You cannot copy content of this page.
. . .

ಹುಟ್ಟುತ್ತಲೇ ಅನಾಥವಾಗುವ ಆಕ್ಟೋಪಸ್‍ಗಳು..!

   ಹುಟ್ಟೋಕೆ ಮುಂಚೆಯೇ ತಂದೆ ತೀರಿಕೊಳ್ಳುತ್ತಾನೆ.. ಹುಟ್ಟಿದ ತಕ್ಷಣವೇ ತಾಯಿ ಸಾವನ್ನಪ್ಪುತ್ತಾಳೆ.. ಮನುಷ್ಯರಲ್ಲಿ ಇಂತಹ ಪರಿಸ್ಥಿತಿ ಎದುರಾದರೆ, ಎಲ್ಲರೂ ಮಗುವಿನ ಭವಿಷ್ಯದ ಬಗ್ಗೆಯೇ ಮರುಕಪಡುತ್ತಾರೆ.. ಆದ್ರೆ ಇಲ್ಲಿ ದಿನಾ ಅನಾಥವಾಗುವ ಆಕ್ಟೋಪಸ್‍ ಮರಿಗಳನ್ನು ನೋಡಿ ದುಃಖಪಡುವವರೇ ಇಲ್ಲ. ಯಾಕಂದ್ರೆ, ಕಣ್ಣು ತೆರೆಯೋಕೆ ಮುಂಚೆಯೇ ಎಲ್ಲಾ ಆಕ್ಟೋಪಸ್‍ಗಳೂ ಅನಾಥವಾಗಿರುತ್ತವೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುತ್ತವೆ.   

   ತಾಯಿಯ ಪ್ರೀತಿ, ವಾತ್ಸಲ್ಯಕ್ಕೆ ಯಾರೂ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ ಬಿಡಿ. ಅದರಲ್ಲೂ ಈ ಆಕ್ಟೋಪಸ್‍ಗಳ ತಾಯಿ ವಾತ್ಸಲ್ಯ ಇದೆಯಲ್ಲ, ಅದು ಸಾಟಿ ಯಾವುದೂ ಇಲ್ಲ. ಹೌದು, ಮರಿಗಳಿಗೆ ಜನ್ಮ ಕೊಡೋದಿಕ್ಕಾಗಿ ತಾಯಿ ಆಕ್ಟೋಪಸ್‍ ತನ್ನ ಜೀವವನ್ನೇ ತ್ಯಾಗ ಮಾಡುತ್ತದೆ. ಮರಿಗಳನ್ನು ಭೂಮಿಗೆ, ಅಲ್ಲಲ್ಲ.. ನೀರಿಗೆ ತಂದು ತಾಯಿ ಆಕ್ಟೋಪಸ್‍ ಪ್ರಾಣ ಬಿಡುತ್ತದೆ.  

   ಆಕ್ಟೋಪಸ್‍ಗಳು ಒಂದೇ ಬಾರಿ ಮೊಟ್ಟೆ ಇಡೋದು, ಒಂದೇ ಬಾರಿ ಮರಿ ಮಾಡೋದು. ಒಂದು ಆಕ್ಟೋಪಸ್ 1 ಲಕ್ಷದಿಂದ 2 ಲಕ್ಷದವರೆಗೂ ಮೊಟ್ಟೆಗಳನ್ನಿಡುತ್ತದೆ. ತಾಯಿ ಆಕ್ಟೋಪಸ್‍ ಮೊಟ್ಟೆ ಇಡೋದಕ್ಕೂ ಮೊದಲು ಸುರಕ್ಷಿತ ಜಾಗವನ್ನು ಹುಡುಕುತ್ತದೆ. ಯಾರೂ ತೊಂದರೆ ಕೊಡೋದಿಲ್ಲ ಎಂದು ನಂಬಿಕೆ ಬರುವ ಜಾಗದಲ್ಲಿ ಮೊಟ್ಟೆಗಳನ್ನಿಡುತ್ತದೆ. ಈ ಮೊಟ್ಟೆಗಳಿಂದ ಮರಿಗಳು ಹೊರಬರಬೇಕಾದರೆ ಬರೋಬ್ಬರಿ 14 ವಾರಗಳು ಬೇಕು. ಅಂದರೆ ಸರಿಸುಮಾರು 100 ದಿನಗಳು..!. ನೂರು ದಿನಗಳವರೆಗೆ ಯಾವುದೇ ಆಹಾರ ಸೇವಿಸದೇ ಇದ್ದರೆ ಯಾರಾದರೂ ಬದುಕುತ್ತಾರಾ..? ಚಾನ್ಸೇ ಇಲ್ಲ. ಇಲ್ಲಿ ತಾಯಿ ಆಕ್ಟೋಪಸ್‍ ಕಥೆ ಕೂಡಾ ಹಾಗೇ ಆಗೋದು.

  ಮೊಟ್ಟೆಗಳಿಂದ ಮರಿಗಳು ಹೊರಬರೋತನಕ ತಾಯಿ ಆಕ್ಟೋಪಸ್‍ ಅಲ್ಲಿಂದ ಒಂದಿಂಚೂ ಕದಲೋದಿಲ್ಲ. ಚೂರೂ ಆಹಾರ ಸೇವಿಸೋದಿಲ್ಲ. ಸ್ವಲ್ಪ ಆಚೀಚೆ ಹೋದರೆ ತನ್ನ ಮೊಟ್ಟೆಗಳಿಗೆ ಏನಾಗಿಬಿಡುತ್ತದೋ ಎಂಬ ಆತಂಕ ಅದಕ್ಕೆ. ಹೀಗಾಗಿ ತನ್ನ ಎಂಟು ಕೈಗಳಿಂದ ನೀರನ್ನು ಮೊಟ್ಟೆಗಳ ಮೇಲೆ ಚೆಲ್ಲುತ್ತಾ, ಮೊಟ್ಟೆಗಳಿಗೆ ಆಕ್ಸಿಜನ್‍ ಒದಗಿಸುತ್ತಾ ಕೂತುಬಿಡುತ್ತೆ. ನೂರು ದಿನಗಳವರೆಗೂ ನಿದ್ದೆಯನ್ನೂ ಮಾಡುವುದಿಲ್ಲ. ಮರಿ ಮಾಡುತ್ತಿದ್ದೇನೆಂಬ ಖುಷಿಯಲ್ಲಿ ಎಲ್ಲವನ್ನೂ ಮೈಮರೆತುಬಿಟ್ಟಿರುತ್ತೆ..!

  100 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಅಷ್ಟೊತ್ತಿಗೆ ತಾಯಿ ಆಕ್ಟೋಪಸ್‍ ನಿತ್ರಾಣವಾಗಿರುತ್ತದೆ. ಕದಲೋ ಶಕ್ತಿಯೂ ಇರೋದಿಲ್ಲ. ಮರಿಗಳನ್ನು ನೋಡೋದಕ್ಕೆ ಕೊಂಚ ಪ್ರಾಣ ಹಿಡಿದುಕೊಂಡಿರುತ್ತೆ. ಯಾವಾಗ ತನ್ನ ಮರಿಗಳನ್ನು ನೋಡುತ್ತದೋ ತಾಯಿ ಆಕ್ಟೋಪಸ್‍ಗೆ ಎಲ್ಲಿಲ್ಲದ ಖುಷಿಯಾಗುತ್ತದೆ. ಅದೇ ಖುಷಿಯಲ್ಲಿ ಪ್ರಾಣ ಬಿಡುತ್ತದೆ. ಇನ್ನು ಲಕ್ಷ ಮೊಟ್ಟೆಗಳಲ್ಲಿ ಮರಿಯಾಗೋದು ಸಾವಿರ ಸಂಖ್ಯೆಯಲ್ಲಿ ಮಾತ್ರ. ಹುಟ್ಟುತ್ತಲೇ ಅನಾಥವಾಗುವ ಆಕ್ಟೋಪಸ್‍ ಮರಿಗಳಲ್ಲಿ ಬಹುತೇಕವು, ಬೇಟೆಗಾರ ಪ್ರಾಣಿಗಳಿಗೆ ಆಹಾರವಾಗುತ್ತವೆ. ತಪ್ಪಿಸಿಕೊಂಡ ಬೆರಳೆಣಿಕೆಯ ಆಕ್ಟೋಪಸ್‍ಗಳು ಮಾತ್ರ ಬೆಳೆದು ದೊಡ್ಡವಾಗುತ್ತವೆ.

  ತಾಯಿ ಆಕ್ಟೋಪಸ್‍ ಸ್ಥಿತಿ ಹೀಗಾದರೆ, ತಂದೆ ಆಕ್ಟೋಪಸ್‍ ಗೋಳು ಹೇಳತೀರದು. ಮನುಷ್ಯರು ಹೇಗೋ ಹೇಳೋಕೆ ಆಗಲ್ಲ, ಆದರೆ ಆಕ್ಟೋಪಸ್‍ಗಳು ಮಾತ್ರ ಚಾಚೂತಪ್ಪದೇ ಏಕ ಪತ್ನಿ ಹಾಗೂ ಏಕ ಪತಿ ವ್ರತ ಆಚರಿಸುತ್ತವೆ. ಇವು ಜೀವನದಲ್ಲಿ ಒಮ್ಮೆ ಮಾತ್ರ ಮಿಲನವಾಗುತ್ತವೆ. ಹೀಗಾಗೇ ಈ ಸಂದರ್ಭ ಆಕ್ರೋಶ, ಆವೇಷ ಹಾಗೂ ಆಕ್ರಮಣಭರಿತವಾಗಿರುತ್ತವೆ. ಒಂದೇ ಮಿಲನಕ್ಕೆ ಗಂಡು ಅಕ್ಟೋಪಸ್‍ ತನ್ನಿಡೀ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ನಂತರದ ಕೆಲವೇ ದಿನಗಳಲ್ಲಿ ಅದು ಸಾವನ್ನಪ್ಪುತ್ತದೆ. ಹೀಗಾಗಿ ಆಕ್ಟೋಪಸ್‍ಗಳು ಹುಟ್ಟುತ್ತಲೇ ಅನಾಥವಾಗುತ್ತವೆ. ಆದರೆ ಆಕ್ಟೋಪಸ್‍ಗಳು ಮನುಷ್ಯರಷ್ಟೇ ಬುದ್ಧಿಶಕ್ತಿ ಹೊಂದಿವೆ. ಹೀಗಾಗಿ ಹೇಗೋ ಬದುಕಿಕೊಳ್ಳುತ್ತವೆ. ಸಮುದ್ರದಾಳದಲ್ಲಿ ರಾಜರಂತೆ ಮೆರೆಯುತ್ತವೆ.

 

%d bloggers like this: