You cannot copy content of this page.
. . .

ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದಿಗೆ ಕ್ರಮ; ಶೈಕ್ಷಣಿಕ ಸಭೆಯಲ್ಲಿ ಸಚಿವ ಸುರೇಶ್‍ಕುಮಾರ್ ಭರವಸೆ

 ಮೈಸೂರು: ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ರದ್ದು ಮಾಡಿ, ಶಿಕ್ಷಕರ ಸ್ನೇಹಿ ನೀತಿ ತರಲು ಸಿದ್ಧತೆ ನಡೆಸಲಾಗುತ್ತಿದೆ. ಫೆಬ್ರವರಿ ಮತ್ತು ಮಾರ್ಚ್ ಅಧಿವೇಶನದಲ್ಲಿ ಚರ್ಚಿಸಿ ಕಾಯ್ದೆ ರೂಪಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.

 ಆಡಳಿತ ತರಬೇತಿ ಸಂಸ್ಥೆಯ ಹೇಮಾವತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೈಕ್ಷಣಿಕ ಪ್ರಗತಿ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

 ಕಡ್ಡಾಯ ವರ್ಗಾವಣೆ ಎಂಬುದು ಯಾವ ಇಲಾಖೆಯಲ್ಲೂ ಇಲ್ಲ. ಹೀಗಿರುವಾಗ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ಎಂಬುದು ಸರಿಯಲ್ಲ. ಈಗಾಗಲೇ ವಿಧಾನ ಪರಿಷತ್ ಸದಸ್ಯರೊಂದಿಗೆ ಈ ಕುರಿತು ಮಾತನಾಡಿದ್ದು ಅವರು ಶಿಕ್ಷಕರ ಸ್ನೇಹಿ ನೀತಿ ರೂಪಿಸಲು ಒಪ್ಪಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಿ ಕಾಯ್ದೆ ರೂಪಿಸಲಾಗುವುದು ಎಂದರು.

ಶಿಕ್ಷಕ ಮಿತ್ರಾ ಆಪ್ ಬಿಡುಗಡೆ : ಶಿಕ್ಷಕರಿಗೆ ವೃತ್ತಿಗೆ ಸಂಬಂಧಿಸಿದಂತೆ ತಮ್ಮದೇ ಆದಾ ಅನೇಕ ಸಮಸ್ಯೆಗಳು ಇರುತ್ತವೆ. ಅದನ್ನು ಬಗೆಹರಿಸಿಕೊಳ್ಳಲು ಕಚೇರಿಗಳಿಗೆ ಅಲೆಯುವುದು ಬೇಡ. ಹಾಗಾಗಿ, ಶಿಕ್ಷಕರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಕ ಮಿತ್ರಾ ಎಂಬ ಆಪ್ ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಅಲ್ಲದೇ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮುಂದೆ ಬರುವ ವ್ಯಕ್ತಿಗಳಿಗೆ ಅನುಮತಿ ನೀಡಲು ಕೂಡ ಪ್ರತ್ಯೇಕ ಆಪ್ ಸಿದ್ಧಗೊಳಿಸಲಾಗುವುದು ಎಂದು ತಿಳಿಸಿದರು.

ಶೀಘ್ರವೇ 10,600 ಶಿಕ್ಷಕರ ಹುದ್ದೆ ಆಯ್ಕೆ ಪ್ರಕಟಣೆ

 ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳು ಹಿಂದುಳಿದಿರುವುದು ಮತ್ತು ಚಾಮರಾಜನಗರ ಗಡಿ ಭಾಗದಲ್ಲಿ ಪರೀಕ್ಷೆ ಬರೆಯಬೇಕಾಗಿರುವ ವಿದ್ಯಾರ್ಥಿಗಳು ಶಾಲೆಗೆ ಬರದಿರುವುದು ಸಮಸ್ಯೆಯಾಗಿದೆ. ಇನ್ನು ಉಳಿದಂತೆ ಮೈಸೂರು ವಿಭಾಗದಲ್ಲಿ ಶೈಕ್ಷಣಿಕ ಪ್ರಗತಿಗೆ ತಕ್ಕಂತೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಶೀಘ್ರದಲ್ಲಿಯೇ 10,600 ಹುದ್ದೆ ಆಯ್ಕೆಗೆ ಪ್ರಕಟಣೆ ನೀಡಲಾಗುವುದು ಎಂದು
ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದರು.

 

 

%d bloggers like this: