You cannot copy content of this page.
. . .

ಹೀಗೆ ಮಾಡಿದರೆ 6 ತಿಂಗಳಾದರೂ ಕೆಡುವುದಿಲ್ಲ ಟೊಮ್ಯಾಟೊ..!

120 Views

ಟೊಮ್ಯಾಟೋ ಬೆಳೆಗಾರರದ್ದು ಯಾವಾಗಲೂ ಒಂದೇ ಗೋಳು.. ಫಸಲು ಬಂದಾಗ ಬೆಲೆ ಇರೋದಿಲ್ಲ, ಬೆಲೆ ಇದ್ದಾಗ ಫಲಸು ಬಂದಿರೋದಿಲ್ಲ ಅನ್ನೋದು.. ಸಂಗ್ರಹಿಸಿಡೋಣ ಅಂದ್ರೆ ಟೊಮ್ಯೋಟೋ ನಾಲ್ಕೈದು ದಿನದ ಮೇಲೆ ಇರೋದಿಲ್ಲ.. ಹೀಗಾಗೇ ಬೆಲೆ ಸಿಗದಿದ್ದಾಗ ರೈತರು ಮಾರುಕಟ್ಟೆಗೆ ತಂದ ಟೊಮ್ಯಾಟೋವನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುತ್ತಾರೆ.. ಪ್ರತಿ ವರ್ಷ ಇದು ಇದ್ದಿದ್ದೇ.. ಆದ್ರೆ ಈಗ ತಾಂಜೇನಿಯಾದ ರೈತನೊಬ್ಬನ ಆವಿಷ್ಕಾರ, ಟೊಮ್ಯಾಟೋ ಬೆಳೆಗಾರರಲ್ಲಿ ಆಶಾಕಿರಣ ಮೂಡಿಸಿದೆ..

   ಹೌದು, ತಾಂಜೇನಿಯಾದ ರೈತ ಡುವಿಮಾನಾ ಎಂಬಾತ 6 ತಿಂಗಳವರೆಗೆ ಟೊಮ್ಯಾಟೋವನ್ನು ಕೆಡದಂತೆ ಸಂಗ್ರಹಿಸಿಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರು ಕೋಲ್ಡ್‍ ಸ್ಟೋರೇಜ್‍ ನಿರ್ಮಾಣ ಮಾಡಲಿಲ್ಲ.. ಲಕ್ಷ ಲಕ್ಷ ಹಣ ಕೂಡಾ ಖರ್ಚು ಮಾಡಲಿಲ್ಲ.. ನಯಾಪೈಸೆ ಖರ್ಚಿಲ್ಲದೇ ಟೊಮ್ಯಾಟೋವನ್ನು 6 ತಿಂಗಳು ಸಂಗ್ರಹಿಸಿ ಲಾಭ ಕಾಣುತ್ತಿದ್ದಾರೆ.. ಟೊಮ್ಯಾಟೋವನ್ನು ಕೆಡದಂತೆ ಸಂಗ್ರಹಿಸೋಕೆ  ರೈತ ಡುವಿಮಾನಾ ಆಯ್ಕೆ ಮಾಡಿಕೊಂಡಿರೋದು ಬೂದಿಯನ್ನ.. ತಮಾಷೆ ಎನಿಸಿದರೂ ಇದು ನಿಜ..! ಕಟ್ಟಿಗೆಗಳು ಸುಟ್ಟ ಮೇಲೆ ಉಳಿಯುವ ಬೂದಿ ಟೊಮ್ಯಾಟೋವನ್ನು 6 ತಿಂಗಳು ಕೆಡದಂತೆ ಕಾಪಾಡುತ್ತದೆ ಅನ್ನೋದು ಸಾಬೀತಾಗಿದೆ..

   ತಾಂಜೇನಿಯಾದ ಬರುಂಡಿ ಅನ್ನೋ ಗ್ರಾಮದ ರೈತನಾಗಿರುವ ಡುವಿಮಾನಾ, ಪ್ರತಿ ಬಾರಿ ಟೊಮ್ಯಾಟೋ ಬೆಳೆದಾಗಲೂ ನಷ್ಟ ಅನುಭವಿಸುತ್ತಿದ್ದ.. ಒಳ್ಳೆ ಫಸಲು ಬಂದಾಗ ಟೊಮ್ಯಾಟೋವನ್ನು ಕೊಳ್ಳುವವರೇ ಇರಲಿಲ್ಲ.. ನಮ್ಮ ರೈತರಂತೆಯೇ ಈತನೂ ಕೊಳ್ಳುವವರಿಲ್ಲದಿದ್ದಾಗ ಟೊಮ್ಯಾಟೋವನ್ನು ತಿಪ್ಪೆಗೆ ಸುರಿಯುತ್ತಿದ್ದ.. ಇಲ್ಲದಿದ್ದರೆ ಗಿಡಗಳಲ್ಲಿಯೇ ಹಾಗೇ ಬಿಟ್ಟುಬಿಡುತ್ತಿದ್ದ..

ತಾಂಜೇನಿಯಾದಲ್ಲಿ ಆಗಸ್ಟ್‍ ಹಾಗೂ ಸೆಪ್ಟೆಂಬರ್‍ ತಿಂಗಳಲ್ಲಿ ಟೊಮ್ಯಾಟೋ ಉತ್ತಮ ಫಸಲು ಬರುತ್ತದೆ.. ಈ ಕಾರಣಕ್ಕೇ ಈ ವೇಳೆಯಲ್ಲೇ ಹೆಚ್ಚು ಟೊಮ್ಯಾಟೋ ಬೆಳೆಯುತ್ತಾರೆ.. ಆದ್ರೆ ಈ ಆಗಸ್ಟ್, ಸೆಪ್ಟೆಂಬರ್‍ ತಿಂಗಳುಗಳಲ್ಲಿ ತಾಂಜೇನಿಯಾದಲ್ಲಿ ಟೊಮ್ಯಾಟೋಗೆ ಸೂಕ್ತ ಬೆಲೆ ಸಿಗೋದಿಲ್ಲ. ಆಗ ಎಲ್ಲಾ ರೈತರು ಶೇಕಡಾ 50ರಷ್ಟು ಫಸಲನ್ನು ಹಾಳುಮಾಡಿಕೊಳ್ಳುತ್ತಿದ್ದರು..

ಇದರಿಂದ ನೊಂದಿದ್ದ ರೈತ ಡುವಿಮಾನಾ, ಟೊಮ್ಯಾಟೋವನ್ನು ಒಂದಷ್ಟು ತಿಂಗಳು ಕಾಲ ಸಂರಕ್ಷಿಸಿಡಲು ಸಾಧ್ಯವಾ ಎಂಬುದರ ಬಗ್ಗೆ ಆವಿಷ್ಕಾರ ಮಾಡಲು ಶುರು ಮಾಡಿದ.. ಮೊದಲಿಗೆ ಟೊಮ್ಯಾಟೋಗಳನ್ನು ನೀರಿನಲ್ಲಿ ಮುಳುಗಿಸಿಟ್ಟು ನೋಡಿದ, ಪ್ರಯೋಜನವಾಗಲಿಲ್ಲ.. ಮಣ್ಣಿನಡಿ ಹೂತಿಟ್ಟ, ನೋ ಯೂಸ್‍.. ಕರ್ಟನ್‍ ಬಾಕ್ಸ್‍ಗಳಲ್ಲಿ ಇಟ್ಟು ನೋಡಿದ, ಆಗಲಿಲ್ಲ.. ಕೊನೆಗೆ ಮರಳಿನಲ್ಲಿಯೂ ಹುದುಗಿಸಿಟ್ಟ.. ಎಲ್ಲ ಪ್ರಯತ್ನಗಳೂ ವ್ಯರ್ಥವಾದವು.. ಎಲ್ಲಿ ಸಂಗ್ರಹಿಸಿಟ್ಟರೂ ಟೊಮ್ಯಾಟೋಗಳು ಕೆಲವೇ ದಿನಗಳಲ್ಲಿ ಕೊಳೆತುಹೋಗುತ್ತಿದ್ದವು.. ಆದರೆ ಡುವಿಮಾನಾ ತನ್ನ ಸಂಶೋಧನೆ ಮಾತ್ರ ನಿಲ್ಲಿಸಲಿಲ್ಲ..

   ಒಮ್ಮೆ ಯಾರೂ ಕೊಳ್ಳುವವರಿಲ್ಲದಿದ್ರಿಂದ ಟೊಮ್ಯಾಟೋಗಳನ್ನು ತೋಟದಲ್ಲಿ ಹಾಗೇ ಬಿಡಲಾಗಿತ್ತು.. ಕೆಲ ದಿನಗಳಲ್ಲಿ ಗಿಡಗಳಲ್ಲಿದ್ದ ಟೊಮ್ಯಾಟೋ ಹಣ್ಣುಗಳು ಕೊಳೆತುಹೋಗಿದ್ದವು.. ಆದರೆ ಬಾಳೆಗಿಡದ ಬುಡದಲ್ಲಿದ್ದ ಕೆಲ ಗಿಡಗಳಲ್ಲಿನ ಟೊಮ್ಯಾಟೋಗಳು ಹಾಗೇ ಫ್ರೆಶ್‍ ಆಗಿದ್ದವು.. ಅದನ್ನು ಗಮನಿಸಿದ ಡುವಿಮಾನಾಗೆ ಕುತೂಹಲ ಉಂಟಾಗಿತ್ತು.. ಇದರ ಹಿಂದಿನ ಗುಟ್ಟನ್ನು ತಿಳಿಯಲು ಆತ ಸಾಕಷ್ಟು ತಿಪ್ಪರಲಾಗ ಹಾಕಿದ. ಕೊನೆಗೆ ಕಾಣಿಸಿದ್ದು, ಬಾಳೆ ಗಿಡಗಳ ಬುಡದಲ್ಲಿ ಹಾಕಿದ್ದ ಬೂದಿ.. ಆ ಬೂದಿ ಮೇಲಿದ್ದ ಹಣ್ಣುಗಳು ಮಾತ್ರ ಕೊಳೆತಿರಲಿಲ್ಲ.. ಇದರಿಂದ ಖುಷಿಯಾದ ಡುವಿಮಾನಾ, ಬೂದಿ ಅಡಿಯಲ್ಲಿ ಟೊಮ್ಯಾಟೋ ಅಡಗಿಸಿಟ್ಟು ನೋಡಿದ.. ಆಗ ಆತನಿಗೇ ಅಚ್ಚರಿ ಕಾದಿತ್ತು.. ಯಾಕಂದ್ರೆ 6 ತಿಂಗಳ ಬಳಿಕ ನೋಡಿದರೂ ಟೊಮ್ಯಾಟೋ ಫ್ರೆಶ್‍ ಆಗಿತ್ತು..!

ರಟ್ಟಿನ ಬಾಕ್ಸ್‍ಗಳನ್ನು ತಂದು ಅದರಲ್ಲಿ ಒಂದು ಪದರ ಬೂದಿ, ಒಂದು ಪದರ ಟೊಮ್ಯಾಟೋ ಹೀಗೆ ಜೋಡಿಸಿ, ಅದನ್ನು ಗಾಳಿ ಆಡದ ಸ್ಥಳದಲ್ಲಿ ಇಡಲಾಯಿತು. 15 ದಿನ ಬಿಟ್ಟು ನೋಡಿದಾಗ ಟೊಮ್ಯಾಟೋ ಇಟ್ಟಿದ್ದು ಇಟ್ಟ ಹಾಗೆಯೇ ಇತ್ತು. ತಿಂಗಳು, ನಾಲ್ಕು, ಐದು ತಿಂಗಳು, ಆರು ತಿಂಗಳು ಹೀಗೆ ಸತತವಾಗಿ ಪರೀಕ್ಷಿಸಿದಾಗ 6 ತಿಂಗಳವರೆಗೆ ಟೊಮ್ಯಾಟೋ ಉತ್ತಮವಾಗಿದ್ದು ಕಂಡುಬಂತು..! ಡುವಿಮನಾ ಇದನ್ನು ಬಳಸಿಕೊಂಡು ತನ್ನ ತೋಟದಲ್ಲಿ ಬೆಳೆದಿದ್ದ ಟೊಮ್ಯಾಟೋವನ್ನು ಸಂರಕ್ಷಿಸಲು ಶುರು ಮಾಡಿದ..

    ಆಗಸ್ಟ್, ಸೆಪ್ಟೆಂಬರ್‍ ತಿಂಗಳಲ್ಲಿ ಬೆಳೆದ ಟೊಮ್ಯಾಟೋಗೆ ಆಗ ಬೆಲೆ ಇರೋದಿಲ್ಲ.. ಹೀಗಾಗಿ ಆಗ ಬೆಳೆದ ಟೊಮ್ಯಾಟೋವನ್ನು ಬೂದಿಯಲ್ಲಿ ಮುಚ್ಚಿಡುವ ಡುವಿಮಾನಾ, ಡಿಸೆಂಬರ್‍, ಜನವರಿ, ಫೆಬ್ರವರಿಯಲ್ಲಿ ಮಾರಾಟ ಮಾಡುತ್ತಾನೆ. ಈ ವೇಳೆ ಟೊಮ್ಯಾಟೋಗೆ ಉತ್ತಮ ಬೆಲೆ ಇರುವುದರಿಂದ ಡುವಿಮಾನಾಗೆ ಹೆಚ್ಚು ಲಾಭ ಬರುತ್ತಿದೆ.

   ಹೀಗಾಗಿ ಡುವಿಮಾನಾ ಈತ ಸಣ್ಣ ಉದ್ಯಮಿಯಾಗಿದ್ದಾನೆ.. ರೆಸ್ಟೋರೆಂಟ್‍ಗಳಿಗೆ ವರ್ಷ ಪೂರ್ತಿ ಟೊಮ್ಯಾಟೋ ಪೂರೈಕೆ ಮಾಡುತ್ತಾನೆ. ಸಾಲದೆಂಬಂತೆ ಡುವಿಮಾನಾ ಕೂಡಾ ಸಣ್ಣ ರೆಸ್ಟೋರೆಂಟ್‍ ಒಂದನ್ನು ಶುರು ಮಾಡಿದ್ದಾನೆ.. ಕೆಲವರಿಗೆ ಉದ್ಯೋಗವನ್ನೂ ಕೊಟ್ಟಿದ್ದಾನೆ..

  2015ರಲ್ಲಿ ಬೂದಿಯಲ್ಲಿ ಟೊಮ್ಯಾಟೋ ಸಂರಕ್ಷಣೆ ಮಾಡುವುದನ್ನು ಕಂಡುಕೊಂಡ ಡುವಿಮಾನಾ, ಇದರಿಂದ ನನ್ನ ಜೀವನಶೈಲಿಯೇ ಬದಲಾಗಿದೆ ಎಂದು ಹೇಳುತ್ತಾನೆ.. ಟೊಮ್ಯಾಟೋ ಸಾಗಿಸಲು ಒಂದು ಹೊಸ ಟ್ರಕ್‍ ಖರೀದಿ ಮಾಡೋದಕ್ಕೂ ಡುವಿಮಾನಾ ಮುಂದಾಗಿದ್ದಾನೆ.

  ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಕಡೆ ಟೊಮ್ಯಾಟೋ ಬೆಳೆದ ರೈತರು ಯಾವಾಗಲೂ ನಷ್ಟ ಅನುಭವಿಸುತ್ತಿದ್ದಾರೆ. ಇವರು ಈ ವಿಧಾನವನ್ನು ಬಳಸಿ ಟೊಮ್ಯಾಟೋವನ್ನು ಸಂರಕ್ಷಿಸಿದರೆ ಉತ್ತಮ ಲಾಭ ಕಂಡುಕೊಳ್ಳಲು ಸಾಧ್ಯವಾಗಬಹುದು. ಈ ವಿಧಾನ ಅತ್ಯಂತ ಸುಲಭ ಹಾಗೂ ಯಾವುದೇ ಖರ್ಚಿಲ್ಲದ್ದು.. ಹೀಗಾಗಿ ನಮ್ಮ ರೈತರೂ ಇದನ್ನು ಪ್ರಯತ್ನಿಸಬಹುದು. ಮೊದಲು ಒಂದು ಬಾಕ್ಸ್‍ನಲ್ಲಿ ಸಂಗ್ರಹಿಸಿಟ್ಟು ನೋಡಿ, ನಮ್ಮ ವಾತಾವರಣದಲ್ಲೂ ಈ ವಿಧಾನ ಯಶಸ್ವಿಯಾದರೆ ದೊಡ್ಡ ಮಟ್ಟದಲ್ಲಿ ಸಂಗ್ರಹ ಮಾಡಬಹುದು.

 

%d bloggers like this: