You cannot copy content of this page.
. . .

-ಡಿ.ಉಮಾಪತಿ

 ನಾವು ಭೂಮಿಗೆ ಭಾರವಾಗಿ ಬದುಕುತ್ತಿದ್ದೇವೆ. ಮಾನವನ ಮನೆಯಾದ ಭೂಮಿ ಬಹುದೊಡ್ಡ ಗಂಡಾಂತರಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ ಈ ಪೈಕಿ ಬಹುಮುಖ್ಯವಾದದ್ದು. ಈ ಬದಲಾವಣೆ ಬೇರೆಯೇ ಆದ ಜೀವನಶೈಲಿಯನ್ನು ಬೇಡುತ್ತಿದೆ. ಅಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮನಸ್ಸು ನಮಗೆ ಇಲ್ಲವಾಗಿದೆ. ಈ ನಿಸ್ಸೀಮ ತಾತ್ಸಾರ ಈ ಗೋಳವನ್ನು ಪ್ರಳಯದತ್ತ ಎಳೆದೊಯ್ಯುತ್ತಿದೆ. ಈ 463-ಪ್ರಳಯದೊಳಕ್ಕೆ ನಾವು ನಿದ್ದೆಯಲ್ಲಿ ನಡೆಯತೊಡಗಿದ್ದೇವೆ. ಇದು ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯ ನಿದ್ದೆ. ಸಾವಿನ ನಿದ್ದೆ. The world it seems is most clearly walking into catastrophe ಅಂತ The World Economic Forumನ ವರದಿ ಹೇಳಿದೆ.

 ಅಂಟಾರ್ಕ್ಟಿಕಾದ ಹಿಮಬಂಡೆಗಳು ಕರಗತೊಡಗಿವೆ. ಸಾಗರಗಳ ತಾಪಮಾನ ಹೆಚ್ಚತೊಡಗಿದೆ. ಈ ಎಚ್ಚರಿಕೆಯ ಗಂಟೆಗಳನ್ನು ನಾವು ಲೆಕ್ಕಿಸುತ್ತಿಲ್ಲ. ಭೂಗೋಳದ ತಾಪಮಾನ ಮುಗಿಲು ಮುಟ್ಟಿದೆ. ಅದು ಇನ್ನು ಒಂದೂವರೆ ಡಿಗ್ರಿ ಸೆಲ್ಶಿಯಸ್ ಹೆಚ್ಚಿದರೆ ಅಳಿವು ಕಾದಿದೆ. ಹೆಚ್ಚದಂತೆ ಕಾಯಲು ಉಳಿದಿರುವ ಅವಧಿ ಹನ್ನೆರಡೇ ವರ್ಷಗಳು. ಈ ಅವಧಿಯಲ್ಲಿ ಮನುಕುಲ ಬದುಕುವ ದಿನನಿತ್ಯದ ರೀತಿನೀತಿಗಳು ಬಹಳ ದೊಡ್ಡ ರೀತಿಯಲ್ಲಿ ಬದಲಾಗಲೇಬೇಕು. ಅರ್ಥಾತ್ ಭೂಮಿಗೆ ಭಾರವಾಗಿ ಬದುಕುವುದನ್ನು ಮನುಕುಲ ಇನ್ನಾದರೂ ಬಿಡಲೇಬೇಕು. ಮುಂಜಾನೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಮನುಷ್ಯನ ಚಟುವಟಿಕೆ ಇಂಗಾಲಾಮ್ಲವನ್ನು ಹೆಚ್ಚು ಹೆಚ್ಚು ವಿಸರ್ಜಿಸತೊಡಗಿವೆ. 1970ರಿಂದ ಇಲ್ಲಿಯವರೆಗೆ ಶೇ.40ರಷ್ಟು ವಿಶ್ವದ ಜೀವವೈವಿಧ್ಯತೆ (ಬಯೋಡೈವರ್ಸಿಟಿ) ನಷ್ಟವಾಗಿ ಹೋಗಿದೆ. ಈ ವಿದ್ಯಮಾನ ನಿಸರ್ಗದ ಆಹಾರ ಸರಪಳಿಯನ್ನು ತುಂಡರಿಸಿದೆ. ಅಕಾಲದ ಮಳೆಗಳು, ಪ್ರವಾಹಗಳು, ಬರಗಾಲಗಳು ಕಾಗದದ ಮೇಲಿನ ಪ್ರಮೇಯಗಳಲ್ಲ. ನಿತ್ಯ ಬದುಕಿನ ವಾಸ್ತವಗಳು. ಇವು ಇನ್ನೂ ಘೋರ ಮತ್ತು ಕಠೋರ ರೂಪವನ್ನು ಧರಿಸಲಿವೆ. ಮನುಕುಲ ತತ್ತರಿಸಲಿದೆ. ಅನ್ನ ನೀರಿಗಾಗಿ ಹಾಹಾಕಾರ ವ್ಯಾಪಿಸಲಿದೆ.

 ಧರೆಯೆ ಹತ್ತಿ ಉರಿಯುವ ಈ ಹೊತ್ತಿನಲ್ಲಿ ಮನೆಯಲ್ಲಿ ಯಾರು ಇರಬೇಕು, ಯಾರನ್ನು ಹೊರ ದಬ್ಬಬೇಕು ಎಂಬ ವಿಷಯವನ್ನು ದೇಶದ ಮೇಲೆ ಹೇರಿರುವುದು ಬಹು ದೊಡ್ಡ ವಿಪರ್ಯಾಸ. ಪ್ರಭುಗಳು ಪ್ರಜೆಗಳೊಂದಿಗೆ ಸಮರಕ್ಕೆ ಇಳಿದಿದ್ದಾರೆ. ತಿಳಿವಿನ ಬೆಳಕು ಚೆಲ್ಲಬೇಕಾದ ಮೀಡಿಯಾ ಜನರನ್ನು ಕತ್ತಲಲ್ಲಿ ಇಡತೊಡಗಿದೆ. ಜನಪರ ಇರಬೇಕಿತ್ತು. ಆದರೆ ಜನವಿರೋಧಿ ಆಗಿ ಹೋಗಿದೆ. ನಮ್ಮಲ್ಲಿ ಪತ್ರಿಕಾಸ್ವಾತಂತ್ರ್ಯಕ್ಕೆ ಬದ್ಧ ಎಂದು ಬಹಿರಂಗವಾಗಿ ಸಾರುವ ಸರ್ಕಾರವಿದೆ. ತನ್ನ ತಪ್ಪು ತಡೆಗಳನ್ನು, ಅಪದ್ಧ ಆತ್ಮರತಿಯನ್ನು ಪ್ರಶ್ನೆ ಮಾಡುವ ಮಾಧ್ಯಮ ಸಂಸ್ಥೆಗಳನ್ನು ”ದಾರಿಗೆ ತರಲು” ಸರ್ಕಾರ ದಂಡಪ್ರಯೋಗದ ತನ್ನದೇ ವಿನೂತನ ವಿಧಾನಗಳನ್ನು ಹೊಂದಿದೆ.

 ಜನತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ವಗ೯ದ ಬಗೆಗೆ ಸದಾ ಎಚ್ಚರವನ್ನು ಮೂಡಿಸುವ ಮಹತ್ತರ ಕಾಯ೯ವನ್ನು ನೆರವೇರಿಸುವ ಸಮೂಹ ಮಾಧ್ಯಮಗಳನ್ನು ’ಕಾಯುವ ನಾಯಿ’ಗೆ ಹೋಲಿಸುವುದು ಉಂಟು. ಆದರೆ ಈ ಕಾಯುವ ನಾಯಿ ಕಾಯಿಲೆ ಬಿದ್ದಿದೆ ಇಲ್ಲವೇ ಅದಕ್ಕೆ ಹುಚ್ಚು ಹಿಡಿದಿದೆ. ವಿನಾಕಾರಣ ಅಮಾಯಕರು ಮತ್ತು ನಿರಪರಾಧಿಗಳ ಮೇಲೆರಗಿ ಪರಚಿ ಕಚ್ಚಿ ಬೊಗಳಿ,  ತಂಬಲ ತಿನಿಸಿದವರ ಮುಂದೆ ಬಾಗಿ ಬಾಲ ಆಡಿಸುತ್ತದೆ. ಸರ್ಕಾರಕ್ಕೆ ಕಿರಿ ಕಿರಿಯೆನಿಸುವ ವ್ಯಕ್ತಿಗಳು ಸಂಸ್ಥೆಗಳನ್ನು ಮೀಡಿಯಾ ಬೇಟೆ ಆಡುತ್ತಿದೆ…. ಪ್ರಶ್ನೆಯ ಹತ್ಯೆಯಾಗಿದೆ. ಸರ್ಕಾರ ಮತ್ತು ಆಡಳಿತಪಕ್ಷವನ್ನು ಪ್ರಶ್ನಿಸುವ ಬದಲು ಪ್ರತಿಪಕ್ಷಗಳ ಹಿಂದೆ ಬಿದ್ದಿರುವ ವಿರ್ಯಾಸ ಜರುಗಿದೆ.

 ಮಡಿಲಲ್ಲಿ ಆಡುವ ಮೀಡಿಯಾ…ಅಥವಾ ಎಂಬೆಡ್ಡೆಟ್ ಮೀಡಿಯಾ?.ಈ ನುಡಿಗಟ್ಟನ್ನು ಹಿಂದಿಯಲ್ಲಿ ಗೋದಿ ಮೀಡಿಯಾ ಎಂದು ಟಂಕಿಸಿದವರು ಹಿಂದೀಯ ನಿಷ್ಠುರವಾದಿ ಪತ್ರಕರ್ತ ರವೀಶ್ ಕುಮಾರ್. ಗೋದೀ ಎಂದರೆ ಹಿಂದಿ ಅಥವಾ ಹಿಂದುಸ್ತಾನಿಯಲ್ಲಿ ಮಡಿಲು ಎಂದು ಅರ್ಥ. ನೀವು ಕೇಳಿಸಿಕೊಂಡೇ ಇರುತ್ತೀರಿ?.ಅಲ್ಲಾಮ ಇಕ್ಬಾಲ್ ಅವರ ಕವಿತೆಯನ್ನು ಈಗಲೂ ನಾವು ಹಾಡುತ್ತೇವೆ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾಂ ಹಮಾರಾ?.ಈ ಹಾಡಿನಲ್ಲಿ ಬರ್ತದೆ ಗೋದೀ ಎಂಬ ಪದ. ಗೋದೀ ಮೇಂ ಖೇಲತೀ ಹೈ ಇಸಕೀ ಹಜಾರೋ ನದಿಯಾಂ…ಈ ಗೋದಿ ಸಕಾರಾತ್ಮಕ?.ಆದರೆ ಕಾಯುವ ನಾಯಿ ಬೊಗಳುವುದನ್ನು ಬಿಟ್ಟು, ರೊಟ್ಟಿಗೆ ಆಸೆಪಟ್ಟು ಅದನ್ನು ಎಸೆದವರ ಮಡಿಲಲ್ಲಿ ಬಾಲ ಅಲ್ಲಾಡಿಸಿ ಹಲ್ಲು ಕಿರಿದು ಆಡುವ ಮುದ್ದಿನ ನಾಯಿ…ಮುದ್ದು ಮಾಡಿದರೆ ಮುದ್ದು ಮಾಡಿಸಿಕೊಳ್ಳುತ್ತದೆ…ಕಾಲಿಂದ ಝಾಡಿಸಿ ಒದ್ದರೆ ಒದೆಸಿಕೊಂಡು ಕುಂಯ್ ಗುಟ್ಟುತ್ತದೆ.

 ಬಹುತೇಕ ಮೀಡಿಯಾ ಇಂದು ಲಾಭಬಡುಕ ಕಾರ್ಪೊರೇಟುಗಳು ಮತ್ತು ಅಧಿಕಾರದ ಹಪಾಹಪಿಯ ರಾಜಕೀಯ ಹಿತಾಸಕ್ತ ಶಕ್ತಿಗಳ ಕೈಯಲ್ಲಿನ ಅಸ್ತ್ರವಾಗತೊಡಗಿದೆ. ಅಧಿಕಾರಸ್ಥರನ್ನು ಬಲಿಪಶುವಿನಂತೆ ಚಿತ್ರಿಸಲಾಗುತ್ತಿದೆ.ಮುಖ್ಯಧಾರೆಯ ಹಲವು ಸುದ್ದಿವಾಹಿನಿಗಳು ದೇಶದ ಬಹುದೊಡ್ಡ ಕಾರ್ಪೊರೇಟ್ ಕಂಪನಿಗಳಿಂದ ನಡೆಸಲ್ಪಡುತ್ತಿವೆ, ಇಲ್ಲವೇ ಅವುಗಳಿಂದ ಸಾಲರೂಪದ ಆರ್ಥಿಕ ನೆರವು ಪಡೆದಿರುವ ವರದಿಗಳಿವೆ. ಬಹುತೇಕ ಸಮೂಹ ಮಾಧ್ಯಮಗಳು ಫೇಕ್ ನ್ಯೂಸ್ ತಯಾರಿಕೆ ಮತ್ತು ಹಂಚಿಕೆಯಲ್ಲಿ ನೇರ ಪಾಲುದಾರನಾಗಿದೆ ಇಲ್ಲವೇ ತಟಸ್ಥವಾಗಿ ಅಪಾಯಕಾರಿ ಮೌನ ತಳೆದಿದೆ.

 ಪ್ರಶ್ನಿಸುವ ಬದಲು ಸಂದೇಹಪಡುವ ಬದಲು ಕಣ್ಣು  ಮುಚ್ಚಿ ನಂಬುವ ಶ್ರದ್ಧೆಯನ್ನು ಬೆಳೆಸುವುದು ಫೇಕ್ ನ್ಯೂಸ್ ನ ಗುರಿ. ಫೇಕ್ ನ್ಯೂಸ್ ನ ಬುನಿಯಾದಿ ಕೆಲಸ ತರ್ಕದ ಬದಲು ಕುರುಡು ಶ್ರದ್ಧೆ ಬೆಳೆಸುವುದು. ನಿಜ ಸಮಸ್ಯೆಗಳಾದ ನಿರುದ್ಯೋಗ, ರೈತಾಪಿ ಬಿಕ್ಕಟ್ಟು- ಆತ್ಮಹತ್ಯೆಗಳು, ಶಿಕ್ಷಣ ವ್ಯವಸ್ಥೆಯ ಕುಸಿತ ಮುಂತಾದವನ್ನು ಬದಿಗೆ ಸರಿಸಿ ಅವುಗಳ ಚರ್ಚೆಯ ಆವರಣವನ್ನು ತಾನು ಕಬಳಿಸಿ, ಅವುಗಳಿಗೆ ಆವರಣವನ್ನೇ ಉಳಿಸದಂತೆ ದಟ್ಟವಾಗಿ ಕವಿದು ಬಿಡುವುದೇ ಫೇಕ್ ನ್ಯೂಸ್.  ಒಂದು ರೀತಿಯಲ್ಲಿ ಮೆದುಳಿನ ಹತ್ಯೆ ಆಲೋಚನೆಯ ಹತ್ಯೆಯೇ ಅದರ ಗುರಿ.

 ನಾವು ಶ್ರೇಷ್ಠ ಅವರು ಕನಿಷ್ಠ ಎನ್ನುವ ಎರಡೇ ದೃಷ್ಟಿ ಫೇಕ್ ನ್ಯೂಸ್ ನಲ್ಲಿರುತ್ತದೆ. ಜನರ ಆಲೋಚನಾ ಶಕ್ತಿಯನ್ನು ಕುಂದಿಸುವುದು. ಜನರ ಆಲೋಚನೆಯನ್ನು ನಿಯಂತ್ರಿಸುವ ಇಲ್ಲವೇ ಅದನ್ನು ಬಂದ್ ಮಾಡಿಸುವುದು ಮತ್ತು ಜನಸಮೂಹಗಳ ಆಲೋಚನಾ ಶಕ್ತಿಗೆ ಜೋಮು ಹಿಡಿಸುವುದು ಫೇಕ್ ನ್ಯೂಸ್ ನ ಅಸಲಿ ಉದ್ದೇಶ ಆಲೋಚನೆಯನ್ನು ಕೊಲ್ಲುವುದು. ಮಾಹಿತಿಯನ್ನು ತಣ್ಣನೆಯ ತರ್ಕ ಮತ್ತು ವಾಸ್ತವಾಂಶಗಳ ಆಧಾರದ ಬದಲು ಭಾವಾವೇಶದಿಂದ ಸ್ವೀಕರಿಸುವಂತೆ ಮಾಡುವುದು ಈ ಷಡ್ಯಂತ್ರದ ಉದ್ದೇಶ.

 ಕಾಗೆ ಕಿವಿ ಕಚ್ಚಿಕೊಂಡು ಹೋಯಿತು (ಕವ್ವಾ ಕಾನ್ ಲೇಕೆ ಉಡ ಗಯಾ) ಎಂಬ ಮಿಥ್ಯೆಯೊಂದು ಉತ್ತರ ಭಾರತದಲ್ಲಿ ಈಗಲೂ ಪ್ರಚಲಿತ. ಕಿವಿ ಕಚ್ಚಿಕೊಂಡು ಹೋಯಿತೇ ಎಂದು ತಡವಿ ನೋಡಿಕೊಳ್ಳುವುದನ್ನೂ ಮರೆತು,  ಕಾಗೆಯನ್ನು ಕೊಲ್ಲುವ ರೋಷಾವೇಶದಿಂದ ತಾಸುಗಟ್ಟಲೆ ಅದರ ಬೆನ್ನು ಬೀಳುವ ಹೆಡ್ಡತನದ ಖೆಡ್ಡಾಕ್ಕೆ ಜನರನ್ನು ಕೆಡವಲಾಗುತ್ತಿದೆ. ತಾಸುಗಟ್ಟಲೆ ಕಾಗೆಯ ಹಿಂದೆ ಓಡಿ ಒಮ್ಮೆ ದಣಿದು, ನೋಡಿಕೊಂಡರೆ ಕಿವಿ ಇದ್ದಲ್ಲೇ ಇದೆ!! ಇಂತಹ ಸುಳ್ಳು ಕಾಗೆಗಳನ್ನು ಸೃಷ್ಟಿಸುವ ಕಾರ್ಖಾನೆಗಳನ್ನು ದೇಶದ ಉದ್ದಗಲಕ್ಕೆ ಹುಟ್ಟಿ ಹಾಕಲಾಗುತ್ತಿದೆ..

 ಹಿಂದು-ಮುಸ್ಲಿಮ್ ಮತ್ತು ಇಂಡಿಯಾ- ಪಾಕಿಸ್ತಾನ್ ಚರ್ಚೆಗಳಲ್ಲಿ ಜನರನ್ನು ಮೈಮರೆಸುವ ದುಷ್ಟ ಪ್ರಯತ್ನ ವಿಶೇಷವಾಗಿ ಟೆಲಿವಿಷನ್ ಮಾಧ್ಯಮದಿಂದ ನಡೆದಿದೆ. ರೈತರು, ಕೂಲಿಕಾರರು, ಕಾರ್ಮಿಕರ ಸಮಸ್ಯೆಗಳು ಸಂಕಟಗಳು, ಸಭೆಗಳು ಟೀವಿಯಲ್ಲಿ ನಾಪತ್ತೆಯಾಗಿವೆ…ನಿರುದ್ಯೋಗ, ಶಿಕ್ಷಣದ ದುಸ್ಥಿತಿ ಕುರಿತು ಚಕಾರ ಇಲ್ಲ. ಇತಿಹಾಸವನ್ನು ತಿರುಚಲಾಗುತ್ತದೆ… ಲಕ್ಷಾಂತರ ಫೀಸಿನ ಖಾಸಗಿ ಯೂನಿವರ್ಸಿಟಿಗಳ ನಡುವೆ ಬಡಬಗ್ಗರು, ತಳವರ್ಗಗಳ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ಪಡೆಯಬಹುದಾದ ಒಂದು ವಿಶ್ವವಿದ್ಯಾಲಯವನ್ನು ಖಳನಾಯಕನನ್ನಾಗಿ ಚಿತ್ರಿಸುತ್ತದೆ. ಬಡಜನರಿಗೆ ಅದರ ಬಾಗಿಲುಗಳನ್ನು ಮುಚ್ಚಿಸುವ ಸಂಚಿನಲ್ಲಿ ಭಾಗಿಯಾಗುತ್ತಿದೆ.

-.. ಮುಂದುವರಿಯುತ್ತದೆ

2 thoughts on “ಕಾವಲು ನಾಯಿಯಲ್ಲ- ಮುದ್ದಿನ ನಾಯಿ”

Comments are closed.

 

%d bloggers like this: