You cannot copy content of this page.
. . .

ಸರ್ದಾರ್ ಪಟೇಲ್‌ರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನೆಹರೂ ಬಯಸಿರಲಿಲ್ಲವೇ? ಗುಹಾ, ಸಚಿವ ಜೈಶಂಕರ್ ಟ್ವಿಟ್ ಸಮರ

 ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ 1947ರಲ್ಲಿ ತನ್ನ ಮೊದಲ ಸಂಪುಟದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರೆ ಅಥವಾ ಇಲ್ಲವೇ ಎಂಬ ವಿಚಾರ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಇತಿಹಾರಕಾರ ರಾಮಚಂದ್ರ ಗುಹಾ ಅವರ ನಡುವಿನ ಟ್ವಿಟರ್‍ ಸಮರಕ್ಕೆ ಕಾರಣವಾಗಿದೆ.

 ವಿದೇಶಾಂಗ ಸಚಿವ ಜೈಶಂಕರ್ ಅವರು ಇತ್ತೀಚೆಗೆ ಮಾಜಿ ಸಚಿವ ವಿ.ಪಿ.ಮೆನನ್ ಅವರ ಪುಸ್ತಕವೊಂದನ್ನು ಉಲ್ಲೇಖಿಸಿ, ‘ಭಾರತದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್‍ ನೆಹರೂ 1947ರಲ್ಲಿ ತನ್ನ ಮೊದಲ ಸಂಪುಟದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಸಚಿವರನ್ನಾಗಿ ಮಾಡಲು ಬಯಸಿರಲಿಲ್ಲ’ ಎಂದು ಆರೋಪಿಸಿದ್ದರು.

 ಈ ಸಂಬಂಧ ಬುಧವಾರ ಮೊದಲ ಟ್ವಿಟ್ ಮಾಡಿದ್ದ ಸಚಿವ ಜೈಶಂಕರ್, ‘ದೇಶದ ಪ್ರಖ‍್ಯಾತ ನಾಗರಿಕ ಸೇವಕ ವಿ.ಪಿ.ಮೆನನ್ ಅವರ ಜೀವನ ಚರಿತ್ರೆಯಲ್ಲಿ ನಾನು ಕಲಿತದ್ದು. ಇದರ ಪ್ರಕಾರ ಜವಾಹರಲಾಲ್ ನೆಹರೂ 1947ರಲ್ಲಿ ತಮ್ಮ ಆರಂಭಿಕ ಮಂತ್ರಿಗಳ ಪಟ್ಟಿಯಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರನ್ನು ಕೈಬಿಟ್ಟಿದ್ದಾರೆ. ಪಟೇಲರು ತಮ್ಮ ಕ್ಯಾಬಿನೆಟ್‍ ಭಾಗವಾಗುವುದನ್ನು ನೆಹರೂ ಎಂದಿಗೂ ಬಯಸಿರಲಿಲ್ಲ. ಉದ್ದೇಶಪೂರ್ವಕವಾಗಿಯೇ ಅವರನ್ನು ಸಚಿವರು ಪಟ್ಟಿಯಿಂದ ಕೈ ಬಿಡಲಾಗಿತ್ತು. ಹೀಗಾಗಿ, ನಿಜವಾದ ಐತಿಹಾಸಿಕ ವ್ಯಕ್ತಿಗೆ ನ್ಯಾಯ ದೊರಕಲಿ’ ಎಂದು ಬರೆದುಕೊಂಡಿದ್ದರು.

 ವಿದೇಶಾಂಗ ಸಚಿವ ಜೈಶಂಕರ್ ಅವರ ಟ್ವಿಟ್‍ಗೆ ಪ್ರತಿಕ್ರಿಯೆ ನೀಡಿರುವ ಇತಿಹಾಸಕಾರ ರಾಮಚಂದ್ರ ಗುಹಾ, ‘ನೆಹರೂ ಕುರಿತ ಇಂತಹ ಟೀಕೆಗಳು ಕಟ್ಟುಕಥೆಯಿಂದ ಕೂಡಿದ್ದಾಗಿದೆ. ಇದನ್ನು ದಿ ಪ್ರಿಂಟ್‍ನ ಶ್ರೀನಾಥ್‍ ರಾಘವನ್ ಸುಳ್ಳು ಎಂದು ಈಗಾಗಲೇ ನಿರೂಪಿಸಿದ್ದಾರೆ. ಅಲ್ಲದೇ, ಆಧುನಿಕ ಭಾರತದ ನಿರ್ಮಾತೃಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವುದು ವಿದೇಶಾಂಗ ಸಚಿವರ ಕೆಲಸವಲ್ಲ. ಆ ಕೆಲಸವನ್ನು ಬಿಜೆಪಿಯ ಐಟಿ ಸೆಲ್‍ಗೆ ಬಿಟ್ಟುಬಿಡಿ’ ಎಂದು ಟ್ವಿಟ್‍ ಮಾಡಿದ್ದಾರೆ.

 ಅಲ್ಲದೆ, ಮತ್ತೊಂದು ಟ್ವಿಟ್​ನಲ್ಲಿ ‘1947 ಆಗಸ್ಟ್ 1 ರಂದು ಜವಹರ್ ಲಾಲ್ ನೆಹರು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಬರೆದಿರುವ ಪತ್ರದಲ್ಲಿ ‘ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟಕ್ಕೆ “ಪ್ರಬಲ ಸ್ತಂಭ” ಎಂದು ಕರೆದಿದ್ದಾರೆ. ಈ ಪತ್ರವನ್ನು ಯಾರಾದರೂ ಸಚಿವ ಜೈಶಂಕರ್ ಅವರಿಗೆ ತೋರಿಸಬಹುದೇ?’ ಎಂದು ಕಾಲೆಳೆದಿದ್ದಾರೆ.   

 ರಾಮಚಂದ್ರ ಗುಹಾ ಅವರ ಟ್ವೀಟ್‍ ಕೂಡಲೇ ಪ್ರತಿಕ್ರಿಯಿಸಿದ ಸಚಿವ ಜೈಶಂಕರ್, ‘ಕೆಲವು ವಿದೇಶಾಂಗ ಸಚಿವರು ಪುಸ್ತಕಗಳನ್ನು ಓದುತ್ತಾರೆ. ಕೆಲವು ಪ್ರಾಧ್ಯಾಪಕರಿಗೂ ಇದು ಒಳ್ಳೆಯ ಅಭ್ಯಾಸವಾಗಬಹುದು. ನಾನು ನಿನ್ನೆ ಬಿಡುಗಡೆ ಮಾಡಿದ ಪುಸ್ತಕವನ್ನು ನಿಮಗೆ ಕಳುಹಿಸಿಕೊಡುತ್ತೇನೆ’ ಎಂದು ಮೆನನ್‍ ಅವರ ಜೀವನ ಚರಿತ್ರೆ ಪುಸ್ತಕವನ್ನು ಓದುವಂತೆ ವ್ಯಂಗ್ಯವಾಗಿ ನುಡಿದಿದ್ದಾರೆ.

 ಸಚಿವರ ಟ್ವಿಟ್‍ಗೆ ದಾಖಲೆ ಸಹಿತ ಉತ್ತರಿಸಿರುವ ರಾಮಚಂದ್ರ ಗುಹಾ, ‘ಸರ್, ನೀವು ಜೆಎನ್‍ಯುನಲ್ಲಿ ಪಿಎಚ್‍ಡಿ ಮಾಡಿದವರು. ಹೀಗಾಗಿ, ನನಗಿಂತ ಹೆಚ್ಚು ಪುಸ್ತಕಗಳನ್ನು ನೀವು ಓದಿರುತ್ತೀರಿ. ಅಂದ ಮೇಲೆ ಆ ಪುಸ್ತಕಗಳಲ್ಲಿ ನೆಹರೂ ಮತ್ತು ಪಟೇಲರ ನಡುವಿನ ಪ್ರಕಟಿತ ಪತ್ರ ವ್ಯವಹಾರವೂ ಇರಬೇಕು. ಈಗ ನಾನು ಹಾಕಿರುವ ಪತ್ರದಲ್ಲಿ ನೆಹರೂ ಅವರು ಪಟೇಲ್‍ರನ್ನು ತಮ್ಮ ಮೊದಲ ಸಚಿವ ಸಂಪುಟದಲ್ಲಿ ‘ಪ್ರಬಲ ಸ್ತಂಭ’ ಎಂದು ಹೇಗೆ ಬಯಸಿದ್ದರೆಂಬುದನ್ನು ದಾಖಲಿಸುತ್ತದೆ. ಅಂತಹ ಪುಸ್ತಕಗಳನ್ನೂ ನೀವು ಗಮನಿಸಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

 

%d bloggers like this: