You cannot copy content of this page.
. . .

ತನ್ವೀರ್ ಪ್ರಕರಣ; ‘ಮುಗ್ಧ’ ಮಾತು.. ಆತ್ಮಹತ್ಯೆ ಬೆದರಿಕೆ

57 Views

ಮೈಸೂರಿನಲ್ಲಿ ಶಾಸಕ ತನ್ವೀರ್‍ ಸೇಠ್‍ ಕೊಲೆ ಯತ್ನದ ಆರೋಪದಡಿ ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.

‘ನನ್ನ ಪತಿ ಮುಗ್ಧ. ಅವರಿಗೂ ಈ ಕೊಲೆ ಯತ್ನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ, ಅವರನ್ನು ಬಂಧಿಸಲಾಗಿದೆ. ಅವರಿಗೆ ನ್ಯಾಯ ಸಿಗದೆ ಹೋದರೆ ಕಮಿಷನರ್‍ ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬಂಧಿತ ಆರು ಆರೋಪಿಗಳಲ್ಲಿ ಒಬ್ಬರಾದ ಸಯ್ಯದ್‍ ಮೊಯೀಬ್‍ ಅವರ ಪತ್ನಿ ಹೀನಾ ಕೌಸರ್‍ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.

ಸೋಷಿಯಲ್‍ ಡೆಮಾಕ್ರಟಿಕ್ ಪಾರ್ಟಿ ಆಫ್‍ ಇಂಡಿಯಾ ಅಬ್ದುಲ್‍ ಮಜೀದ್ ಮಾತನಾಡಿ, ಸೈಯದ್ ಮೊಹೀಬ್ ಮತ್ತು ಮುಜಾಮಿರ್‍ ಎಸ್‍ಡಿಪಿಐ ಕಾರ್ಯಕರ್ತರು. ಇವರೊಂದಿಗೆ ಬಂಧನಕ್ಕೆ ಒಳಗಾಗಿರುವ ಇತರೆ ಆರೋಪಿಗಳು ಮುಗ್ಧರು ಎಂದು ಪಕ್ಷದ ಆಂತರಿಕ ಶಿಸ್ತು ಸಮಿತಿಯ ವರದಿ ಹೇಳಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‍ ಒತ್ತಾಯಕ್ಕೆ ಮಣಿದು ಪೊಲೀಸರು ಇವರನ್ನು ಬಂಧಿಸಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪೊಲೀಸರು ಎಸ್‍ಡಿಪಿಐ ಪಕ್ಷವನ್ನು ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಆರೋಪಿಗಳನ್ನು ಪಕ್ಷದ ಕಚೇರಿ ಬಳಿ ಕರೆತಂದು ಫೋಟೊ ತೆಗೆದಿದ್ದಾರೆ. ಇದು ಯಾವ ರೀತಿಯ ವಿಚಾರಣೆ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದರು.

ಆರೋಪಿಗಳನ್ನು ಸುಳ್ಳು ಹೇಳಿ ಪೊಲೀಸ್‍ ಠಾಣೆಗೆ ಕರೆದೊಯ್ದು ದೋಷಾರೋಪ ಹೊರಿಸಲಾಗಿದೆ. ಬಂಧಿತರು ಕುರಾನ್, ತಂದೆ-ತಾಯಿ ಮೇಲೆ ಆಣೆ ಮಾಡಲು ತಯಾರಾಗಿದ್ದಾರೆ. ಪೊಲೀಸರ ದೋಷಾರೋಪ ಕಟ್ಟುಕತೆಗಳು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಕೀಲ ಅನಸ್‍ ಮಾತನಾಡಿ, ಆರೋಪಿಗಳ ಪರ ವಕಾಲತ್ತು ವಹಿಸಿ ಜಾಮೀನು ಪಡೆಯಲು ಯತ್ನಿಸಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.

Leave a Reply

 

%d bloggers like this: