You cannot copy content of this page.
. . .

ಡಿಸೆಂಬರ್ 9ರ ನಂತರ ಏನಾಗುತ್ತೆ..? ಪಕ್ಷಗಳ ಲೆಕ್ಕಾಚಾರಗಳೇನು..?

   ಉಪಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಹಾಗೂ ರಾಜಕೀಯ ನಾಯಕರು ಹೆಚ್ಚು ಮಾತನಾಡಿದ್ದು ಡಿಸೆಂಬರ್‍ 9ರ ನಂತರದ ಬೆಳವಣಿಗೆಯ ಬಗ್ಗೆ. ವಿಶೇಷವಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‍ ಹಾಗೂ ಜೆಡಿಎಸ್ ಮೈತ್ರಿಯಾಗುತ್ತೆ ಎಂಬ ವಿಚಾರ ಹೆಚ್ಚು ಚಾಲ್ತಿಯಲ್ಲಿತ್ತು. ಜೆಡಿಎಸ್‍ ಹಾಗೂ ಕಾಂಗ್ರೆಸ್‍ ಎರಡೂ ಪಕ್ಷಗಳ ನಾಯಕರು ಈ ವಿಚಾರವನ್ನು ಚುನಾವಣಾ ಪ್ರಚಾರದುದ್ದಕ್ಕೂ ಚಾಲ್ತಿಯಲ್ಲಿಟ್ಟಿದ್ದರು. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 6 ಸ್ಥಾನ ಗೆದ್ದರೆ ಮಾತ್ರ ಸರ್ಕಾರ ಉಳಿಸಿಕೊಳ್ಳಬಹುದು. ಆದರೆ, ಕಾಂಗ್ರೆಸ್‍ ಹಾಗೂ ಜೆಡಿಎಸ್‍ ಪಕ್ಷಗಳ ನಾಯಕರು ಬಿಜೆಪಿ 6 ಸೀಟು ಕೂಡಾ ಗೆಲ್ಲುವುದಿಲ್ಲ ಎಂಬ ಉತ್ಸಾಹದಲ್ಲಿದ್ದಾರೆ. ಬಿಜೆಪಿಯವರು ಕೂಡಾ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಲ್ಲಿದ್ದರೂ ಫಲಿತಾಂಶ ಉಲ್ಟಾ ಹೊಡೆದರೂ ಆಶ್ಚರ್ಯವಿಲ್ಲ. ಒಂದು ವೇಳೆ ಸರ್ಕಾರ ಉರುಳುವಂತಾದರೆ ಮುಂದೇನಾಗಬಹುದು ಎಂಬ ಲೆಕ್ಕಾಚಾರಗಳಲ್ಲೇ ಪ್ರಚಾರ ಕಾರ್ಯ ಮುಗಿದಿದೆ.

  ಕಾಂಗ್ರೆಸ್‍ ಹಾಗೂ ಜೆಡಿಎಸ್‍ ನಾಯಕರು ಪ್ರಚಾರದ ವೇಳೆ ಏನು ಹೇಳಿದ್ದಾರೆ..? ಅದರ ವಿವರ ಇಲ್ಲಿದೆ.

ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣವಾಗುತ್ತದೆ.
ಎಚ್.ಡಿ.ಕುಮಾರಸ್ವಾಮಿ
ಮಾಜಿ ಸಿಎಂ
ಡಿಸೆಂಬರ್ 9ರ ನಂತರ ರಾಜ್ಯದಲ್ಲಿ ಬದಲಾವಣೆಯ ಪರ್ವ
ಡಾ.ಜಿ. ಪರಮೇಶ್ವರ್
ಮಾಜಿ ಡಿಸಿಎಂ
ಡಿಸೆಂಬರ್ 9ರ ನಂತರ ರಾಜ್ಯದ ಜನತೆಗೆ ಶುಭ ಸುದ್ದಿ ನೀಡಲಿದ್ದೇವೆ
ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ
ಡಿಸೆಂಬರ್ 9ರ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದಿಲ್ಲ
ಕೆ.ಸಿ.ವೇಣುಗೋಪಾಲ್
ರಾಜ್ಯ ಕಾಂಗ್ರೆಸ್ ಉಸ್ತುವಾರಿ
ದೇವೇಗೌಡರು ಒಪ್ಪಿದರೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ
ಬಿ.ಕೆ.ಹರಿಪ್ರಸಾದ್
ಕಾಂಗ್ರೆಸ್ ನಾಯಕ
ಉಪಸಮರದ ಫಲಿತಾಂಶದ ನಂತರ ನಾವೇ ಕಿಂಗ್ ಮೇಕರ್
ಕೋನರೆಡ್ಡಿ
ಜೆಡಿಎಸ್ ನಾಯಕ

ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್‍-ಜೆಡಿಎಸ್‍ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿದ್ದಾರೆ. ದೇವೇಗೌಡರು ಸಿದ್ದರಾಮಯ್ಯರನ್ನು ಹೊರಗಿಟ್ಟರೆ ಮತ್ತೆ ಮೈತ್ರಿಗೆ ಸಿದ್ದ ಎಂದು ಹೇಳಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲೋ ಏನೋ ಕೆಲವರು ಮೈತ್ರಿ ಬಗ್ಗೆ ಸರಿಯಾಗಿ ಹೇಳುತ್ತಿಲ್ಲ. ಹಾಗಾದರೆ ಸಿದ್ದರಾಮಯ್ಯ, ದೇವೇಗೌಡರು ಸೇರಿ ನಾಯಕರು ಮೈತ್ರಿ ಬಗ್ಗೆ ಏನು ಹೇಳಿದ್ದಾರೆ ನೋಡಿ..

ಡಿಸೆಂಬರ್ 9ರ ನಂತರ ಯಾವುದೇ ಪಕ್ಷದೊಂದಿಗೆ ಜೆಡಿಎಸ್ ಮೈತ್ರಿ ಇಲ್ಲ
ಎಚ್.ಡಿ.ದೇವೇಗೌಡ
ಜೆಡಿಎಸ್ ವರಿಷ್ಠ
ಕಾಂಗ್ರೆಸ್‍—ಜೆಡಿಎಸ್ ಮೈತ್ರಿ ಕುರಿತು ಚರ್ಚೆಯಾಗಿಲ್ಲ
ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ
ಮೈತ್ರಿ ಬಗ್ಗೆ ಸಮಯ ಬಂದಾಗ ನೋಡೋಣ
ಡಿ.ಕೆ.ಶಿವಕುಮಾರ್
ಕಾಂಗ್ರೆಸ್‍ ನಾಯಕ
ಡಿಸೆಂಬರ್ 9ರ ನಂತರ ಬಿಜೆಪಿ ಸರ್ಕಾರ ಪತನವಾಗುತ್ತದೆ. ಬಿಜೆಪಿಯ ಹಲವರು ನಮ್ಮ ಪಕ್ಷಕ್ಕೆ ಬರುತ್ತಾರೆ
ಎಚ್.ಡಿ.ರೇವಣ್ಣ
ಜೆಡಿಎಸ್ ನಾಯಕ

ಇತ್ತ ಬಿಜೆಪಿ ಪಕ್ಷ 15 ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಹೇಳುತ್ತಿದೆಯಾದರೂ, ಜೊತೆಗೆ ಅಳುಕು ಇದ್ದೇ ಇದೆ. ಒಂದು ವೇಳೆ ಅಂದುಕೊಂಡಷ್ಟು ಗೆಲ್ಲದೇ ಬಹುಮತ ಕುಸಿದರೆ ಏನು ಮಾಡಬೇಕು ಎಂಬ ಲೆಕ್ಕಾಚಾರಗಳನ್ನು ಬಿಜೆಪಿ ನಾಯಕರು ಹಾಕಿಕೊಂಡಿದ್ದಾರೆ. ಹೀಗಾಗಿ ಪ್ರಚಾರದ ವೇಳೆಯಲ್ಲಿ ಮತ್ತೆ ಆಪರೇಷನ್‍ ಕಮಲಸೂಚನೆ ನೀಡುತ್ತಾ ಬಂದಿದ್ದಾರೆ. ಬಿಜೆಪಿಗೆ ಬರಲು ಹಲವು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳುತ್ತಾ ಬಂದಿದ್ದಾರೆ. ಹಾಗಾದರೆ ಬಿಜೆಪಿ ನಾಯಕರು ಪ್ರಚಾರದ ಸಂದರ್ಭದಲ್ಲಿ ಏನು ಹೇಳಿದ್ದಾರೆ ನೋಡಿ..

ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತೆ. ಅಷ್ಟೇ ಅಲ್ಲ, ಮತ್ತಷ್ಟು ಶಾಸಕರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ
ಬಿ.ಶ್ರೀರಾಮುಲು
ಆರೋಗ್ಯ ಸಚಿವ
ಕಾಂಗ್ರೆಸ್ ನಾಯಕರು ಈಗಿರುವ ತಮ್ಮ ಶಾಸಕರನ್ನು ಕಾಪಾಡಿಕೊಂಡರೆ ಅದೇ ಅವರ ದೊಡ್ಡ ಸಾಧನೆ. ಅಲ್ಲಿಂದ ಇನ್ನೂ ಯಾರು ಯಾರು ಓಡಿಹೋಗುತ್ತಾರೋ ಮೊದಲು ನೋಡಲಿ. (ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ)
ಆರ್.ಅಶೋಕ್
ಕಂದಾಯ ಸಚಿವ

   ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‍ ಶಾಸಕ ಬಿ.ನಾಗೇಂದ್ರ ಬರಲೇ ಇಲ್ಲ. ಅವರು ತೆರೆಮರೆಯಲ್ಲೇ ಉಳಿದುಬಿಟ್ಟರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಜಯನಗರ ಕ್ಷೇತ್ರಕ್ಕೆ ಬಂದಾಗಲೂ ಶಾಸಕ ಬಿ.ನಾಗೇಂದ್ರ ಕಾಣಿಸಿಕೊಳ್ಳಲಿಲ್ಲ. ಇನ್ನೊಂದೆಡೆ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‍ ಶಾಸಕ ಜಿ.ಟಿ.ದೇವೇಗೌಡರು ಪ್ರಚಾರ ನಡೆಸಿದ್ದರೆ ಜೆಡಿಎಸ್‍ ಅಭ್ಯರ್ಥಿಗೆ ಸಾಕಷ್ಟು ಲಾಭವಾಗುತ್ತಿತ್ತು. ಆದರೆ ಜಿ.ಟಿ.ದೇವೇಗೌಡರು ತಟಸ್ಥವಾಗಿ ಉಳಿದುಬಿಟ್ಟರು. ಸಾಲದೆಂಬಂತೆ ಚುನಾವಣೆ ಸಮಯದಲ್ಲೇ ತಮ್ಮ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಲಗಿದ್ದ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಮುಂದಾದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಪಕ್ಷ ಸಂಘಟನೆ ಶುರು ಮಾಡಿದೆ. ಆದರೆ ನಮ್ಮ ನಾಯಕರು ಎಂದೂ ನನ್ನನ್ನು ನಾಯಕನನ್ನಾಗಿ ನೋಡಲಿಲ್ಲ
ಜಿ.ಟಿ.ದೇವೇಗೌಡ
ಜೆಡಿಎಸ್ ಶಾಸಕ

  ಈ ಎಲ್ಲಾ ಹೇಳಿಕೆಗಳನ್ನು ನೋಡಿದರೆ ಡಿಸೆಂಬರ್‍ 9 ರಾಜ್ಯ ಹಾಗೂ ದೇಶದ ರಾಜಕೀಯ ವಲಯಕ್ಕೆ ದೊಡ್ಡ ಕುತೂಹಲವೇ. ಡಿಸೆಂಬರ್‍ 9ರ ನಂತರ ಏನೆಲ್ಲಾ ಬೆಳವಣಿಗೆಗಳಾಗುತ್ತವೋ ಗೊತ್ತಿಲ್ಲ. ಆದರೆ ಅಂದು ಬರುವ ಉಪಚುನಾವಣೆಯ ಫಲಿತಾಂಶ ಮುಂದಾಗುವ ಬೆಳವಣಿಗೆಗಳನ್ನು ನಿರ್ಧರಿಸುತ್ತದೆ.

 

%d bloggers like this: