You cannot copy content of this page.
. . .

ಗಾಳಿಯಿಂದ ನೀರು ಉತ್ಪಾದನೆ; ಟೇಸ್ಟ್ ನೋಡಿ ಖುಷಿ ಪಟ್ಟ ಯಧುವೀರ್

    ವಾತಾವರಣದಲ್ಲಿ ತೇವಾಂಶವಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲ ಪ್ರಗತಿ ಪರ ರೈತರು ಗಾಳಿಯಲ್ಲಿನ ತೇವಾಂಶವನ್ನೇ ಬಳಸಿಕೊಂಡು ಬೆಳೆ ಬೆಳೆದು ತೋರಿಸಿದ್ದಾರೆ ಕೂಡಾ. ಆದರೆ ಸಂಶೋಧಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಗಾಳಿಯಲ್ಲಿನ ತೇವಾಂಶವನ್ನು ನೀರಾಗಿ ಪರಿವರ್ತಿಸಿ, ಕುಡಿಯುವುದಕ್ಕೆ ಬಳಸಬಹುದು ಅನ್ನೋದನ್ನು ಸಾಬೀತು ಮಾಡಿದ್ದಾರೆ. ಜರ್ಮನಿಯ ಗ್ರೀನ್‍ಟೆಕ್‍ ಆಕ್ವಾ ಎಂಬ ಕಂಪನಿ ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರವನ್ನು ತಯಾರಿಸಿದ್ದು, ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಪ್ರದರ್ಶನಕ್ಕಿಟ್ಟಿತ್ತು.

   ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್‍ 18 ರಿಂದ 20ರವರೆಗೆ ಬೆಂಗಳೂರು ಟೆಕ್‍ ಸಮಿತ್‍ ಆಯೋಜಿಸಲಾಗಿತ್ತು. ಇದರಲ್ಲಿ ಜರ್ಮನ್‍ ಮೂಲಕ ಗ್ರೀನ್‍ ಟೆಕ್‍ ಕಂಪನಿ, ಗಾಳಿಯಿಂದ ನೀರು ಉತ್ಪಾದಿಸುವ ಯಂತ್ರ ಪ್ರದರ್ಶನಕ್ಕಿಟ್ಟಿತ್ತು. ಮೈಸೂರು ರಾಜ ವಂಶಸ್ಥ ಯಧುವೀರ್‍ ಒಡೆಯರ್‍ ಕೂಡಾ ಟೆಕ್‍ ಸಮ್ಮಿತ್‍ನಲ್ಲಿ ಭಾಗವಹಿಸಿದ್ದರು. ಈ ಯಂತ್ರವನ್ನು ಕುತೂಹಲದಿಂದ ನೋಡಿದ ಅವರು, ಗಾಳಿಯಿಂದ ತಯಾರಿಸಿದ ನೀರನ್ನು ಕುಡಿದು ಖುಷಿಪಟ್ಟರು.

ಗಾಳಿಯಿಂದ ನೀರು ತಯಾರಿಸೋದು ಹೇಗೆ..?

  ಶೀತಗಾಳಿಯನ್ನು ಯಂತ್ರ ತನ್ನೊಳಗೆ ಸೆಳೆದುಕೊಂಡು ಗಾಳಿಯಲ್ಲಿರುವ ತೇವಾಂಶವನ್ನು ಶಾಖದ ಮೂಲಕ ನೀರಾಗಿ ಪರಿವರ್ತಿಸುತ್ತದೆ. ಯಂತ್ರದಲ್ಲಿ ಶಾಖ ವಿನಿಮಯದ ವ್ಯವಸ್ಥೆ ಮೂಲಕ ಸ್ವಚ್ಛವಾದ ಗಾಳಿಯನ್ನು ಹಾದು ಹೋಗುವಂತೆ ಮಾಡಿದಾಗ ಅದು ತೇವವನ್ನು ಕಳೆದುಕೊಳ್ಳುತ್ತದೆ. ಆಗ ಗಾಳಿಯಿಂದ ನೀರು ಪ್ರತ್ಯೇಕಗೊಂಡು ಟ್ಯಾಂಕ್‍ ನಲ್ಲಿ ಸಂಗ್ರಹವಾಗುತ್ತದೆ. ಬಳಿಕ ಸಂಸ್ಕರಣಾ ವ್ಯವಸ್ಥೆಯ ಮೂಲಕ ಹಾಯಿಸಿ ನೀರನ್ನು ಶುದ್ಧಗೊಳಿಸಲಾಗುತ್ತದೆ.

  ಮನೆಯ ತಾರಸಿಯಲ್ಲಿ ಮುಕ್ತವಾದ ವಾತಾವರಣದಲ್ಲಿ ಸಾಕಷ್ಟು ಜೋರಾಗಿಯೇ ಗಾಳಿ ಬೀಸುತ್ತಿರುತ್ತದೆ. ಹೀಗಾಗಿ ಈ ಯಂತ್ರವನ್ನು ತಾರಸಿಯಲ್ಲಿ ಇಟ್ಟರೆ ಹಿತವಾಗಿ ಬೀಸುವ ಗಾಳಿಯನ್ನು ತನ್ನೊಳಗೆ ಸೆಳೆದುಕೊಂದು ಶಾಖ ನೀಡಿ ಅದರಲ್ಲಿರುವ ತೇವಾಂಶವನ್ನು ನೀರಾಗಿ ಪರಿವರ್ತಿಸಬಹುದು. ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಕುಡಿಯುವ ನೀರನ್ನು ಉತ್ಪಾದಿಸಿಕೊಳ್ಳಬಹುದು ಎಂದು ಹೇಳಲಾಗ್ತಿದೆ.

ದಿನಕ್ಕೆ ಎಷ್ಟು ನೀರು ಉತ್ಪಾದಿಸಬಹುದು..?

   ಈ ಯಂತ್ರದಿಂದ ದಿನಕ್ಕೆ 250 ರಿಂದ 10,000 ಲೀಟರ್‍ ನಷ್ಟು ನೀರು ಉತ್ಪಾದನೆ ಮಾಡಬಹುದು. ಈ ಯಂತ್ರದ ಬೆಲೆ 24 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ. ಭಾರತದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಇದನ್ನು ಮೊದಲಿಗೆ ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಆದರೆ ಇಷ್ಟು ದುಬಾರಿ ಹಣ ನೀಡಿ ಯಾರೂ ಮನೆಗಳಿಗೆ ಕೊಂಡುಕೊಳ್ಳಲು ಕಷ್ಟವಾಗಬಹುದು. ಕಂಪನಿಗಳು ಇದರ ಸದುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ವಾತಾವರಣದಲ್ಲಿ ತೇವಾಂಶವನ್ನು ಯಂತ್ರಗಳ ಮೂಲಕ ಖಾಲಿ ಮಾಡಿದರೆ ತಾಪಮಾನ ಇನ್ನೂ ಹೆಚ್ಚಾಗಬಹುದೆಂಬ ಆತಂಕ ಕೂಡಾ ಕಾಡುತ್ತಿದೆ.

 

%d bloggers like this: