You cannot copy content of this page.
. . .

   ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಉದ್ದೇಶ. ಈ ಕಾರಣದಿಂದಾನೇ ನಮ್ಮ ದೇಶದಲ್ಲಿ ವಿಚಾರಣೆಗಳು ದೀರ್ಘವಾಗಿ ನಡೆಯುತ್ತವೆ. ಪ್ರಬಲ ಸಾಕ್ಷ್ಯಗಳು ಸಿಕ್ಕಿ, ಆರೋಪ ದೃಢಪಟ್ಟರೆ ಮಾತ್ರ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಅತ್ಯಾಚಾರದಂತಹ ಪೈಶಾಚಿಕ ಕೃತ್ಯಗಳು ನಡೆದಾಗ ಶೀಘ್ರ ವಿಚಾರಣೆ ನಡೆದು ಶಿಕ್ಷೆಯಾಗಬೇಕೆಂಬ ಆಗ್ರಹಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಇದಕ್ಕಾಗಿ ಜಿಲ್ಲೆಗೊಂದರಂತೆ ಶೀಘ್ರಗತಿ ನ್ಯಾಯಾಲಯಗಳ ಸ್ಥಾಪನೆ ಮಾಡಬೇಕೆಂಬ ಕೂಗು ಕೂಡಾ ಇದೆ. ಇದಾಗದಿದ್ದಾಗ ಹೈದರಾಬಾದ್‍ ನಲ್ಲಿ ನಡೆದ ಎನ್‍ ಕೌಂಟರ್‍ ನಂತಹ ಪ್ರಕರಣಗಳನ್ನು ಎಲ್ಲರೂ ಸಮರ್ಥಿಸುವಂತಾಗುತ್ತದೆ. ಕೆಲವರನ್ನು ಬಿಟ್ಟು ಇಡೀ ದೇಶ ಹೈದರಾಬಾದ್‍ ಎನ್‍ ಕೌಂಟರ್‍ ಪ್ರಕರಣವನ್ನು ಸಂಭ್ರಮಿಸುತ್ತಿರುವುದು ಸಹಜ ಕೂಡಾ.

  ಆದರೆ, ಸರಿಯಾದ ವಿಚಾರಣೆ ನಡೆಯದೇ ಒಮ್ಮೊಮ್ಮೆ ಆತುರವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಅನಾಹುತಗಳಿಗೆ ಕಾರಣವಾಗಬಹುದು. ಇದಕ್ಕೆ ಗುರ್‍ ಗಾಂವ್‍ ನಲ್ಲಿ ನಡೆದ ಪ್ರಕರಣವೇ ಉದಾಹರಣೆಯಾಗುತ್ತದೆ.

ಏನಿದು ಗುರ್‍ ಗಾಂವ್‍ ಪ್ರದ್ಯುಮ್ನ ಠಾಕೂರ್‍ ಪ್ರಕರಣ..?

  ಅದು 2017ರ ಸೆಪ್ಟೆಂಬರ್‍ 8ನೇ ತಾರೀಖು.. ಗುರ್‍ ಗಾಂವ್‍ ನ ರಿಯಾನ್‍ ಇಂಟರ್‍ ನ್ಯಾಷನಲ್‍ ಎಂಬ ಪ್ರತಿಷ್ಠಿತ ಶಾಲೆಯಲ್ಲಿ 7 ವರ್ಷದ ಬಾಲಕ ಪ್ರದ್ಯುಮ್ನ ಠಾಕೂರ್‍ ಮೃತದೇಹ ಶಾಲೆ ಶೌಚಾಲಯದಲ್ಲಿ ಕತ್ತುಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಚಾರಣೆ ನಡೆಸಿದ ವಿಶೇಷ ತನಿಖಾ ದಳದ ಸಿಬ್ಬಂದಿ ಶಾಲಾ ಬಸ್‍ ನ ನಿರ್ವಾಹಕ ಅಶೋಕ್‍ ಎಂಬಾತನನ್ನು ಬಂಧಿಸಿದ್ದರು. ನಿರ್ವಾಹಕ ಅಶೋಕ್‍ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿ ಬಾಲಕ ಪ್ರದ್ಯುಮ್ನ ನನ್ನು ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿಬಂದಿತ್ತು. ಪೊಲೀಸರ ಕಿರುಕುಳಕ್ಕೆ ಭಯಬಿದ್ದು ಶಾಲಾ ಬಸ್‍ ನಿರ್ವಾಹಕ ಅಶೋಕ್‍ ನಾನೇ ಬಾಲಕನ್ನು ಕೊಂದಿದ್ದು ಎಂದು ಒಪ್ಪಿಕೊಂಡಿದ್ದ ಕೂಡಾ. ಈ ಪ್ರಕರಣ ದೇಶದಲ್ಲೇ ಸಂಚಲನ ಮೂಡಿಸಿತ್ತು. ದೇಶಾದ್ಯಂತ ಹೋರಾಟಗಳು ನಡೆದಿದ್ದವು.

  ಆದರೆ ಪ್ರದ್ಯುಮ್ನ ಪೋಷಕರಿಗೆ ಏನನ್ನಿಸಿತ್ತೋ ಏನೋ ಮೊದಲಿನಿಂದಲೂ ಅಶೋಕ್‍ ಅಪರಾಧಿ ಅಲ್ಲ ಅಂತಾನೇ ನಂಬಿದ್ದರು. ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲೂ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆದಿಲ್ಲ ಎಂದು ದೃಢಪಟ್ಟಿತ್ತು. ಇದಾದ ಮೇಲೆ ಪ್ರಕರಣ ಬೇರೆ ತಿರುವು ಪಡೆದುಕೊಂಡಿತ್ತು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಯಿತು. ಸಿಬಿಐ ಅಧಿಕಾರಿಗಳು ಶಾಲೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬೇರೆಯದೇ ವಿಚಾರ ಬೆಳಕಿಗೆ ಬಂದಿತ್ತು. ಶಾಲೆಯ 11ನೇ ತರಗತಿ ವಿದ್ಯಾರ್ಥಿಯೊಬ್ಬ ಬಾಲಕ ಪ್ರದ್ಯುಮ್ನ ನನ್ನು ಕೊಲೆ ಮಾಡಿರುವುದು ದೃಢಪಟ್ಟಿತ್ತು.

  ಅಂದಹಾಗೆ 11ನೇ ತರಗತಿ ವಿದ್ಯಾರ್ಥಿ ಕೊಂಚ ಮಾನಸಿಕ ಅಸ್ವಸ್ಥನಾಗಿದ್ದ. ಜೊತೆಗೆ ಕೆಲವೊಮ್ಮೆ ಶಾಲೆಗೆ ಚಾಕು ಕೂಡಾ ತಂದಿದ್ದನಂತೆ. ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ಶಾಲೆಯ ಇತರೆ ಮಕ್ಕಳು ಇದನ್ನು ದೃಢಪಡಿಸಿದ್ದರು. ಹೀಗಾಗಿ 11ನೇ ತರಗತಿ ವಿದ್ಯಾರ್ಥಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯ ಏಕೆ ನಡೆಯಿತು ಎಂಬುದು ಬಯಲಾಗಿತ್ತು.

    ಶಾಲೆಯಲ್ಲಿ ಪರೀಕ್ಷೆಗಳು ಹತ್ತಿರದಲ್ಲಿದ್ದವು. ಆರೋಪಿ 11ನೇ ತರಗತಿ ವಿದ್ಯಾರ್ಥಿಗೆ ಪರೀಕ್ಷೆಗಳು ಬೇಗ ನಡೆಯುವುದು ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ಪರೀಕ್ಷೆ ಮುಂದೂಡಬೇಕೆಂದು ಯೋಚಿಸುತ್ತಿದ್ದಾತನಿಗೆ ಶಾಲೆಯಲ್ಲಿ ಯಾರಾದರೂ ಒಬ್ಬರನ್ನು ಕೊಲೆ ಮಾಡಿದರೆ ಹೇಗೆ ಎಂಬ ಯೋಚನೆ ಬಂದಿದೆ. ಕೊಲೆ ನಡೆದರೆ ಪರೀಕ್ಷೆ ಮುಂದೂಡುತ್ತಾರೆಂದು ಆತ ನಂಬಿದ್ದ. ಆಗ ಅವನು ಶಾಲೆ ಹತ್ತಿರದಲ್ಲೇ ಇದ್ದ ಅಂಗಡಿಯಿಂದ ಚಾಕುವೊಂದನ್ನು ತಂದು ಬಾಲಕನನ್ನು ಕೊಲೆ ಮಾಡಿದ್ದ. ತೀವ್ರ ಹಾಗೂ ಸಮಗ್ರ ವಿಚಾರಣೆ ನಡೆದ ಕಾರಣದಿಂದ ನಿಜವಾದ ಅಪರಾಧಿ ಪತ್ತೆಯಾಗಿದ್ದ. ಇಲ್ಲದೇ ಹೋಗಿದ್ದರೆ ಬಸ್‍ ನಿರ್ವಾಹಕ ಅಶೋಕ್‍ ಶಿಕ್ಷೆ ಅನುಭವಿಸಬೇಕಾಗಿತ್ತು.

 

%d bloggers like this: