You cannot copy content of this page.
. . .

ವಿಚಾರಣೆಗೆ ಹಾಜರಾಗುವಂತೆ ನಟಿ ರಶ್ಮಿಕಾ ಮಂದಣ್ಣ, ಕುಟುಂಬಸ್ಥರಿಗೆ ಐ.ಟಿ ನೋಟಿಸ್

 ದಕ್ಷಿಣ ಭಾರತ ಚಿತ್ರರಂಗದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಕುಟುಂಬಸ್ಥರಿಗೆ ಐ.ಟಿ ಸಮನ್ಸ್‍ ನೀಡಿದೆ. ಸೋಮವಾರ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಮತ್ತು ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

 ಐಟಿ ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಸತತ ಎರಡು ದಿನಗಳ ಕಾಲ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಜೊತೆಗೆ ದಾಖಲೆ ಇಲ್ಲದ 25 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆರಿಗೆ ವಂಚನೆ ಮಾಡಿರುವ ಕೋಟ್ಯಂತರ ಆಸ್ತಿಯ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ ಐ.ಟಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

 ದಾಳಿ ವೇಳೆ ರಶ್ಮಿಕಾ ಮನೆಯಲ್ಲಿ 3.94 ಕೋಟಿ ರೂ. ಮೊತ್ತದ ಅಘೋಷಿತ ಆದಾಯ ಪತ್ತೆಯಾಗಿದೆ. 1.5 ಕೋಟಿ ರೂಪಾಯಿಗೆ ತೆರಿಗೆ ಕಟ್ಟಿಲ್ಲ. ಇಷ್ಟು ಮಾತ್ರವಲ್ಲದೆ ರಶ್ಮಿಕಾ ಹೆಸರಲ್ಲಿ ಎರಡು ಪ್ಯಾನ್ ಕಾರ್ಡ್ ಇರುವುದು ಕೂಡ ಬೆಳಕಿಗೆ ಬಂದಿದೆ. ಒಂದು ಪ್ಯಾನ್ ಕಾರ್ಡ್ ಮೂಲಕ 2016-17ರವರೆಗಷ್ಟೇ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ. ರಶ್ಮಿಕಾ ತಂದೆ ಒಡೆತನದ ಕಲ್ಯಾಣ ಮಂಟಪದ ಬಗ್ಗೆಯೂ ಗುಮಾನಿಯಿದ್ದು, ಕಲ್ಯಾಣ ಮಂಟಪದ ವ್ಯವಹಾರದ ಬಗ್ಗೆಯೂ ಕೆಲ ಮಾಹಿತಿ ಮುಚ್ಚಿಟ್ಟ ಆರೋಪ ಕೇಳಿ ಬಂದಿದೆ.

 ಗುರುವಾರ ಮುಂಜಾನೆ 7.30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐ.ಟಿ ಅಧಿಕಾರಿಗಳು, ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದರು. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಬಳಿಕ 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

 

%d bloggers like this: