You cannot copy content of this page.
. . .

4 ತಿಂಗಳಾದ್ರೂ ಕೆಡಲ್ಲ ಟೊಮ್ಯಾಟೋ; ಮೈಸೂರಿನ ಸಂಸ್ಥೆಯಿಂದ ಅದ್ಭುತ ಟೆಕ್ನಾಲಜಿ

    ಟೊಮ್ಯಾಟೋ ಬೆಳೆಗಾರರು ಯಾವಾಗಲೂ ಬೆಲೆ ಕುಸಿತದಿಂದ ಕಂಗಾಲಾಗುತ್ತಾ ಕುಳಿತಿರುತ್ತಾರೆ. ಸೂಕ್ತ ಬೆಲೆ ಸಿಗದೇ ಟೊಮ್ಯೊಟೊವನ್ನು ಬೀದಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ. ರೈತರ ಈ ಸಮಸ್ಯೆಗೆ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ಪರಿಹಾರ ಕಂಡುಹಿಡಿದಿದೆ. ಅತಿ ಕಡಿಮೆ ವೆಚ್ಚದಲ್ಲಿ ಟೊಮ್ಯಾಟೊವನ್ನು 4 ತಿಂಗಳಿಗೂ ಹೆಚ್ಚು ಕಾಲ ಕೆಡದಂತೆ ಸಂಗ್ರಹಿಸಿಡುವ ತಂತ್ರಜ್ಞಾನ ಇದಾಗಿದೆ. ಇದು ಮೈಸೂರಿಗೆ ಹೆಮ್ಮೆ ತರುವಂತಹ ಮತ್ತೊಂದು ಅದ್ಭುತ ಸಾಧನೆ.

  ಇದಕ್ಕೆ ಕೋಲ್ಡ್‍ ಸ್ಟೋರೇಜ್‍ ಅವಶ್ಯಕತೆ ಇಲ್ಲ, ಯಾವುದೇ ದುಬಾರಿ ಯಂತ್ರಗಳೂ ಬೇಕಾಗಿಲ್ಲ. ಅತ್ಯಂತ ಸರಳ ಹಾಗೂ ರೈತರಿಗೆ ಕೈಗೆಟಕುವ ರೀತಿಯಲ್ಲಿ ಈ ತಂತ್ರಜ್ಞಾನ ರೂಪಿಸಲಾಗಿದೆ. ಮೈಸೂರಿನ CFTRI ಅಧಿಕಾರಿಗಳ ಪ್ರಕಾರ ಕೇವಲ ಕೆಜಿಗೆ 3 ರೂಪಾಯಿ ಖರ್ಚು ಮಾಡಿದರೆ ಟೊಮ್ಯಾಟೋವನ್ನು 4 ತಿಂಗಳ ಕಾಲ ಕೆಡದಂತೆ ಇಡಬಹುದು.

  CFTRI ಅಧಿಕಾರಿಗಳು ಸಿದ‍್ಧಪಡಿಸಿ ತಂತ್ರಜ್ಞಾನದ ಪ್ರಕಾರ ನಿರ್ದಿಷ್ಟ ಶಾಖಭರಿತ ಚೀಲಗಳಲ್ಲಿ ಉಪ್ಪಿನ ದ್ರಾವಣದಲ್ಲಿ ಟೊಮ್ಯಾಟೋ ಬೆರೆಸಿಟ್ಟರೆ ಟೊಮ್ಯಾಟೋ ಯಾವುದೇ ಕಾರಣಕ್ಕೂ ಕೆಡುವುದಿಲ್ಲ. ಟೊಮ್ಯಾಟೋವನ್ನು ಚೀಲದಲ್ಲಿ ಹಾಗೆಯೇ ಇಡಬಹುದು, ಇಲ್ಲವೆ ಅರ್ಧ ಕತ್ತರಿಸಿಯೂ ಇಡಬಹುದು. ಆದರೆ ಅದು 4 ತಿಂಗಳ ಬಿಟ್ಟು ನೋಡಿದರೂ ಮೊದಲಿದ್ದ ಸ್ಥಿತಿಯಲ್ಲಿಯೇ ಇರುತ್ತದೆ.

  ಟೊಮ್ಯಾಟೋ ಬೇಗ ಹಣ್ಣಾಗುವುದರಿಂದ ಒಂದೆರಡು ದಿನಗಳಲ್ಲೇ ಮಾರಿಬಿಡಬೇಕು. ಆದರೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಟೊಮ್ಯಾಟೋ ಬೆಲೆ ಕೆಜಿಗೆ 1 ರೂಪಾಯಿಗಿಂತ ಕಡಿಮೆ ಇರುತ್ತದೆ. ದೂರದ ಮಾರುಕಟ್ಟೆಗಳಿಗೆ ಸಾಗಿಸೋಣವೆಂದರೆ ಅಷ್ಟು ದಿನ ಟೊಮ್ಯಾಟೋ ಉಳಿಯುವುದಿಲ್ಲ. ಇದು ರೈತರಿಗೆ ಸಮಸ್ಯೆಯಾಗಿತ್ತು.

 ಆದರೆ CFTRI ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಬಳಸಿ ಒಂದು ಕೆಜಿ ಪ್ಲಾಸ್ಟಿಕ್‍ ಚೀಲದಲ್ಲಿ ಟೊಮ್ಯಾಟೋವನ್ನು 4 ತಿಂಗಳ ಕಾಲ ಸಂಗ್ರಹಿಸಿಡಬಹುದು. ಬೆಲೆ ಜಾಸ್ತಿಯಾದಾಗ ಅದನ್ನು ಮಾರಬಹುದು. ಇನ್ನೊಂದಡೆ ದೂರದ ಪ್ರದೇಶಗಳಿಗೆ, ಹೆಚ್ಚು ದಿನ ಪ್ರಯಾಣದ ಮೂಲಕ ಸಾಗಿಸುವಂತಹ ಪ್ರದೇಶಗಳಿಗೂ ಈ ತಂತ್ರಜ್ಞಾನದ ಮೂಲ ಟೊಮ್ಯಾಟೋ ಸರಬರಾಜು ಮಾಡಬಹುದು.

  ಕಡಿಮೆ ವೆಚ್ಚದಲ್ಲಿ ಟೊಮ್ಯಾಟೋ ಸಂಗ್ರಹಿಸಿಡಬಹುದಾದ್ದರಿಂದ ರೈತರೇ ಈ ತಂತ್ರಜ್ಞಾನವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಈ ಮೂಲಕ ಉತ್ತಮ ಬೆಲೆಗೆ ಟೊಮ್ಯಾಟೊ ಮಾರಿ ಬದುಕು ಸುಂದರವಾಗಿಸಿಕೊಳ್ಳಬಹುದು.

 

%d bloggers like this: