You cannot copy content of this page.
. . .

‘ಚಾಣಕ್ಯ’ ಪರಿಕಲ್ಪನೆ ಪ್ರಜಾಪ್ರಭುತ್ವಕ್ಕೆ ಮಾರಕ: ಕಣ್ಣನ್‍ ಗೋಪಿನಾಥನ್

ಈಗ ನಿತ್ಯವೂ ಮಾಧ್ಯಮಗಳಲ್ಲಿ ‘ಚಾಣಕ್ಯ’ ಪರಿಕಲ್ಪನೆಯನ್ನು ನೋಡುತ್ತಿದ್ದೇವೆ. ಆದರೆ ಪ್ರಜಾಪ್ರಭುತ್ವಕ್ಕೆ ಚಾಣಕ್ಯ ಎಂಬ ಪರಿಕಲ್ಪನೆ ಮಾರಕ ಎಂದು ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಕನ್ಸರ್ನ್ಡ್ ಸಿಟಿಜ಼ನ್ಸ್ ಆಫ್ ಇಂಡಿಯಾ (ಸಿಸಿಐ) ಮೈಸೂರು ಘಟಕದ ವತಿಯಿಂದ ಸೋಮವಾರ ನಡೆದ ‘ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದಿರುವ ಸವಾಲುಗಳು’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅವರು ‘ಚಾಣಕ್ಯ’ನೋ, ಇವರು ‘ಚಾಣಕ್ಯ’ನೋ ಎಂದು ಚರ್ಚಿಸುತ್ತಿದ್ದೇವೆ. ಗುಪ್ತರ ಕಾಲದಲ್ಲಿ ರಾಜಪ್ರಭುತ್ವದ ಪೋಷಣೆಗಾಗಿ ಇದ್ದ ವ್ಯಕ್ತಿ ಚಾಣಕ್ಯ. ನಾವಿಂದು ರಾಜ ಪ್ರಭುತ್ವದಲ್ಲಿ ಇಲ್ಲ. ಜನಪ್ರತಿನಿಧಿಗಳು ಜನರ ಸೇವಕರೇ ಹೊರತು ರಾಜರಲ್ಲ. ಇದು ಪ್ರಜಾಪ್ರಭುತ್ವವೇ ಹೊರತು, ಸಾಮ್ರಾಜ್ಯವಲ್ಲ ಎಂದು ನುಡಿದರು.

ಈಗಿನ ಕೇಂದ್ರ ಸರ್ಕಾರವನ್ನು ಫ್ಯಾಸಿಸ್ಟ್ ಎನ್ನುವುದಕ್ಕಿಂತ ಬುದ್ಧಿ ಇಲ್ಲದ್ದು ಎನ್ನಬಹುದು. ಕೇಂದ್ರ ಸರ್ಕಾರ ಯಾವುದೇ ನಿಯಮ ಜಾರಿಗೊಳಿಸಿದರೂ ಐತಿಹಾಸಿಕ ಎಂದು ಬಿಂಬಿಸಿಕೊಳ್ಳುತ್ತಿದೆ. ನೋಟು ರದ್ದತಿ, ಜಿಎಸ್‌ಟಿ, ೩೭೦ನೇ ವಿಧಿ ರದ್ದು, ಎನ್‌ಆರ್‌ಸಿ ನಿರ್ಧಾರ ಎಲ್ಲವೂ ಐತಿಹಾಸಿಕ ಎನ್ನುತ್ತಿದೆ. ಆದರೆ ಈ ನಿರ್ಧಾರಗಳಿಂದಾಗುವ ಮುಂದಿನ ಪರಿಣಾಮಗಳ ಕುರಿತು ಸರ್ಕಾರ ಚಿಂತಿಸಿಲ್ಲ ಎಂದು ವಿಷಾದಿಸಿದರು.

ಸಿಸಿಐ ರಾಜ್ಯ ಸಂಚಾಲಕ ಬಿ.ರವಿ, ನಿವೃತ್ತ ಪ್ರಾಂಶುಪಾಲರಾದ ವಿದ್ಯಾ ಶಂಕರ್ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ದೇವನೂರ ಮಹಾದೇವ, ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಕಾರ್ಮಿಕ ಮುಖಂಡರಾದ ಡಾ.ಲಕ್ಷ್ಮಿನಾರಾಯಣ್, ಡಾ.ರತಿರಾವ್, ಉಮಾದೇವಿ ಇತರರು ಪಾಲ್ಗೊಂಡಿದ್ದರು.


 

%d bloggers like this: