You cannot copy content of this page.
. . .

ಬಹುರೂಪಿ ಗೋಷ್ಠಿ ಅಧ್ಯಕ್ಷತೆ ವಹಿಸಲ್ಲ: ಪ.ಮಲ್ಲೇಶ್

 ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ಬಹುರೂಪಿ ನಾಟಕೋತ್ಸವದಲ್ಲಿ ಫೆ.16ರಿಂದ ನಡೆಯಲಿರುವ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸದಿರಲು ಸಮಾಜವಾದಿ ಪ.ಮಲ್ಲೇಶ್‍ ತೀರ್ಮಾನಿಸಿದ್ದಾರೆ.

 ಬಹುರೂಪಿ ನಾಟಕೋತ್ಸವದ ಅಂಗವಾಗಿ ನಡೆಯುವ ‘ಗಾಂಧಿ ಪಥ’ದ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಲು ಪ.ಮಲ್ಲೇಶ್‍ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅಧ್ಯಕ್ಷತೆ ವಹಿಸಲು ಪ.ಮಲ್ಲೇಶ್‍ ನಿರಾಕರಿಸಿದ್ದಾರೆ. ಈ ಸಂಬಂಧ ರಂಗಾಯಣ ನಿರ್ದೇಶಕರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ. ತಮ್ಮ ನಿಲುವಿಗೆ ಕಾರಣವನ್ನೂ ನೀಡಿದ್ದಾರೆ. ಅದು ಹೀಗಿದೆ..

ಮೈಸೂರು ರಂಗಾಯಣ ನಿರ್ದೇಶಕರಿಗೆ..

 ಗಾಂಧಿ ಪಥದ ಮೊದಲ ಗೋಷ್ಠಿಯ ಅಧ್ಯಕ್ಷ ಸ್ಥಾನ ವಹಿಸಲು ಒಪ್ಪಿದೆ. ಒಪ್ಪಿದ ಮೇಲೆ ಬರಬೇಕು. ಆದರೆ ಬರುತ್ತಿಲ್ಲ. ಕಾರಣ, ನೀವೊಬ್ಬರು ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಹೆಣ್ಣುಮಗಳೊಬ್ಬಳನ್ನು ನಿರ್ದೇಶಕರಾಗಿ ಮುಂದುವರಿಸಲಿಲ್ಲ ಈ ಸರ್ಕಾರ. ಇದು ರಾಜಕೀಯ. ಇದಕ್ಕೆ ಮೌನಸಮ್ಮತಿ ಕೊಡುತ್ತಿರುವವರು ‘ಸಮುದಾಯ’ದವರು. ಆದರೆ, ಗಾಂಧಿ ಪಥದ ಹೆಸರಿನಲ್ಲಿ ನೀವು ರಾಜಕೀಯ ಮಾಡಬೇಕಾಗಿರಲಿಲ್ಲ. ಈ ಸಂದರ್ಭದಲ್ಲಿ ಟಿಪ್ಪುವಿನ ವಿಷಯ ಪ್ರಸ್ತಾಪಿಸಿದ್ದು ಸುತರಾಂ ತಪ್ಪು. ಹೇಳಿ ಕೇಳಿ ಟಿಪ್ಪು ರಾಜಕೀಯ ಗಾಳಕ್ಕೆ ಸಿಕ್ಕಿಕೊಂಡಿದ್ದಾನೆ. ಗಾಂಧಿಪಥದ ಹೆಸರಿನಲ್ಲಿ ನೀವು ಗಾಂಧಿ ಮತ್ತು ಗೋಡ್ಸೆಯನ್ನು ತರುತ್ತೀರ? ನಿಮಗೆ ಪ್ರಜ್ಞೆ ಇರಬೇಕಿತ್ತು. ರಾಜ್ಯ ಸರ್ಕಾರ ಟಿಪ್ಪುವನ್ನು ಪಠ್ಯಪುಸ್ತಕದಿಂದಲೇ ಕಿತ್ತೊಗೆಯುವ ಹುನ್ನಾರದಲ್ಲಿದೆ. ಈ ಮಂತ್ರಿವರೇಣ್ಯನಿಗೆ ಡಾ.ಚಿದಾನಂದಮೂರ್ತಿ ಬದುಕಿರಬೇಕಿತ್ತು.

 ಇನ್ನು, ‘ಜನ್ನಿ, ನನ್ನ ಗೆಳೆಯ, ಕುಡುಕ. ಆದರೆ, ಗಾಂಧೀಜಿ ಕುಡುಕರಲ್ಲ’ ಎಂಬ ನಿಮ್ಮ ನುಡಿಮುತ್ತು. ಮಾನ್ಯರೆ, ರಂಗಾಯಣ ಕಟ್ಟಿದ ಕಲಾತಪಸ್ವಿ ಶ್ರೀ ಬಿ.ವಿ.ಕಾರಾಂತ್ ಎಂತಹ ಕುಡುಕ. ನಿಮ್ಮ ಸುತ್ತಮುತ್ತ ಇರುವವರು ಯಾವ ಗುಂಪಿನ ಕುಡುಕರು. ಶ್ರೀ ಬಿ.ವಿ.ಕಾರಂತರು ಗಾಂಧಿಯನ್ನು ಕುಡಿದಿದ್ದರು, ನೆನಪಿರಲಿ.

 ಮೈಸೂರಿನ ರಂಗಾಯಣಕ್ಕೆ ಸಾಕಷ್ಟು ನಿರ್ದೇಶಕರು ಆಗಿದ್ದಾರೆ. ಅದಕ್ಕೊಂದು ಚರಿತ್ರೆಯಿದೆ. ಇದುವರೆವಿಗೂ ಯಾವೊಬ್ಬ ಹಾಲಿ ನಿರ್ದೇಶಕ ಮೊತ್ತಬ್ಬ ಮಾಜಿ ನಿರ್ದೇಶಕರ ಬಗ್ಗೆ ಇಷ್ಟೊಂದು ಕ್ಷುಲ್ಲಕವಾಗಿ ಮಾತನಾಡಿರಲಿಲ್ಲ. ಮಾನ್ಯರೆ, ನಿಮ್ಮ ನಾಲಗೆ ನಿಮ್ಮ ಕುಲ ಯಾವುದು ಎಂದು ಪ್ರಚಾರ ಮಾಡಿಬಿಟ್ಟಿತು. ಈ ಕಾರಣಗಳಿಂದಾಗಿ ನಾನು ಸಭೆಗೆ ಗೈರುಹಾಜರಾಗುತ್ತಿದ್ದೇನೆ.

 -ಪ.ಮಲ್ಲೇಶ್‍  

Leave a Reply

 

%d bloggers like this: