You cannot copy content of this page.
. . .

ಕೆ.ಆರ್.‘ಪೇಟೆ’ಯಲ್ಲಿ ಬಾಂಬೆ ‘ಚೌಕಾಸಿ’..

62 Views

  ಉಪಚುನಾವಣೆಯಲ್ಲಿ ಝಣಝಣ ಕಾಂಚಾಣದ್ದೇ ಸದ್ದು.. ಮತಕ್ಕಿಷ್ಟು, ಕುಟುಂಬಕ್ಕಿಷ್ಟು, ಸಂಘಕ್ಕಿಷ್ಟು, ಜಾತಿಗಿಷ್ಟು ಅಂತ ಹಣ ಹಂಚಿಕೆಯಾಗ್ತಿದೆ. ಅದರಲ್ಲೂ ಮಂಡ್ಯ ಜಿಲ್ಲೆ ಕೆ.ಆರ್‍.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಣದ ಜೊತೆ ಮುಂಬೈ ಚೌಕಾಸಿ ನಡೆಯುತ್ತಿದೆ. ಇಲ್ಲಿ ಮುಂಬೈ ಅಂದ ತಕ್ಷಣ ನೆನಪಾಗೋದು ಬಿಜೆಪಿ ಅಭ್ಯರ್ಥಿ ಹಾಗೂ ಅನರ್ಹ ಶಾಸಕ ನಾರಾಯಣಗೌಡರು. ಇವರು ಮುಂಬೈಗೆ ವಲಸೆ ಹೋಗಿ ಅಲ್ಲಿ ಹೋಟೆಲ್‍ ಉದ್ಯಮ ನಡೆಸುತ್ತಿದ್ದಾರೆ. ಹಾಗಂತ ಕೆ.ಆರ್‍.ಪೇಟೆಯಿಂದ ಇವರೊಬ್ಬರೇ ಮುಂಬೈಗೆ ಹೋಗಿ ನೆಲೆಸಿಲ್ಲ. ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಮುಂಬೈನಲ್ಲಿ ಬದುಕು ಕಂಡುಕೊಂಡಿದ್ದಾರೆ. ಅವರೆಲ್ಲರ ಮತದಾನದ ಹಕ್ಕೂ ಇನ್ನೂ ಕೆ.ಆರ್‍.ಪೇಟೆ ಕ್ಷೇತ್ರದಲ್ಲೇ ಇದೆ. ಹೀಗಾಗಿ ಮುಂಬೈನಲ್ಲಿ ನೆಲೆಸಿರುವ ವಲಸಿಗರನ್ನು ಓಲೈಸಿಕೊಳ್ಳಲು ಮೂರೂ ಪಕ್ಷಗಳ ಅಭ್ಯರ್ಥಿಗಳು ಚೌಕಾಸಿ ಮಾಡುತ್ತಿದ್ದಾರೆ.

   ಮತದಾನ ನಡೆಯುವ ಹಿಂದಿನ ದಿನ ಅಥವಾ ಮತದಾನ ನಡೆಯುವ ದಿನ ವಲಸೆ ಹೋದವರನ್ನು ಅಭ್ಯರ್ಥಿಗಳೇ ವಾಹನಗಳನ್ನು ಕಳುಹಿಸಿ ಕರೆಸಿಕೊಳ್ಳುವುದು ಸಾಮಾನ್ಯ. ಆದರೆ ಕೆ.ಆರ್‍.ಪೇಟೆಯಲ್ಲಿ ಈ ಬಾರಿ ನಾಲ್ಕು ದಿನದ ಮುಂಚೆಯೇ ವಲಸೆ ಹೋಗಿರುವ ಮತದಾರರನ್ನು ಕರೆಸಿಕೊಳ್ಳಲಾಗಿದೆ. ಮುಂಬೈನಲ್ಲಿ ನೆಲೆಸಿದ್ದ 2 ಸಾವಿರಕ್ಕೂ ಹೆಚ್ಚು ಮಂದಿ ಕೂಡಾ ಈಗಾಗಲೇ ಕ್ಷೇತ್ರಕ್ಕೆ ವಾಪಾಸ್ಸಾಗಿದ್ದಾರೆ. ಅವರು ಕೂಡಾ ಪ್ರಚಾರದಲ್ಲಿ ತೊಡಗಿದ್ದಾರೆ. ಮುಂಬೈನಿಂದ ಬಂದವರಲ್ಲಿ ಹೆಚ್ಚಿನವರು ನಾರಾಯಣಗೌಡರ ಪರವಾಗಿ ಪ್ರಚಾರ ನಡೆಸುತ್ತಿದ್ದಾರಂತೆ.

  ಐಶಾರಾಮಿ ಬಸ್ಸು, ಕಾರುಗಳನ್ನು ಕಳುಹಿಸಿ ವಲಸೆ ಹೋಗಿದ್ದ ಮತದಾರರನ್ನು ಕರೆಸಿಕೊಳ್ಳಲಾಗಿದೆ. ಹಣವೂ ಸಿಗುತ್ತದೆ. ಊರು ನೋಡಿದ ಹಾಗೂ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ವಲಸೆ ಹೋದವರೆಲ್ಲಾ ತಮ್ಮ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ. ಇನ್ನು ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಸ್ನೇಹಿತರ ದರ್ಶನವೂ ಆಗುತ್ತದೆ ಎಂಬ ಕಾರಣಕ್ಕೂ ಎಲ್ಲರೂ ನಾಲ್ಕು ದಿನದ ಮುಂಚೆಯೇ ಕ್ಷೇತ್ರಕ್ಕೆ ಬಂದಿದ್ದಾರೆ. ಹೀಗಾಗಿ ಖಾಲಿ ಖಾಲಿ ಹೊಡೆಯುತ್ತಿದ್ದ ಗ್ರಾಮಗಳೀಗ ಜನರಿಂದ ತುಂಬಿ ತುಳುಕುತ್ತಿವೆ.  

  ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಮುಂಬೈನಲ್ಲಿ ನೆಲೆಸಿದ್ದರಿಂದಾಗಿ ಅಲ್ಲಿರುವ ಕೆ.ಆರ್‍.ಪೇಟೆಯ ಮತದಾರರ ಪರಿಚಯ ಇದೆ. ಈ ಹಿಂದೆ ನಡೆದ 2 ಚುನಾವಣೆಗಳಿಗೂ ಅವರನ್ನೂ ಕರೆಸಿದ ಅನುಭವ ಕೂಡಾ ನಾರಾಯಣಗೌಡರಿಗಿದೆ. ಹೀಗಾಗಿ ವಲಸಿಗರನ್ನು ಕ್ಷೇತ್ರಕ್ಕೆ ಕರೆತರುವ ವಿಚಾರದಲ್ಲಿ ನಾರಾಯಣಗೌಡರು ಮುಂದಿದ್ದಾರೆ. ಜೊತೆಗೆ ಬಂದವರಿಗೆ ನಾರಾಯಣಗೌಡರು ರಾಜಾತಿಥ್ಯ ನೀಡುತ್ತಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಜೆಡಿಎಸ್‍ ಶಾಸಕ ಡಿ.ಸಿ.ತಮ್ಮಣ್ಣ ಅವರು ನಾರಾಯಣಗೌಡರನ್ನು ಗೆಲ್ಲಿಸಿದರೆ ಕೆ.ಆರ್‍.ಪೇಟೆಯನ್ನು ಮುಂಬೈ ತರಾ ಮಾಡೋದಿಲ್ಲ, ಕಾಮಾಟಿಪುರವನ್ನಾಗಿ ಮಾಡುತ್ತಾರೆ ಎಂದು ಲೇವಡಿ ಮಾಡಿದ್ದರು. ಈ ಮಾತನ್ನೇ ನಾರಾಯಣ ಗೌಡರು ಬಂಡವಾಳ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಮುಂಬೈನಿಂದ ಬಂದ ವಲಸಿಗರಿಗೆ ತಿಳಿಸಿ, ತಮ್ಮ ಪರವಾದ ಅಲೆ ಸೃಷ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಹಾಗಂತ ಕಾಂಗ್ರೆಸ್‍, ಜೆಡಿಎಸ್‍ ಅಭ್ಯರ್ಥಿಗಳೂ ಹಿಂದೆ ಬಿದ್ದಿಲ್ಲ. ಕಾಂಗ್ರೆಸ್‍ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‍, ಜೆಡಿಎಸ್‍ ಅಭ್ಯರ್ಥಿ ಬಿ.ಎಲ್‍.ದೇವರಾಜು ಅವರೂ ಬೆಂಗಳೂರು, ಮೈಸೂರು ಇನ್ನಿತರೆಡೆ ನೆಲೆಸಿರುವ ಮತದಾರರನ್ನು ಕರೆತರುತ್ತಿದ್ದಾರೆ. ಮುಂಬೈಗೂ ವಾಹನಗಳನ್ನು ಕಳುಹಿಸಿ, ವಲಸೆ ಮತದಾರರನ್ನು ಒಲಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ.  

Leave a Reply

 

%d bloggers like this: