You cannot copy content of this page.
. . .

  ಕಾಂಗ್ರೆಸ್‍ ನಾಯಕ ಹಾಗೂ ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಐಎನ್​ಎಕ್ಸ್​ ಮೀಡಿಯಾ ಹಗರಣದ ಆರೋಪಿಯಾಗಿರುವ ಪಿ.ಚಿದಂಬರಂ ಅವರಿಗೆ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ.

 ನವೆಂಬರ್‍ 28 ರಂದು ವಿಚಾರಣೆ ನಡೆಸಿದ್ದ ಜಸ್ಟೀಸ್​ ಆರ್.ಭಾನುಮತಿ ನೇತೃತ್ವ ತ್ರಿಸದಸ್ಯ ಪೀಠ ಚಿದಂಬರಂ ಅವರ ಜಾಮೀನು ಅರ್ಜಿಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ನವೆಂಬರ್‍ 15ರಂದು ದೆಹಲಿ ಹೈಕೋರ್ಟ್​ ಜಾಮೀನು ನಿರಾಕರಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಮೆಟ್ಟಿಲೇರಿದ್ದರು.

  74 ವರ್ಷದ ಚಿದಂಬರಂ ಅವರಿಗೆ ಜಾಮೀನು ನೀಡಿದಲ್ಲಿ ಸಾಕ್ಷಿದಾರರಿಗೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ ಎಂದು ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯ ತನ್ನ ವಾದ ಮಂಡಿಸಿತ್ತು. ಇಡಿ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್​ ತುಷಾರ್ ಮೆಹ್ತಾ, ಇಂತಹ ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆಗೆ ಪೆಟ್ಟು ನೀಡುತ್ತವೆ. ಜೊತೆಗೆ ಜನರ ನಂಬಿಕೆಗಳೂ ನಶಿಸುವಂತೆ ಮಾಡುತ್ತದೆ ಎಂದು ಹೇಳಿದ್ದರು. ಚಿದಂಬರಂ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಅಭಿಷೇಕ್​ ಮನುಸಿಂಘ್ವಿ, ಹಗರಣದ ಸಾಕ್ಷಿದಾರರ ಮೇಲೆ ತಮ್ಮ ಕಕ್ಷಿದಾರ ಪ್ರಭಾವ ಬೀರಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದರು.

  ಪಿ.ಚಿದಂಬರಂ ಅವರನ್ನು ಆಗಸ್ಟ್‍ 12ರಂದು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದಲ್ಲಿ ಅಕ್ಟೋಬರ್‍ 22ರಂದು ಜಾಮೀನು ದೊರೆತಿತ್ತು. ಆದರೆ ಅಕ್ಟೋಬರ್‍ 16ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸತತ ಎರಡು ಗಂಟೆ ವಿಚಾರಣೆ ನಡೆಸಿ ಚಿದಂಬರಂ ಅವರನ್ನು ಬಂಧಿಸಿತ್ತು.

 

%d bloggers like this: