You cannot copy content of this page.
. . .

ಯಾವ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತ ಹೇರುತ್ತಾರೆ..?

ಸದ್ಯ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಯಾವ ಪಕ್ಷಕ್ಕೂ ಬಹುಮತ ಇಲ್ಲ. ಅತಿದೊಡ್ಡ ಪಕ್ಷ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದಿದೆ. ಎರಡನೇ ಅತಿದೊಡ್ಡ ಪಕ್ಷಕ್ಕೆ ರಾಜ್ಯಪಾಲರು ನೀಡಿದ್ದ ಅವಧಿಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾರಿಗೂ ಸರ್ಕಾರ ರಚನೆಯ ಶಕ್ತಿ ಇಲ್ಲ ಎಂದು ನಿರ್ಧರಿಸಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿದೆ. ಒಂದು ವೇಳೆ ಬಹುಮತಕ್ಕೆ ಬೇಕಾದ ಸಂಖ್ಯೆಯ ಶಾಸಕರ ಒಪ್ಪಿಗೆ ಪತ್ರವನ್ನು ರಾಜ್ಯಪಾಲರಿಗೆ ನೀಡಿದರೆ ಮತ್ತೆ ಸರ್ಕಾರ ರಚನೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಲು ಅವಕಾಶವಿದೆ.

   ಮೈತ್ರಿಕೂಟದ ಪಕ್ಷಗಳು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಾಸ್‍ ಪಡೆದಾಗ, ಬೇರೊಂದು ಪಕ್ಷಕ್ಕೆ ಹಕ್ಕು ಮಂಡಿಸುವ ಶಕ್ತಿ ಇಲ್ಲದಿದ್ದಾಗ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ. ನಿಗದಿಯಂತೆ ನಡೆಯಬೇಕಿದ್ದ ಚುನಾವಣೆ ಅನಿವಾರ್ಯ ಕಾರಣಗಳಿಗಾಗಿ ಮುಂದೂಡಲ್ಪಟ್ಟಾಗ, ರಾಜಕೀಯ ಅಸ್ಥಿರತೆ ಉಂಟಾದಾಗ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ. ಗರಿಷ್ಠ 6 ತಿಂಗಳವರೆಗೆ ರಾಷ್ಟ್ರಪತಿ ಆಡಳಿತ ಜಾರಿ ಮಾಡಬಹುದು. ಅಷ್ಟರೊಳಗೆ ಚುನಾವಣೆ ನಡೆಸಿ, ಜನಪ್ರತಿನಿಧಿಗಳ ಆಡಳಿತ ತರಬೇಕಾಗುತ್ತದೆ.

 

ಕೋರ್ಟ್‍ ತೀರ್ಪುಗಳು ಏನು ಹೇಳುತ್ತವೆ..?

 ಬಿಹಾರ ಪ್ರಕರಣ:

  2005ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಕ್ಕಿರಲಿಲ್ಲ. ಆಗ ಜೆಡಿಯು ಮುಖಂಡ ನಿತೀಶ್​ ಕುಮಾರ್ ಮತ್ತು ಬಿಜೆಪಿ ನಡುವೆ ಮೈತ್ರಿ ಕಸರತ್ತು ನಡೆಯುತ್ತಿತ್ತು. ಈ ವೇಳೆ ಬಿಹಾರ ರಾಜ್ಯಪಾಲ ಬೂಟಾಸಿಂಗ್ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಆಗ ರಷ್ಯಾ ಪ್ರವಾಸದಲ್ಲಿದ್ದ ರಾಷ್ಟ್ರಪತಿ ಡಾ. ಎ.ಪಿ.ಜಿ. ಅಬ್ದುಲ್​ ಕಲಾಂ ಅವರಿಂದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಒಪ್ಪಿಗೆ ಪಡೆದಿತ್ತು. ಈ ನಿರ್ಧಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದಾಗ ರಾಜ್ಯಪಾಲ ಮತ್ತು ಕೇಂದ್ರ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಬೊಮ್ಮಾಯಿ ಪ್ರಕರಣ:

    1989ರಲ್ಲಿ ಕರ್ನಾಟಕದಲ್ಲಿ ಎಸ್​.ಆರ್​.ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಂದು ಬೊಮ್ಮಾಯಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ಏಪ್ರಿಲ್​ 27ರಂದು ವಿಧಾನಸಭೆ ಅಧಿವೇಶನ ಕರೆದಿದ್ದೇನೆ. ಆ ದಿನವೇ ಬಹುಮತ ಸಾಬೀತುಪಡಿಸುವುದಾಗಿ ತಿಳಿಸಿದ್ದರು. ಆದರೆ, ಇದರ ಮರುದಿನವೇ ಬೊಮ್ಮಾಯಿ ಅವರಿಗೆ ಭಾರೀ ಆಘಾತ ಕಾದಿತ್ತು. ಯಾಕೆಂದರೆ ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್​ ಅವರು ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಿಸರ್ಜಿಸಿ, ರಾಷ್ಟ್ರಪತಿ ಆಡಳಿತ ಹೇರಿದ್ದರು. ರಾಷ್ಟ್ರಪತಿಗಳ ಈ ತೀರ್ಮಾನ ಪ್ರಶ್ನಿಸಿ ಬೊಮ್ಮಾಯಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಕೋರ್ಟ್‍ ಕೂಡಾ ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನೊಳಗೇ ಜಾರಿ ಮಾಡಲಾಗಿದೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಬೊಮ್ಮಾಯಿ  ಸುಪ್ರೀಂಕೋರ್ಟ್​ ಕದ ತಟ್ಟಿದ್ದರು. ಸುಪ್ರೀಂಕೋರ್ಟ್​ ಸರ್ಕಾರವೊಂದು ಬಹುಮತ ಹೊಂದಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವುದು ವಿಧಾನಸಭೆಯೇ ಹೊರತು ರಾಜಭವನ ಅಲ್ಲ ಎಂದು ತೀರ್ಪು ನೀಡಿತ್ತು.

 

 

%d bloggers like this: