You cannot copy content of this page.
. . .

ಕೆ.ಆರ್.ಪೇಟೆ ಉಪಸಮರ; ನಾರಾಯಣ ಗೌಡ ವಿರುದ್ಧ ಘೋಷಣೆ

ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬಂದ ಕೆ.ಆರ್‍.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಜೆಡಿಎಸ್‍ ಕಾರ್ಯಕರ್ತರು ಘೋಷಣೆ ಕೂಗಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ಜೆಡಿಎಸ್‍ ನಿಂದ ಆಯ್ಕೆಯಾಗಿದ್ದ ನಾರಾಯಣಗೌಡರು, ಬಿಜೆಪಿಗೆ ಹಾರಿದ್ದರಿಂದಾಗಿ ಉಪಚುನಾವಣೆ ಎದುರಾಗಿದೆ. ಇವತ್ತು (ಸೋಮವಾರ) ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಲು ಬಂದಿದ್ದರು. ಈ ವೇಳೆ ಜೆಡಿಎಸ್‍ ಕಾರ್ಯಕರ್ತರು ನಾರಾಯಣಗೌಡ ವಿರುದ್ಧ ಘೋಷಣೆ ಕೂಗಿದರು. ಪಕ್ಷಕ್ಕೆ ದ್ರೋಹ ಎಸಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‍ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

  ಕೊನೆಗೆ ಪೊಲೀಸ್‍ ಭದ್ರತೆಯಲ್ಲಿ ನಾರಾಯಣ ಗೌಡ ತಾಲೂಕು ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು. ಆದರೆ ಹೊರಗಡೆ ಉದ್ವಿಗ್ನ ಪರಿಸ್ಥಿತಿ ಇದ್ದುದರಿಂದ ನಾರಾಯಣಗೌಡರನ್ನು ಕಚೇರಿಯಲ್ಲೇ ಕೆಲಹೊತ್ತು ಕೂರಿಸಲಾಗಿತ್ತು. ಅನಂತರ ಪೊಲೀಸ್‍ ವರಿಷ್ಠಾಧಿಕಾರಿ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗಲಾಯಿತು. ಈ ವೇಳೆ ಕೂಡಾ ಜೆಡಿಎಸ್‍ ಕಾರ್ಯಕರ್ತರು ಎಸ್ಪಿ ಕಾರಿಗೆ ಮುತ್ತಿಗೆ ಹಾಕಿದರು. ಬಾವುಟಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

  ಈ ವೇಳೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ನನ್ನ ಮೇಲೆ ಚಪ್ಪಲಿ ಎಸೆದಿದ್ದಾರೆ. ಸಚಿವ ಮಾಧುಸ್ವಾಮಿ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

%d bloggers like this: