You cannot copy content of this page.
. . .

ದೇಶದ ಮೊದಲ ಪೈಲಟ್ ಯಾರು ಅಂದರೆ ನಮಗೆ ಸಿಗುವ ಉತ್ತರ ಜೆಆರ್‍ಡಿ ಟಾಟಾ. ಯಾಕೆಂದರೆ ಅಧಿಕೃತವಾಗಿ ಈಗಲೂ ಅವರೇ ದೇಶದ ಮೊದಲ ಪೈಲಟ್‍. ಉದ್ಯಮಿ ಜೆಆರ್‍ಡಿ ಟಾಟಾ ಅವರಿಗೆ 1929 ಫೆಬ್ರವರಿ 10ರಂದು ದೇಶದ ಮೊದಲ ಪೈಲಟ್ ಆಗಿ ಪರವಾನಗಿ ನೀಡಲಾಯಿತು. ಆದರೆ ಕುತೂಹಲದ ವಿಚಾರ ಏನಂದ್ರೆ ಜೆಆರ್‍ಡಿ ಟಾಟಾ ಅವರಿಗಿಂತ ಮೊದಲೇ ಭಾರತ ದೇಶದ ಪ್ರಜೆಯೊಬ್ಬರು ಸ್ವತಃ ವಿಮಾನವೊಂದನ್ನು ತಯಾರಿಸಿದ್ದಾರೆ. ಅವರೇ ವಿಮಾನವನ್ನು ಚಾಲನೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಸಾಕ್ಷ್ಯಗಳೂ ಸಿಕ್ಕಿವೆ. ಖುಷಿಯ ವಿಚಾರ ಅಂದ್ರೆ ಅವರು ನಮ್ಮ ಹೆಮ್ಮೆಯ ಮೈಸೂರಿನವರು ಅನ್ನೋದು.

ಶ್ರೀರಾಮ ವೆಂಕಟಸುಬ್ಬಶೆಟ್ಟಿ (ಎಸ್‍.ವಿ.ಶೆಟ್ಟಿ). ಇವರೇ ವಿಮಾನ ಹಾರಿಸಿದ ಮೊದಲ ಭಾರತೀಯ. ಎಸ್‍.ವಿ.ಶೆಟ್ಟಿಯವರು ತಾವೇ ವಿಮಾನ ವಿನ್ಯಾಸಗೊಳಿಸಿ, ವಿಮಾನ ಹಾರಿಸಿದ ಮೈಸೂರಿನ ಪೈಲಟ್. 1912 ಮಾರ್ಚ್ 10 ರಂದು ಎಸ್‍.ವಿ.ಶೆಟ್ಟಿಯವರು ವಿಮಾನವನ್ನು ಹಾರಿಸಿ, ನಂತರ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿ ಸೈ ಎನಿಸಿಕೊಂಡಿದ್ದರು. ಲೇಖಕ ಜಗನ್ನಾಥ್ ಬಹುಳೆಯವರು ಬರೆದ ‘ಮಾರುತ ಸಖ’ ಎಂಬ ಕೃತಿಯಲ್ಲಿ ಮೈಸೂರು ಪೈಲಟ್ ಕುರಿತ ಮಾಹಿತಿ ಇದೆ. ಕರ್ನಾಟಕ ಪತ್ರಾಗಾರದಲ್ಲೂ ದೇಶದ ಮೊದಲ ಪೈಲಟ್ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ.

1879 ಡಿಸೆಂಬರ್‍ 28ರಂದು ಮೈಸೂರಿನ ಶಿವರಾಮ ಪೇಟೆಯಲ್ಲಿ ಶ್ರೀರಾಮ ವೆಂಕಟಸುಬ್ಬಶೆಟ್ಟಿ ಜನಿಸಿದರು. ಇಲ್ಲಿ ಗ್ರಂಧಿಗೆ ಅಂಗಡಿ ಇಟ್ಟುಕೊಂಡಿದ್ದ ಶ್ರೀರಾಮ ತಿಪ್ಪಯ್ಯಶೆಟ್ಟಿ ಹಾಗೂ ಸಾಕಮ್ಮರ ಪುತ್ರನೇ ಈ ಎಸ್.ವಿ.ಶೆಟ್ಟಿ. ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಓದಿದ ಎಸ್‍.ವಿ.ಶೆಟ್ಟಿ ನಂತರ 1900ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ.ಪದವಿ ಪಡೆದರು. ನಂತರ ಉತ್ತರ ಪ್ರದೇಶದ ರೂರ್ಕಿಯ ಪ್ರತಿಷ್ಠಿತ ಥಾಮ್ಸನ್ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಮೈಸೂರು ಸರ್ಕಾರದಲ್ಲಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಎಸ್‍.ವಿ. ಶೆಟ್ಟಿಯವರಿಗೆ ಉನ್ನತ ಶಿಕ್ಷಣ ಪಡೆಯಲು ಸರ್ಕಾರವೇ ವಿದ್ಯಾರ್ಥಿ ವೇತನ ಮಂಜೂರು ಮಾಡಿತು. ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಲಿಯಲು ಇಂಗ್ಲೆಂಡ್‍ಗೆ ಹೋದ ಅವರನ್ನು ವಿಶೇಷವಾಗಿ ಸೆಳೆದಿದ್ದು ವಿಮಾನಯಾನ ತಂತ್ರಜ್ಞಾನ. ಅದಕ್ಕೆ ಬಹುಮುಖ್ಯ ಕಾರಣ ರೈಟ್ ಸಹೋದರರು ಸಿದ್ಧಗೊಳಿಸಿದ್ದ ವಿಮಾನವೊಂದು 1903 ಡಿಸೆಂಬರ್‍ನಲ್ಲಿ ಆಗಸದಲ್ಲಿ ಹಾರಾಡಿದ್ದು..

ಪ್ರಪಂಚದಲ್ಲಿ ವೈಮಾನಿಕ ತಂತ್ರಜ್ಞಾನ ಆಗಷ್ಟೇ ಚಿಗುರೊಡೆಯುತ್ತಿತ್ತು. ವಿಮಾನ ತಯಾರಿಸುವ ಎ.ವಿ.ರೋ ಎಂಬ ಕಂಪನಿ ಇಂಗ್ಲೆಂಡಿನಲ್ಲಿದ್ದ ಏಕಮಾತ್ರ ಸಂಸ್ಥೆ. ಅಲ್ಲಿ ತರಬೇತಿ ಪಡೆಯೋದಕ್ಕೆ ಎಸ್‍.ವಿ.ಶೆಟ್ಟಿಗೆ ಅವಕಾಶ ಸಿಕ್ಕಿತ್ತು. ಬುದ್ಧಿವಂತರಾಗಿದ್ದ ಎಸ್‍.ವಿ.ಶೆಟ್ಟಿ ಆರೇ ತಿಂಗಳಲ್ಲಿ ವೈಮಾನಿಕ ತಂತ್ರಜ್ಞಾನದ ಅರಿವು ಪಡೆದರು. ಅಷ್ಟೇ ಅಲ್ಲ, ವಿಮಾನ ಹಾರಿಸುವುದರಲ್ಲೂ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಜಾನ್ ಡ್ಯೂಗನ್ ಎಂಬುವವರು ವಿಮಾನವೊಂದನ್ನು ತಯಾರಿಸಿಕೊಡಲು ಎ.ವಿ.ರೋ. ಕಂಪನಿಯನ್ನು ಕೋರಿದ್ದರು. ಆಗ ಡ್ಯೂಗನ್ ಗಾಗಿ 40 ಅಶ್ವಶಕ್ತಿಯ ವಿಮಾನವೊಂದನ್ನು ತಯಾರಿಸಲಾಯಿತು. ಆದರೆ ತಾಂತ್ರಿಕ ದೋಷದ ಕಾರಣದಿಂದ ಅದು ಹಾರಲು ಸಾಧ್ಯವಾಗಲಿಲ್ಲ. ಹೀಗಾಗಿ ಅದರ ಪರೀಕ್ಷೆಯ ಹೊಣೆಯನ್ನು ಎಸ್‍.ವಿ.ಶೆಟ್ಟಿಗೆ ವಹಿಸಲಾಯಿತು. ಸವಾಲು ಸ್ವೀಕರಿಸಿದ ಎಸ್‍.ವಿ.ಶೆಟ್ಟಿ, ವಿಮಾನವನ್ನು ತಾವೇ ಉಡಾವಣೆ ಮಾಡಿದರು. ಆದರೆ ಅದು 50 ಅಡಿ ಏರಿದ ಮೇಲೆ ಕೆಳಕ್ಕುರುಳಿತ್ತು. ಹೀಗಾಗಿ ಆ ವಿಮಾನದಲ್ಲಿನ ನ್ಯೂನತೆಗಳ ಬಗ್ಗೆ ಶೆಟ್ಟಿ  ಅಧ್ಯಯನ ಮಾಡಿದರು.

ಕೆಲವು ದಿನಗಳ ಸಂಶೋಧನೆಯ ನಂತರ ನೂತನ ಬಗೆಯ ವಿಮಾನವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟರು. ಎ.ವಿ.ರೋ. ಕಂಪನಿಯಲ್ಲಿ ಪರ್ಯಾಯ ವಿನ್ಯಾಸವಿರಲಿಲ್ಲ. ಹಾಗಾಗಿ ಶೆಟ್ಟಿ ಅವರಿಗೆ ವಿಮಾನ ನಿರ್ಮಿಸಲು ಅವಕಾಶ ನೀಡಲಾಯಿತು. ಸಂಸ್ಥೆಯ ವಿಶ್ವಾಸ ಉಳಿಸಿಕೊಳ್ಳಲು ತಾವೇ ವಿನ್ಯಾಸ ಮಾಡಿ ಸಿದ್ಧಪಡಿಸಿದ್ದ ವಿಮಾನವನ್ನು 1912ರ ಮಾರ್ಚ್ 10ರಂದು ಪರೀಕ್ಷಾರ್ಥವಾಗಿ ಹಾರಿಸಿ ಸುರಕ್ಷಿತವಾಗಿ ನೆಲದ ಮೇಲಿಳಿಸಿದರು.

ಈ ಪರೀಕ್ಷಾರ್ಥ ಹಾರಾಟದ ವೇಳೆ ಖುದ್ದು ಹಾಜರಿದ್ದ ಜಾನ್ ಡ್ಯೂಗನ್ ಎಸ್‍.ವಿ.ಶೆಟ್ಟಿ ಮರುವಿನ್ಯಾಸ ಮಾಡಿದ್ದ ವಿಮಾನವನ್ನು ಸ್ಥಳದಲ್ಲೇ ಖರೀದಿ ಮಾಡಿದರು. ಆವರೆಗೆ ಡಿ ಮಾದರಿ ವಿಮಾನಗಳನ್ನು ರೂಪಿಸುತ್ತಿದ್ದ ಎ.ವಿ.ರೋ. ಕಂಪನಿ ಹೊಸದನ್ನು ‘ಈ’ ಮಾದರಿ ಎಂದು ಕರೆಯಿತು. ಬ್ರಿಟೀಷ್ ರಾಯಲ್ ಏರ್‍ಫೋರ್ಸ್ ಕೂಡ ಇಂತಹ ಎರಡು ವಿಮಾನಗಳನ್ನು ಖರೀದಿಸಿತು. ಜಾಗತಿಕವಾಗಿಯೂ ಪ್ರಸಿದ್ಧಿಗೆ ಬಂದ ಈ ವಿಮಾನ ಮಾದರಿ ಮುಂದೆ ಮೊದಲ ವಿಶ್ವ ಯುದ್ಧದಲ್ಲಿಯೂ ಬಳಕೆಯಾಯಿತು.

ಅಂದುಕೊಂಡಿದ್ದನ್ನು ಸಾಧಿಸಿದ ನಂತರ ಎಸ್‍.ವಿ.ಶೆಟ್ಟಿ ಭಾರತಕ್ಕೆ ವಾಪಾಸ್ಸಾದರು. ಇಂಗ್ಲೆಂಡಿನಲ್ಲಿ ಸ್ವಂತ ಪರಿಶ್ರಮದಿಂದ ವಿಮಾನ ಮಾದರಿಗಳನ್ನು ವಿನ್ಯಾಸ ಮಾಡಿ ನಿರ್ಮಿಸಿಕೊಟ್ಟ ಶೆಟ್ಟಿ ಅವರಿಗೆ ತಮ್ಮ ತಾಯ್ನೆಲದಲ್ಲಿಯೇ ಮತ್ತೊಂದು ವಿಮಾನ ರೂಪಿಸಿಲು ಸಾಧ್ಯವಾಗಲಿಲ್ಲ. ಮೊದಲ ಮಹಾಯುದ್ಧ ಆರಂಭಗೊಂಡಿದ್ದರಿಂದಾಗಿ, ವಿಮಾನ ನಿರ್ಮಾಣಕ್ಕೆ ಅತ್ಯಗತ್ಯವಾದ ಎಂಜಿನ್ ಅನ್ನು ಬ್ರಿಟನ್‍ನಿಂದ ಆಮದು ಮಾಡಲು ಸಾಧ್ಯವಾಗದಿದ್ದೇ ಇದಕ್ಕೆ ಕಾರಣ.

ತಾಂತ್ರಿಕ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ ಎಸ್‍.ವಿ.ಶೆಟ್ಟಿ ಹೆಚ್ಚು ದಿನ ಬದುಕಲಿಲ್ಲ. ಇನ್‍ಫ್ಲುಯೆಂಜಾಗೆ ತುತ್ತಾದ ಶೆಟ್ಟಿ ಅವರು 39ನೇ ವಯಸ್ಸಿನಲ್ಲೇ (1918ರಲ್ಲಿ) ಕೊನೆಯುಸಿರೆಳೆದರು.  ಬ್ರಿಟೀಷ್ ವೈಮಾನಿಕ ಚರಿತ್ರೆಯಲ್ಲಿ ಶೆಟ್ಟಿ ಸಾಧನೆಗಳು ದಾಖಲಾಗಿವೆ. ಶೆಟ್ಟಿ ಅವರು ರೂಪಿಸಿದ ವಿಮಾನ ಮಾದರಿಗಳು ಮುಂದೆ ಪ್ರಸಿದ್ಧವಾದರೂ ಅದನ್ನು ಎವಿರೋ ತನ್ನದೆಂದೇ ಬಿಂಬಿಸುತ್ತಿದೆ. ಇಂಗ್ಲೆಂಡ್ ವೈಮಾನಿಕ ಇತಿಹಾಸ ರಚನೆ ಸಂದರ್ಭದಲ್ಲಿ ಭಾರತೀಯ ಎಂಜಿನಿಯರ್ ಶೆಟ್ಟಿ ಅವರ ವಿಮಾನ ವಿನ್ಯಾಸ , ಹಾರಿಸಿದ ಬಗೆ ಕುರಿತು ಅಮೂಲ್ಯವಾದ ಕೆಲವು ದಾಖಲೆಗಳು, ಪತ್ರಿಕಾ ತುಣುಕುಗಳು ಲಭಿಸಿವೆ..

ಶೆಟ್ಟಿ ಅವರ ಮೊಮ್ಮಗ ಜಿ.ಆರ್.ನಾಗರಾಜ್ ಹಾಗೂ ಮರಿ ಮಗ ಜಿ.ಎನ್.ಜಯಪ್ರಕಾಶ್ ಅವರು ಶೆಟ್ಟಿಯವರ ಜೀವನ ಸಾಧನೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ, ಈಗಲೂ ಬ್ರಿಟೀಷ್ ವೈಮಾನಿಕ ಇತಿಹಾಸವನ್ನು ಶೋಧಿಸಿ ಶೆಟ್ಟಿ ಅವರ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಭಾರತೀಯರ ಸಾಧನೆಗಳ ಬಗ್ಗೆ ನಿರ್ಲಕ್ಷ್ಯ ಮನೋಭಾವವಿದ್ದ ಬ್ರಿಟೀಷರು ಎಸ್‍.ವಿ.ಶೆಟ್ಟಿ ಅವರಿಗೆ ಸಿಗಬೇಕಾದ ಗೌರವವನ್ನು ನೀಡಲಿಲ್ಲ. ಈಗ ಲಭ್ಯವಿರುವ ಎಲ್ಲಾ ಮಾಹಿತಿ ನೀಡಿದರೂ ನಮ್ಮ ಸರ್ಕಾರಗಳು ಕೂಡ ಮಾನ್ಯತೆ ನೀಡುತ್ತಿಲ್ಲ ಅನ್ನೋದು ಶೆಟ್ಟಿ ಅವರ ಮೊಮ್ಮಗ ನಾಗರಾಜ್ ಅಳಲು. ಜಿಟಿಆರ್‍ಇ ಯಲ್ಲಿ ವಿಜ್ಞಾನಿಯಾಗಿರುವ ಮರಿಮೊಮ್ಮಗ ಜಿ.ಎನ್‍.ಜಯಪ್ರಕಾಶ್ ನಿರಂತರವಾಗಿ ಶೆಟ್ಟಿಯವರ ಅನ್ವೇಷಣೆಗಳನ್ನು ಹೆಕ್ಕಿ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

 

%d bloggers like this: