You cannot copy content of this page.
. . .

ಸಂಜೆ ಜ್ಞಾನಪೀಠ ಪ್ರಶಸ್ತಿ ಪ್ರಕಟ ; ಮೈಸೂರಿಗೆ ಸಿಗುತ್ತಾ ಗೌರವ..?

  ದೆಹಲಿಯಲ್ಲಿ ಇಂದು ಜ್ಞಾನಪೀಠ ಪ್ರಶಸ್ತಿಯ ಕೇಂದ್ರೀಯ ಆಯ್ಕೆ ಸಮಿತಿ ಸಭೆ ಸೇರಿದೆ. ಸಂಜೆ ವೇಳೆಗೆ ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಪ್ರಕಟವಾಗಲಿದೆ. ಕನ್ನಡ ಉಪ ಸಮಿತಿಯಿಂದ ಮೂರು ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಅದರಲ್ಲಿ ಮೈಸೂರಿನ ಸಾಹಿತಿ ಡಾ.ಲತಾ ರಾಜಶೇಖರ್‍ ಅವರೂ ಸೇರಿದ್ದಾರೆ.

  ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಈ ಸಮಿತಿಯಲ್ಲಿದ್ದಾರೆ.

   ಕನ್ನಡದ ಉಪ ಆಯ್ಕೆ ಸಮಿತಿಯು ರಾಜಕಾರಣಿ-ಕಾದಂಬರಿಕಾರ ಡಾ.ಎಂ.ವೀರಪ್ಪ ಮೊಯ್ಲಿ, ಸಾಹಿತಿಗಳಾದ ಡಾ. ಹಂಪನಾ ಹಾಗೂ ಲತಾ ರಾಜಶೇಖರ್ ರ ಹೆಸರುಗಳನ್ನು ಅಂತಿಮಗೊಳಿಸಿ ಕೇಂದ್ರ ಸಮಿತಿಗೆ ಶಿಫಾರಸು ಮಾಡಿದೆ‍. ಕವಿ ಸಿದ್ದಲಿಂಗಯ್ಯ ಅಧ್ಯಕ್ಷತೆಯ ಕನ್ನಡದ ಉಪಸಮಿತಿಯಲ್ಲಿ ಡಾ.ಸಿ.ಪಿ.ಕೃಷ್ಣ ಕುಮಾರ್‍ ಮತ್ತು ಡಾ.ಸಿ.ನಾಗಣ್ಣ ಇದ್ದಾರೆ.

  ಕನ್ನಡದಲ್ಲಿ ಮಹಾಕಾವ್ಯಗಳ ಪ್ರಯೋಗ ಇನ್ನೇನು ಮುಗಿದು ಹೋಯಿತೇನೋ ಎನ್ನುವ ಕೊರಗು ಕೆಲವರನ್ನ ಬಾಧಿಸುತ್ತಿತ್ತು. ಅದನ್ನು ಹೋಗಲಾಡಿಸಿದವರು ಮೈಸೂರಿನ  ಡಾ. ಲತಾ ರಾಜಶೇಖರ್ ಅವರು.  ವಿಶ್ವ ಶಾಂತಿಯೇ ಧ್ಯೇಯವಾಗಿಟ್ಟುಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಡಾ. ಲತಾ ರಾಜಶೇಖರ್‍ ರವರು ಬುದ್ಧ ದರ್ಶನ, ಯೇಸು ದರ್ಶನ, ಬಸವ ದರ್ಶನ, ಮಹಾವೀರ ದರ್ಶನ ಹಾಗೂ ರಾಮ ದರ್ಶನ ಎಂಬ ಐದು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಈ ಮೂಲಕ 5 ಮಹಾಕಾವ್ಯಗಳನ್ನು ರಚಿಸಿದ ವಿಶ್ವದ ಏಕೈಕ ಸಾಹಿತಿಯಾಗಿ ಲತಾ ರಾಜಶೇಖರ್‍ ಖ್ಯಾತರಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲದಿಂದ ಲತಾ ಅವರು ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಹೆಸರಾಗಿದ್ದಾರೆ. ಲತಾ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ವಿಶ್ವಕವಿ ಪ್ರಶಸ್ತಿ, ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾ  ವರ್ಷದ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಲತಾ ಅವರ ಮುಡಿ ಸೇರಿವೆ.

  ಡಾ. ಲತಾ ರಾಜಶೇಖರ್‍ರವರು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯಲ್ಲಿ 1954 ಜೂನ್ 2 ರಂದು ಎಂ ಕೃಷ್ಣೇಗೌಡ ಮತ್ತು ಕೆ.ಎಸ್ ಕಾವೇರಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದರು. ಬಾಲ್ಯದಿಂದಲೂ ಓದಿನಲ್ಲಿ ಅಪಾರ ಆಸಕ್ತಿ ಹೊಂದಿದ್ದ ಲತಾರವರು ಸಹಜವಾಗಿ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡಿದ್ದರು. ಉನ್ನತ ಶಿಕ್ಷಣದಲ್ಲಿ ಎಂ. ಎ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಮುಗಿಸಿ ಡಾಕ್ಟರೇಟ್ ಪದವಿಗೆ ಪಾತ್ರರಾಗಿರುತ್ತಾರೆ. ‘ಕೋಗಿಲೆ ಕೂಗಿದಂತೆ’ ಮೊದಲ ಕವನ ಸಂಕಲನಕ್ಕೆ ಮಂಗಳಾ ಕಲಾವೇದಿಕೆಯ ಕುವೆಂಪು ಸಾಹಿತ್ಯ ಪ್ರಶಸ್ತಿ ಹಾಗೂ ಡಾ.ರಾಜ್ ಸಾಹಿತ್ಯ ಪ್ರಶಸ್ತಿ ಲಭಿಸಿವೆ.

   ಇದುವರೆಗೆ 56 ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ಅದರಲ್ಲಿ ಅತಿಹೆಚ್ಚು ಅಂದರೆ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿವೆ. 1967ರಲ್ಲಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ನಂತರ ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‍, ವಿ.ಕೃ.ಗೋಕಾಕ್‍, ಯು.ಆರ್‍.ಅನಂತಮೂರ್ತಿ, ಗಿರೀಶ್‍ ಕಾರ್ನಾಡ್‍ ಹಾಗೂ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

 

%d bloggers like this: