮುರಿಯಿಂದ ಅರಮನೆಗೆ ನಾಲೆ ತೆಗೆಸಿದರು. ಈಗ ಸಯ್ಯಾಜಿರಾವ್ ರಸ್ತೆ ಏನಿತ್ತು ಅದು ಆಗ 40 ಅಡಿ ಆಳದ ನಾಲೆಯಾಗಿತ್ತು.

  ಅಂದು ನಾಲೆ ತೋಡಲು ಜಾಗ ಬಿಟ್ಟುಕೊಟ್ಟಿದ್ದರಿಂದಾಗಿ ದೇವರಾಜ ಮಾರುಕಟ್ಟೆಯ ಸ್ಥಳ ಇಕ್ಕಟ್ಟಾಯಿತು. ಇದರಿಂದಾಗಿ ದೇವರಾಜ ಮಾರುಕಟ್ಟೆಯ ಎದುರಿನ ಭಾಗದಲ್ಲಿ ಬೀದಿ ಬದಿ ವ್ಯಾಪಾರ ಆರಂಭವಾಯಿತು. ಸಣ್ಣ ಪುಟ್ಟ ವ್ಯಾಪಾರಸ್ಥರು ಇಲ್ಲಿ ತಮ್ಮ ಬದುಕು ಕಟ್ಟಿಕೊಂಡರು. ಅತಿ ಕಡಿಮೆ ಬೆಲೆಯಲ್ಲಿ ಅಂದರೆ ಯಾವುದೇ ವಸ್ತು ಕೊಂಡರೂ ಒಂದೂವರೆ ಆಣೆಗೆ ಸಿಗುತ್ತಿತ್ತು. ಹೀಗಾಗಿ ಬಡ ಗ್ರಾಹಕರು ಹೆಚ್ಚಾಗಿ ಈ ಗಲ್ಲಿಗೆ ಭೇಟಿ ಕೊಡುತ್ತಿದ್ದರು.

  ಬಟ್ಟೆ, ಪಾತ್ರೆ, ಹಣ್ಣು ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳೂ ಇಲ್ಲಿ ಸಿಗುತ್ತಿದ್ದವು. ಸುತ್ತಮುತ್ತಲ ಹಳ್ಳಿಗಳಿಂದಲೂ ಜನ ಇಲ್ಲಿಗೆ ಬರುತ್ತಿದ್ದರು. ತಮಗೆ ಬೇಕಾದ ವಸ್ತುಗಳನ್ನು ಕಡಿಮೆ ಬೆಲೆ ಕೊಂಡುಹೋಗುತ್ತಿದ್ದರು. ಈ ಗಲ್ಲಿ ಮೈಸೂರು ಸುತ್ತಮುತ್ತ ತುಂಬಾ ಫೇಮಸ್ ಆಗಿದ್ದರಿಂದಾಗಿ ವ್ಯಾಪಾರ ವಹಿವಾಟು ಕೂಡಾ ಜೋರಾಗಿ ನಡೆಯುತ್ತಿತ್ತು. ನೂರಾರು ವ್ಯಾಪಾರಿಗಳು ಚಿಕ್ಕ ಚಿಕ್ಕ ಅಂಗಡಿಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. 

  ಇಂತಹ ಭವ್ಯ ಇತಿಹಾಸ ಹೊಂದಿದ್ದ ಒಂದೂವರಾಣೆ ಗಲ್ಲಿ ಈಗ ನಾಮಾವಶೇಷವಾಗಿದೆ. 2006ರಲ್ಲಿ ಮೈಸೂರು ಮಹಾನಗರ ಪಾಲಿಕೆ ಮಕ್ಕಾಜಿ ಚೌಕದಲ್ಲಿರುವ ಈ ಜಾಗವನ್ನು ಖಾಸಗಿ ಕಂಪನಿಯೊಂದಕ್ಕೆ 40 ವರ್ಷಗಳಿಗೆ ಲೀಸಿಗೆ ನೀಡಿದೆ. ಹೀಗಾಗಿ ಈಗ ಅತಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತಿದ್ದ ಒಂದೂವರೆ ಆಣೆ ಗಲ್ಲಿ ಈಗಿಲ್ಲ. ಈಗ ಅದು ನೆನಪು ಮಾತ್ರ.

 

 

%d bloggers like this: