You cannot copy content of this page.
. . .

ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಕುರುಬ ಸಮಾಜ; ಕ್ಷಮೆ ಕೇಳಿದ ಸಿಎಂ

   ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ಸರ್ಕಲ್‍ ಒಂದಕ್ಕೆ ಹೆಸರಿಡುವ ಸಂಬಂಧ ನಡೆದ ವಾಗ್ವಾದ ತಾರಕಕ್ಕೇರಿದೆ. ಸಚಿವ ಮಾಧುಸ್ವಾಮಿಯವರು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ‍್ಧ ಮಾತನಾಡಿದ್ದಾರೆಂದು ಆರೋಪಿಸಿ ಕುರುಬ ಸಮುದಾಯ ರಾಜ್ಯದ್ಯಂತ ಪ್ರತಿಭಟನೆಗಿಳಿದಿದೆ. ನಾಳೆ ಹುಳಿಯಾರು ಬಂದ್‍ ಗೂ ಕರೆ ನೀಡಲಾಗಿದೆ. ಇದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿ ಪರವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಜತೆಗೆ ಸಚಿವ ಮಾಧುಸ್ವಾಮಿ ಕೂಡಾ ಸಿಎಂ ಕ್ಷಮೆಯಾಚಿಸುವಷ್ಟು ನೋವಾಗಿದ್ದರೆ ನಾನೂ ಕ್ಷಮೆ ಕೋರುತ್ತೇನೆಂದು ಹೇಳಿದ್ದಾರೆ.

  ಈ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ, ಹುಳಿಯಾರ್ ಸರ್ಕಲ್‌ಗೆ ಕನಕದಾಸರ ಹೆಸರಿಡಲು ನಮ್ಮದೇನು ತಕರಾರಿಲ್ಲ, ಮಾಧುಸ್ವಾಮಿಗೂ ಯಾವುದೇ ತಕರಾರು ಇಲ್ಲ. ಮಾಧುಸ್ವಾಮಿ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಹೊಸದುರ್ಗದ ಕಾಗಿನೆಲೆ ಶ್ರೀಗಳ ವಿಚಾರದಲ್ಲಿ ಕೊಟ್ಟ ಹೇಳಿಕೆಯಲ್ಲಿ ತಪ್ಪು ಗ್ರಹಿಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಸಚಿವ ಮಾಧುಸ್ವಾಮಿ ಈಗಾಗಲೇ ಹೇಳಿದ್ದಾರೆ.  ಅವರ ಪರವಾಗಿ ನಾನು ಆ ಸಮಾಜದ ಬಂಧುಗಳಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಏನು ಈ ವಿವಾದ..?

ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದ ಪೆಟ್ರೋಲ್‍ ಬಂಕ್‍ ವೃತ್ತದಲ್ಲಿ ಕನಕದಾಸರ ನಾಮಫಲಕ ಅಳವಡಿಕೆ ಸಂಬಂಧ ವಿವಾದ ಉದ್ಭವಿಸಿದೆ. 12 ವರ್ಷಗಳ ಹಿಂದೆ ಕುರುಬ ಸಮಾಜದ ಯುವಕರು ಈ ಸರ್ಕಲ್‍ ಗೆ ಕನಕದಾಸ ವೃತ್ತ ಎಂದು ನಾಮಕರಣ ಮಾಡಿ ಬೋರ್ಡ್‍ ಹಾಕಿದ್ದರಂತೆ. ಆದರೆ ಈಗ ಅದಕ್ಕೆ ಶಿವಕುಮಾರ ಸ್ವಾಮೀಜಿ ಎಂದು ಹೆಸರಿಡಲು ಕೆಲವರು ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ವಿವಾದ ಉಂಟಾಗಿದ್ದರಿಂದ ಇತ್ತೀಚೆಗೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಶಾಂತಿಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ಕುರುಬ ಸಮಾಜದ ಮುಖಂಡರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಮಾತನಾಡಿದ ಸ್ವಾಮೀಜಿ, ವೃತ್ತಕ್ಕೆ ಕನಕದಾಸರ ಹೆಸರಿಡಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಾಧುಸ್ವಾಮಿ, ನೀವು ಧಮ್ಕಿ ಹಾಕುತ್ತೀರ. ನಾನೂ ಹೋರಾಟಗಾರನೇ. ಕಾನೂನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು.

  ಇದರ ಜೊತೆಗೆ ನನ್ನ ನಿಷ್ಠೆ ನನ್ನ ಸಮುದಾಯಕ್ಕೆ ಮಾತ್ರ ಎಂದು ಸಚಿವರು ಹೇಳಿದ್ದಾರೆನ್ನಲಾದ ಆಡಿಯೋ ಕೂಡಾ ಈಗ ವೈರಲ್ ಆಗುತ್ತಿದೆ. ಈ ಎಲ್ಲಾ ಕಾರಣಗಳಿಗಾಗಿ ಕುರುಬ ಸಮಾಜದವರು ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿರುವುದರಿಂದ ಈ ವಿವಾದ ರಾಜಕೀಯ ಸ್ವರೂಪ ಕೂಡಾ ಪಡೆದುಕೊಳ್ಳುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಧುಸ್ವಾಮಿಯವರ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಬೆನ್ನಲ್ಲೇ ಯಡಿಯೂರಪ್ಪ, ಮಾಧುಸ್ವಾಮಿ ಪರವಾಗಿ ಕ್ಷಮೆಯಾಚಿಸಿದ್ದಾರೆ.

 

%d bloggers like this: