You cannot copy content of this page.
. . .

ಕೇರಳದ ಅಕ್ಕಿತಂಗೆ ಜ್ಞಾನಪೀಠ ಪ್ರಶಸ್ತಿ

  ಅಕ್ಕಿತಂ ಎಂಬ ಕಾವ್ಯನಾಮದಿಂದಲೇ  ಜನಪ್ರಿಯರಾಗಿರುವ   ಮಲೆಯಾಳಂ   ಹಿರಿಯ ಸಾಹಿತಿ   ಅಚ್ಯುತನ್ ನಂಬೂದರಿ  ಅವರಿಗೆ  ಸಾಹಿತ್ಯಕ್ಕಾಗಿ ನೀಡುವ   ಅತ್ಯಂತ ಪ್ರತಿಷ್ಠಿತ  ಜ್ಞಾನಪೀಠ ಪುರಸ್ಕಾರವನ್ನು ಘೋಷಿಸಲಾಗಿದೆ. 93 ವರ್ಷದ  ಉತ್ತರ ಕೇರಳದ  ಈ ಹಿರಿಯ,  ಹೃದಯದಿಂದಲೇ   ಬರೆಯುವ  ಸಾಹಿತಿ ಎಂದೇ  ಮಲೆಯಾಳಂ  ಓದುಗ ಪ್ರೇಮಿಗಳಲ್ಲಿ  ಜನಪ್ರಿಯರಾಗಿದ್ದಾರೆ.

  ದೆಹಲಿಯಲ್ಲಿ ನಡೆದ ಹಿರಿಯ ಒಡಿಯಾ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಪ್ರತಿಭಾ ರೇ ಅವರ ಅಧ್ಯಕ್ಷತೆಯ ಕೇಂದ್ರೀಯ ಆಯ್ಕೆ ಸಮಿತಿ ಸಭೆಯಲ್ಲಿ ಅಕ್ಕಿತಂ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಮಿತಿಯಲ್ಲಿ ದೇಶದ ನಾನಾ ಭಾಷೆಗಳ 23 ಸಾಹಿತಿಗಳಿದ್ದಾರೆ. ಕನ್ನಡದ ಪ್ರತಿನಿಧಿಯಾಗಿ ಜೆ.ಎನ್‍.ಯು ಕನ್ನಡ ಪೀಠದ ನಿರ್ದೇಶಕರಾದ ಡಾ.ಪುರುಷೋತ್ತಮ ಬಿಳಿಮಲೆ ಅವರಿದ್ದಾರೆ. ಕರ್ನಾಟಕದಿಂದ ಎಂ.ವೀರಪ್ಪ ಮೊಯ್ಲಿ, ಕಮಲಾ ಹಂಪನಾ ಹಾಗೂ ಮೈಸೂರಿನ ಲೇಖಕಿ ಲತಾ ರಾಜಶೇಖರ್‍ ಅವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

  ಅಕ್ಕಿತಂ   ಅವರು  ಜ್ಞಾನಪೀಠ ಪುರಸ್ಕಾರ   ಸ್ವೀಕರಿಸಲಿರುವ  6ನೇ ಮಲೆಯಾಳಂ ಸಾಹಿತಿಯಾಗಿದ್ದಾರೆ. 1965ರಲ್ಲಿ  ಜಿ.ಎಸ್. ಕುರುಪ್,  1980ರಲ್ಲಿ ಎಸ್.ಕೆ. ಪೊಟ್ಟೆಕಾಡ್,  1984ರಲ್ಲಿ ಥಕಾಯಿ  ಶಿವಶಂಕರ ಪಿಳ್ಳೈ,  1995ರಲ್ಲಿ  ಎಂ.ಟಿ. ವಾಸುದೇವನ್ ನಾಯರ್ ಹಾಗೂ 2007ರಲ್ಲಿ  ಓ ಎನ್ ವಿ ಕುರುಪ್ ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.

 1926ರ  ಮಾರ್ಚ್ 18 ರಂದು  ಪಾಲಕ್ಕಾಡ್ ಜಿಲ್ಲೆಯ  ಕುಮರನಲ್ಲೂರ್ ಸಮೀಪ ಅಮೆಟ್ಟಿಕರದಲ್ಲಿ  ಎಎಎಂ ವಾಸುದೇವನ್ ನಂಬೂದರಿ ಹಾಗೂ  ಸಿ.ಎಂ ಪಾರ್ವತಿ ಅಂಥರಾಜನಂ ದಂಪತಿಗೆ ಜನಿಸಿದ ಅಕ್ಕಿತಂ ಮಲೆಯಾಳಂ ಸಾಹಿತ್ಯದಲ್ಲಿ ಅತ್ಯಂತ ಸರಳ ಹಾಗೂ ಓದುಗರು ಸುಲಭವಾಗಿ ಗ್ರಹಿಸುವ  ಬರವಣಿಗೆಗೆ ಹೆಸರುವಾಸಿಯಾಗಿದ್ದಾರೆ.

 ಕೇರಳ ಸಾಹಿತ್ಯಕ್ಕೆ ಹೊಸ ಚೈತನ್ಯ ತಂದುಕೊಟ್ಟ ಅಕ್ಕಿತಂ ಅವರ ಇರುಪತ್ತಂ ನೂತಂತಿತೆ ಇತಿಹಾಸಂ, ಬಲಿ ದರ್ಶನಂ, ಧರ್ಮ ಸೂರ್ಯನ್ ಸೇರಿ ಹಲವಾರು ಕೃತಿಗಳು ಖ್ಯಾತಿ ಗಳಿಸಿವೆ. ಪದ್ಮಶ್ರೀ ಪ್ರಶಸ್ತಿ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿಗಳು ಅಕ್ಕಿತಂಗೆ ಸಂದಿವೆ.


 

%d bloggers like this: