You cannot copy content of this page.
. . .

    ಗೆರೆ ಗೀಚದೆ ಚಿತ್ರ ಬಿಡಿಸೋದಕ್ಕೆ ಆಗುತ್ತದಾ..? ಬರೀ ಚುಕ್ಕಿಗಳಲ್ಲೇ ಕಲಾಕೃತಿ ಅರಳುತ್ತಾ..? ಕಲಾವಿದ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು.. ಹೇಗೆ ಬೇಕಾದರೂ ಕಲಾಕೃತಿ ಅರಳಿಸಬಹುದು.. ಚುಕ್ಕಿಗಳಲ್ಲಿ ವಿಧವಿಧವಾದ ರಂಗೋಲಿ ಬಿಡಿಸುತ್ತಾರೆ ಎನ್ನುವುದಾದರೆ, ಅದೇ ಚುಕ್ಕಿಯಲ್ಲಿ ಕಲಾಕೃತಿ ಯಾಕೆ ರಚಿಸಬಾರದು ಅನ್ನೋ ಪ್ರಶ್ನೆ ಮೈಸೂರಿನ ಕಲಾವಿದ ಮೋಹನ್ ವರ್ಣೇಕರ್ ಅವರ ಮನಸಲ್ಲಿ ಮೂಡಿತ್ತು.. ಆ ಪ್ರಶ್ನೆಗೆ ಉತ್ತರವೇ ಈ ಕಲಾಕೃತಿಗಳು..!

  ಮೋಹನ್ ವರ್ಣೇಕರ್‍ ಅವರು ವಿಧಾನಸೌಧದಲ್ಲಿ ಅಧಿಲೇಖನಾಧಿಕಾರಿಯಾಗಿದ್ದವರು. ನಿವೃತ್ತಿಯಾದ ಬಳಿಕ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಚುಕ್ಕಿಯನ್ನು ಚೊಕ್ಕವಾಗಿ ಬಳಸಿಕೊಂಡು ಅದರಲ್ಲೇ ಚಿತ್ರ ರಚಿಸುವುದು ಇವರ ಹೆಗ್ಗಳಿಕೆ.. ಮೋಹನ್‍ ವರ್ಣೇಕರ್, ೪೦ ವರ್ಷಗಳಿಂದ ಚುಕ್ಕಿಚಿತ್ರ ಬಿಡಿಸುತ್ತಲೇ ಬಂದಿದ್ದಾರೆ. ವಿಶೇಷವೆಂದರೆ ಇದಕ್ಕೆ ಅವರು ಯಾರ ಬಳಿಯೂ ತರಬೇತಿ ಪಡೆದಿಲ್ಲ. ಅಸಲಿಗೆ ಆಗ ಇವರಿಗೆ ಚುಕ್ಕಿಚಿತ್ರ ಎಂಬ ಪ್ರಕಾರದ ಕಲಾಕೃತಿ ಇದೆ ಎಂಬುದೂ ತಿಳಿದಿರಲಿಲ್ಲ. ಹೊಸದಾಗಿ ಏನನ್ನಾದರೂ ಪ್ರಯತ್ನಿಸಬೇಕೆಂದು ಯೋಚಿಸಿದ ಮೋಹನ್ ಚುಕ್ಕಿಯಲ್ಲಿ ಚಿತ್ರ ಬಿಡಿಸುವ ಕಲೆಯನ್ನು ಅಭ್ಯಾಸ ಮಾಡುತ್ತಾ ಹೋದರು.

1 ಚಿತ್ರಕ್ಕೆ ೨೫ ಗಂಟೆ ಬೇಕು..!:

   ಗೆರೆಗಳಲ್ಲಿ ಚಿತ್ರಬಿಡಿಸುವುದಾದರೆ ಬೇಗ ಮುಗಿಸಿಬಿಡಬಹುದು. ಇಲ್ಲಿ ಎಲ್ಲವೂ ಚುಕ್ಕಿಗಳಲ್ಲೇ ಮೂಡಬೇಕು. ಒಂದು ಚಿತ್ರ ಮೂಡಬೇಕು ಅಂದರೆ ಕನಿಷ್ಠ ಕೋಟಿ ಚುಕ್ಕಿ ಇಡಬೇಕು. ಹೀಗೆ ಒಂದೇ ಒಂದು ಗೆರೆ ಎಳೆಯದೇ ಬರೀ ಚುಕ್ಕಿಗಳಲ್ಲೇ ಚಿತ್ರ ಬಿಡಿಸಬೇಕೆಂದರೆ ಕನಿಷ್ಠ ಎಂದರೂ 25 ಗಂಟೆಯ ಶ್ರಮ ಬೇಕು. ಕೆಲವೊಂದು ಚಿತ್ರಗಳನ್ನು ರಚಿಸಲು 60 ಗಂಟೆ ತೆಗೆದುಕೊಂಡಿದ್ದೂ ಇದೆಯಂತೆ..

   ಮೋಹನ್ ಸಾಹಿತಿಗಳ ಚುಕ್ಕಿಚಿತ್ರ ರಚಿಸುತ್ತಾರೆ. 1974ರಲ್ಲಿ ಮೊದಲ ಬಾರಿಗೆ ಇವರು ರಚಿಸಿದ್ದು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚುಕ್ಕಿಚಿತ್ರ. ಹೀಗೆ ಕುವೆಂಪು, ಬೇಂದ್ರೆ, ಕಾರಂತ, ತ್ರಿವೇಣಿ, ಅನಕೃ, ನಟ ಡಾ.ರಾಜ್‌ಕುಮಾರ್ ಮುಂತಾದವರ ಚಿತ್ರಗಳನ್ನು ಬರೆದು, ಸ್ವತಃ ಅವರಿಗೇ ಉಡುಗೊರೆಯಾಗಿ ಕೊಟ್ಟಿದ್ದಾರೆ. ಆದರೆ, ಇವರು ಯಾವುದಕ್ಕೂ ಪ್ರತಿಫಲವನ್ನು ಬಯಸಿಲ್ಲ. ಇದನ್ನು ವೃತ್ತಿಯಾಗಿಯೂ ಮಾಡಿಕೊಂಡಿಲ್ಲ.

ಒಂದು ಚಿತ್ರ 2-3 ಕೋಟಿ ಚುಕ್ಕಿ..!

ಇತ್ತೀಚೆಗೆ ಮೋಹನ್ ವರ್ಣೇಕರ್ ಎರಡು ಸಿಂಹಗಳ ಚುಕ್ಕಿ ಚಿತ್ರವೊಂದನ್ನು ರಚಿಸಿದ್ದಾರೆ. ಇದರಲ್ಲಿ ಬರೋಬ್ಬರಿ ೨-೩ ಕೋಟಿ ಚುಕ್ಕಿಗಳಿವೆಯಂತೆ. ಇದನ್ನು ರಚಿಸಲು ಅವರು ತೆಗೆದುಕೊಂಡ ಸಮಯ ೬೦ ಗಂಟೆಗಳು. ಇದಕ್ಕೆ `ಫೆರೋಶಿಯಸ್ ಬ್ಯೂಟಿ' (ಉಗ್ರ ಸೌಂದರ್ಯ) ಎಂಬ ಶೀರ್ಷಿಕೆಯನ್ನೂ ಇಟ್ಟಿದ್ದಾರೆ.

ಚುಕ್ಕಿ ಚಿತ್ರಕಾರನೊಳಗೊಬ್ಬ ಸಾಹಿತಿ..

   ಮೋಹನ್ ವರ್ಣೇಕರ್ ಸಾಹಿತಿಯೂ ಹೌದು. ಕಥಾ ಸಂಕಲನ, ಕಾದಂಬರಿ, ಕವನ ಸಂಕಲನ, ಮಕ್ಕಳ ಕಥೆಗಳು ಸೇರಿದಂತೆ ವಿವಿಧ ಪ್ರಕಾರಗಳ ೫೭ ಪುಸ್ತಕಗಳನ್ನು ಬರೆದಿದ್ದಾರೆ. ಅಪರಿಮಿತ ಸಾಹಿತ್ಯ ಆಸಕ್ತಿಯನ್ನೂ ಹೊಂದಿದ್ದಾರೆ. ಕನ್ನಡ ಸಾಹಿತ್ಯದ ಮೇಲೆ ಇವರಿಗಿರುವ ಆಸಕ್ತಿಯಿಂದಲೇ ಇವರು ಸಾಹಿತಿಗಳ ಚಿತ್ರಗಳನ್ನೇ ಹೆಚ್ಚಾಗಿ ಬರೆಯುತ್ತಾರೆ.
   ಈಗ ಸಾಹಿತಿಗಳ ಜತೆ ಲಾಲ್ ಬಹದ್ದೂರ್ ಶಾಸ್ತ್ರಿ, ಗಾಂಧೀಜಿ ಸೇರಿದಂತೆ ಹಲವು ನಾಯಕರ ಚಿತ್ರಗಳನ್ನು ಬರೆಯುತ್ತಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಮೋಹನ್ ಅವರ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಲವಾರು ಸಂಘಟನೆ, ಸಂಸ್ಥೆಗಳ ವತಿಯಿಂದ ಪ್ರಶಸ್ತಿಗಳ ಗರಿಯೂ ಇವರ ಮುಡಿಗೇರಿದೆ.

ಸಿರಿ ಮೈಸೂರು

 

%d bloggers like this: