You cannot copy content of this page.
. . .

ಭಾರತಕ್ಕೆ 7 ರನ್ ಜಯ; ನ್ಯೂಜಿಲೆಂಡ್‌ಗೆ ವೈಟ್‌ವಾಷ್ ಮುಖಭಂಗ

 ಮೌಂಟ್ ಮೌಂಗುನಿ: ಕೊನೆಯ ಎಸೆತದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯವನ್ನು 7 ರನ್ ಗಳಿಂದ ಗೆದ್ದ ಭಾರತ, ನ್ಯೂಜಿಲೆಂಡ್ ನೆಲದಲ್ಲಿ 5-0 ಅಂತರದಿಂದ ಸರಣಿ ಗೆದ್ದು ವೈಟ್‌ವಾಷ್ ಸಾಧನೆ ಮಾಡಿದೆ.

 ಭಾನುವಾರ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್ ಗೆ 163 ರನ್ ಕಲೆ ಹಾಕಿತು. ಸಾಧಾರಣ ಮೊತ್ತ ಬೆಂಬತ್ತಿದ ನ್ಯೂಜಿಲೆಂಡ್ ಇಬ್ಬರು ಬ್ಯಾಟ್ಸ್‍ಮನ್‍ಗಳು ಬಾರಿಸಿದ ಅರ್ಧಶತಕದ ಹೊರತಾಗಿಯೂ 20 ಓವರ್ ಗಳಲ್ಲಿ 9 ವಿಕೆಟ್ ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಬಾರಿ ಭಾರತ ವೈಟ್‌ವಾಷ್‌ನೊಂದಿಗೆ ಸರಣಿ ಗೆದ್ದ ಸಾಧನೆ ಮಾಡಿತು.

 ಒಂದು ಹಂತದಲ್ಲಿ ನ್ಯೂಜಿಲೆಂಡ್ 17 ರನ್ ಗೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ಸೈಫಿಸ್ಟ್ (50) ಮತ್ತು ರಾಸ್ ಟೇಲರ್ (53) 4ನೇ ವಿಕೆಟ್ ಗೆ 99 ರನ್ ಜೊತೆಯಾಟ ನಿಭಾಯಿಸಿ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದರು. ನಂತರ ಭಾರತೀಯ ಬೌಲರ್ ಗಳು ನೀಡಿದ ತಿರುಗೇಟಿನಿಂದ ಸತತ ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್ ಒತ್ತಡಕ್ಕೆ ಒಳಗಾಯಿತು. ಕೊನೆಯ ಓವರ್‌ನಲ್ಲಿ 21 ರನ್ ಗಳಿಸಬೇಕಾದ ಒತ್ತಡದ ನಡುವೆಯೂ ಎರಡು ಸಿಕ್ಸರ್ ಸೇರಿದ 13 ರನ್ ಸಿಡಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ.

 ಜಸ್‌ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಗಮನ ಸೆಳೆದರೆಮ ನವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಬಳಿಸಿದರು.

ರೋಹಿತ್-ರಾಹುಲ್ ಕಮಾಲ್

 ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡವನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ನಾಯಕನ ಜವಾಬ್ದಾರಿ ಹೊತ್ತಿದ್ದೂ ಅಲ್ಲದೇ ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ತಂಡವನ್ನು ಆಧರಿಸಿದರು. ಆರಂಭಿಕನಾಗಿ ಸಂಜು ಸ್ಯಾಮ್ಸನ್ (2) ಮತ್ತೊಮ್ಮೆ ವಿಫಲರಾದರು. ಆದರೆ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮ ಎರಡನೇ ವಿಕೆಟ್ ಗೆ 88 ರನ್ ಕಲೆಹಾಕಿ ತಂಡವನ್ನು ಆಧರಿಸಿದರು.

 ರಾಹುಲ್ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಔಟಾದರು. ಈ ಮೂಲಕ 5 ರನ್ ಗಳಿಂದ ಅರ್ಧಶತಕದಿಂದ ವಂಚಿತರಾದರು. ರೋಹಿತ್ 41 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 60 ರನ್ ಬಾರಿಸಿ ವೃತ್ತಿಜೀವನದ 25ನೇ ಅರ್ಧಶತಕದ ದಾಖಲೆ ಬರೆದರು. ಶ್ರೇಯಸ್ ಅಯ್ಯರ್ 31 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 33 ರನ್ ಗಳಿಸಿದರೆ, ಮನೀಷ್ ಪಾಂಡೆ 4 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಸೇರಿದ 11 ರನ್ ಚಚ್ಚಿದರು.

ಸಂಕ್ಷಿಪ್ತ ಸ್ಕೋರ್

 ಭಾರತ 20 ಓವರ್ 3 ವಿಕೆಟ್ 163 (ರೋಹಿತ್ 60, ರಾಹುಲ್ 45, ಅಯ್ಯರ್ 33, ಪಾಂಡೆ 11, ಕುಗ್ಗಲೆಜಿನ್ 25/2).

ನ್ಯೂಜಿಲೆಂಡ್ 20 ಓವರ್ 9 ವಿಕೆಟ್ 156 (ಟೇಲರ್ 53, ಸೈಫಿಸ್ಟ್ 50, ಸೋಧಿ ಅಜೇಯ 16, ಜಸ್‌ಪ್ರೀತ್ 12/3, ಸೈನಿ 23/2, ಶಾರ್ದೂಲ್ 38/2).

ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬುಮ್ರಾ

ಸರಣಿ ಶ್ರೇಷ್ಠ: ಕೆ.ಎಲ್.ರಾಹುಲ್

 

%d bloggers like this: