You cannot copy content of this page.
. . .

ಪ್ರತಿಭಟನೆ ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ; ಹೈಕೋರ್ಟ್

 ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಹತ್ತಿಕ್ಕಲು ಬೆಂಗಳೂರು ನಗರದಲ್ಲಿ ಡಿಸೆಂಬರ್‌ 18ರಿಂದ ಮೂರು ದಿನ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಬಾಹಿರ ಎಂದು ಹೈಕೋರ್ಟ್‌ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.

 ಕಾಂಗ್ರೆಸ್‌ ಸಂಸದ ರಾಜೀವ್‌ಗೌಡ ಮತ್ತು ಶಾಸಕಿ ಸೌಮ್ಯಾರೆಡ್ಡಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ವಾದ – ಪ್ರತಿವಾದ ಆಲಿಸಿದ ಬಳಿಕ ಸಿಜೆ ಎ.ಎಸ್‌.ಓಕಾ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

 ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿಲ್ಲ.
ಸಿಆರ್‌ಪಿಸಿ ಸೆಕ್ಷನ್‌ 144 ಜಾರಿಗೆ ಪೊಲೀಸ್‌ ಆಯುಕ್ತರಿಗೆ ಎಲ್ಲಅಧಿಕಾರವಿದೆ. ಆದರೆ, ಆದೇಶಕ್ಕೂ ಮುನ್ನ ಸೂಕ್ತ ವಿಚಾರಣೆ ನಡೆಸಬೇಕು ಮತ್ತು ಅಗತ್ಯ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಿತ್ತು. ಆದರೆ, ಇಲ್ಲಿಅವರೆಡನ್ನೂ ಮಾಡಿಲ್ಲ ಎಂದು ನ್ಯಾಯಪೀಠ ಹೇಳಿದೆ.

ನಗರದ ಡಿಸಿಪಿಗಳ ವರದಿ ಆಧರಿಸಿ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ, ವರದಿ ಬಗ್ಗೆ ಪೊಲೀಸ್‌ ಆಯುಕ್ತರು ಸೂಕ್ತ ವಿಚಾರಣೆ ನಡೆಸಿಲ್ಲ. ಕೆಲ ಡಿಸಿಪಿಗಳು ಪ್ರತಿಭಟನೆಗೆ ಅನುಮತಿ ನೀಡಿದ್ದರು. ಆದರೆ ನಂತರ ಸೆಕ್ಷನ್‌ 144 ಜಾರಿ ಮಾಡುವಂತೆ ವರದಿ ನೀಡಿದ್ದಾರೆ. ನಿಷೇಧಾಜ್ಞೆ ಜಾರಿಗೆ ಆಯುಕ್ತರು ಸಕಾರಣಗಳನ್ನು ಕೊಟ್ಟಿಲ್ಲ. ಹಾಗಾಗಿ ಆಯುಕ್ತರ ಆದೇಶ ರದ್ದುಪಡಿಸಲಾಗುವುದು ಎಂದು ನ್ಯಾಯಪೀಠ ಆದೇಶಿಸಿತು.

 ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹಾಗೂ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್‍ ವಾದ ಮಂಡಿಸಿದರು.

Leave a Reply

 

%d bloggers like this: