You cannot copy content of this page.
. . .

ದೇಸಿ ಹೈದನ ವಿದೇಶಿ ಕೃಷಿ..

413 Views

   ಏನು ಮಾಡಿದರೂ ವಿದ್ಯೆ ತಲೆಗೆ ಹತ್ತಲಿಲ್ಲ.. ತಿಪ್ಪರಲಾಗ ಹಾಕಿದ್ರೂ ಎಸ್‍ಎಸ್‍ಎಲ್‍ಸಿ ಪಾಸಾಗ್ಲಿಲ್ಲ.. ಮನೆ ಪರಿಸ್ಥಿತಿಯೂ ಓದು ಮುಂದುವರೆಸೋಕೆ ಅವಕಾಶ ಕೊಡಲಿಲ್ಲ.. ಮತ್ತಿನ್ನೇನು ಮಾಡೋದು.. ಇರೋ ಆಯ್ಕೆ ಕೃಷಿ ಒಂದೇ.. ಮೂರೂವರೆ ಎಕರೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು.. ಸರಿ ಅಂತ ಹೊಲದಲ್ಲಿ ನೇಗಿಲು ಹಿಡಿದು ನಿಂತುಬಿಟ್ಟ.. ಎಸ್‍ಎಸ್‍ಎಲ್‍ಸಿ ಪಾಸ್‍ ಮಾಡೋಕೆ ಆಗದಾತ ಕೃಷಿ ವಿಷಯದಲ್ಲಿ ಮಾತ್ರ ದೊಡ್ಡ ಕನಸೇ ಕಂಡ.. ಈತನ ವಿದೇಶಿ ಕನಸು ಈಗ ತನ್ನ ಬದುಕನ್ನೇ ಹಸನು ಮಾಡಿದೆ.

  ಇವರ ಹೆಸರು ಯೋಗೇಶ್‍.. ಚೆನ್ನಾಗಿ ಓದಿದ್ದರೆ ಒಳ್ಳೆ ಯೋಗ ಬರುತ್ತಿತ್ತೋ ಇಲ್ಲವೋ  ಗೊತ್ತಿಲ್ಲ, ಆದರೆ ಕೃಷಿಕನಾಗಿ ಯೋಗೇಶ್‍ಗೆ ಭರ್ಜರಿ ಯೋಗನೇ ಬಂದಿದೆ.. ಅಂದಹಾಗೆ ಯೋಗೇಶ್‍ ಮೈಸೂರು ಸಮೀಪವೇ ಇರುವ ಉದ್ಬೂರು ಗ್ರಾಮದವರು. ಮೊದಲಿಗೆ ಸಂಪ್ರದಾಯಿಕ ಬೆಳೆಗಳನ್ನೇ ಬೆಳೆಯುತ್ತಿದ್ದ ಯೋಗೇಶ್‍ ಒಂದು ದಿನ ಏನಾದರೂ ಹೊಸತನ್ನು ಮಾಡೋಣ ಎಂಬ ಯೋಚನೆ ಬಂದಿದೆ.. ಆಗ ಹೊಳೆದದ್ದೇ ವಿಶೇಷ ಹಾಗೂ ವಿದೇಶಿ ಬೆಳೆಗಳನ್ನು ಯಾಕೆ ಬೆಳೆಯಬಾರದು ಅನ್ನೋದು. ಕೂಡಲೇ ಕೃಷಿ ತಜ್ಞರನ್ನು ಭೇಟಿ ಮಾಡಿದ್ದಾರೆ. ನಂತರ ತಮ್ಮ ಚಿಕ್ಕಪ್ಪನ ಜತೆಗೂಡಿ ವಿದೇಶಿ ಬೆಳೆಗಳ ಕೃಷಿ ಆರಂಭಿಸಿಬಿಟ್ಟಿದ್ದಾರೆ.

ಮೊದಲಿಗೆ ಚೆರ್ರಿ ಟೊಮ್ಯಾಟೋ, ಲೆಮನ್‍ ಗ್ರಾಸ್‍ ಮುಂತಾದ ಬೆಳೆಗಳನ್ನು ಬೆಳೆದ ಯೋಗೇಶ್‍ ಗೆ ಈ ಕೃಷಿ ಕೈಹಿಡಿಯುತ್ತಿದೆ ಎಂದು ಗೊತ್ತಾಗಿದೆ. ಕೂಡಲೇ ಅವರು ಐಸ್‍ಬರ್ಗ್‍ ಲೆಟಿಸ್‍, ಬ್ರಾಕೊಲಿ, ಬೇಸಿಲ್‍, ಥೈಮ್‍, ರೋಸ್‍ಮೆರಿ, ಪಾರ್ಸ್ಲಿ, ಟರ್ನಿಪ್‍, ರೆಡ್‍ ರ್ಯಾಡಿಶ್‍ ಹೀಗೆ ಹಲವಾರು ವೆರೈಟಿ ಬೆಳೆಗಳನ್ನು ಬೆಳೆದಿದ್ದಾರೆ. ವರ್ಷವಿಡೀ ಫಸಲು, ವರ್ಷವಿಡೀ ಆದಾಯ.

ಅಂದಹಾಗೆ ವಿದೇಶಿ ಬೆಳೆಗಳನ್ನೇನೋ ಬೆಳೆದಿದ್ದಾರೆ. ಅವನ್ನು ಹೇಗೆ ಮಾರಾಟ ಮಾಡುತ್ತಾರೆ ಅನ್ನೋ ಪ್ರಶ್ನೆ ಎದುರಾಗುತ್ತೆ. ಇವರು ಬೇರೆ ಕಡಿಮೆ ಜಾಗದಲ್ಲಿ ಬೆಳೆಯುತ್ತಿದ್ದಾರೆ. ಅದನ್ನು ವಿದೇಶಕ್ಕೆ ರಫ್ತು ಮಾಡೋದಕ್ಕೆ ಆಗೋದಿಲ್ಲ. ಹಾಗಂತ ಈ ವಿದೇಶಿ ಫಸಲಿಗೆ ನಮ್ಮಲ್ಲಿ ಬೇಡಿಕೆ ಇಲ್ಲ ಅಂತಲ್ಲ. ಬೆಂಗಳೂರು, ಚೆನ್ನೈ, ಹೈದರಾಬಾದ್‍ನ ವಿಲಾಸಿ ರೆಸ್ಟೋರೆಂಟ್‍ಗಳಿಂದ ದೊಡ್ಡ ಬೇಡಿಕೆಯೇ ಬರುತ್ತಿದೆ. ಸಾಲದೆಂಬಂತೆ ಯೋಗೇಶ್‍ ಅವರು ವಾಟ್ಸಾಪ್‍ ಗ್ರೂಪ್‍ ಒಂದನ್ನು ಮಾಡಿಕೊಂಡಿದ್ದಾರೆ. ಈ ಗ್ರೂಪ್‍ನ ಸದಸ್ಯರು ಆರ್ಡರ್‍ ಮಾಡಿ, ವಿದೇಶಿ ಹಣ್ಣು, ತರಕಾರಿಗಳನ್ನು ತರಿಸಿಕೊಳ್ಳುತ್ತಾರೆ.

ಯೋಗೇಶ್‍ 30 ರಿಂದ 50 ದಿನಗಳೊಳಗೆ ಫಸಲು ಬರುವ ಬೆಳೆಗಳನ್ನು ಮಾತ್ರ ಬೆಳೆಯುತ್ತಾರೆ. ಇದಕ್ಕೆ ಹೆಚ್ಚು ನೀರು ಬೇಕಿಲ್ಲ, ಜೊತೆಗೆ ಬೇಗ ಆದಾಯ ಬರುತ್ತದೆ.

  ವಿದೇಶಿ ಬೆಳೆ ಬೆಳೆದ ಮೇಲೆ ಅದಕ್ಕೆ ರಾಸಾಯನಿಕ ಗೊಬ್ಬರನ್ನು ಹಾಕಿರುತ್ತಾರೆ. ಔಷಧಿಗಳನ್ನು ಸಿಂಪಡಿಸಿರುತ್ತಾರೆ ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪಾಗುತ್ತದೆ. ಯಾಕೆಂದರೆ ಯೋಗೇಶ್‍ ವಿದೇಶಿ ಬೆಳೆ ಬೆಳೆದಿದ್ದರೂ, ಬೆಳೆಯೋ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ದೇಸಿ ಶೈಲಿಯಲ್ಲೇ ಬೆಳೆ ಬೆಳೆಯೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು.

   ಸೂಪರ್‍ ಮಾರ್ಕೆಟ್‍ಗಳಲ್ಲಿ ಯೋಗೇಶ್‍ ಬೆಳೆಯೋ ರೀತಿಯ ಎಲ್ಲಾ ಹಣ್ಣು, ತರಕಾರಿಗಳೂ ಸಿಗುತ್ತವೆ. ಆದರೆ ಅಲ್ಲಿ ದುಬಾರಿ. ಯೋಗೇಶ್‍ ಮಾತ್ರ ಅದಕ್ಕಿಂತ ಕಡಿಮೆ ಬೆಲೆಗೆ ನೀಡಿಯೂ ಉತ್ತಮ ಲಾಭ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಮಾಡೋಕೆ ಆಗಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತವರು ಈಗ ಯೋಗೇಶ್‍ರನ್ನು ನೋಡಿ ಜಮೀನಿನ ಕಡೆ ಮುಖ ಮಾಡುತ್ತಿದ್ದಾರೆ.

 

%d bloggers like this: