You cannot copy content of this page.
. . .

ಕಾಂಕ್ರೀಟ್ ಕಾಡಲ್ಲಿ ‘ಬಾಳೆ’ ಹಸಿರಾಯಿತು..

   ಮಳೆನೀರು ಕೊಯ್ಲು ಪದ್ಧತಿಯ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ಆದರೆ ಬಿಸಿಲು ಕೊಯ್ಲಿನ ಬಗ್ಗೆ ಕೇಳಿರುವವರ ಸಂಖ್ಯೆ ಕಡಿಮೆ. ಸೂರ್ಯನಿಂದ ನೇರವಾಗಿ ಭೂಮಿಗೆ ಬೀಳುವ ಬಿಸಿಲು ಹಾನಿಕಾರಕ. ಅವುಗಳು ಪ್ರಖರವಾಗಿ ಭೂಮಿ ಮೇಲೆ ಬೀಳದಂತೆ ಎಲ್ಲೆಡೆ ಹಸಿರು ಬೆಳೆಸಿ ಉರಿ ಬಿಸಿಲನ್ನು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡಿಕೊಳ್ಳುವ ಪದ್ಧತಿಯೇ ಬಿಸಿಲು ಕೊಯ್ಲು.
ಬೆಳಕಿನ ಬೇಸಾಯ ಅಥವಾ ಬಿಸಿಲು ಕೊಯ್ಲು ಪದ್ಧತಿ ಬಗ್ಗೆ ಇನ್ನೂ ಹೆಚ್ಚು ಜನಕ್ಕೆ ತಿಳಿದಿಲ್ಲ. ಆದರೆ ಮೈಸೂರಿನ ಈ ನಿವೃತ್ತ ಕೃಷಿ ವಿಜ್ಞಾನಿಯೊಬ್ಬರು ನಗರದ ಮಧ್ಯೆಯೇ ಇರುವ ತಮ್ಮ ಮನೆಯಲ್ಲಿ ಬೆಳಕಿನ ಬೇಸಾಯ ಮಾಡಿ ಗಮನ ಸೆಳೆಯುತ್ತಿದ್ದಾರೆ. ನಗರದಲ್ಲಿದ್ದೂ ಸುಲಭವಾಗಿ ಕೃಷಿ ಮಾಡಬಹುದೆಂದು ತೋರಿಸಿಕೊಡುತ್ತಿದ್ದಾರೆ. ಮನೆ ಮುಂದೆ `ತಾರಸಿ ತೋಟಕ್ಕೆ ಸ್ವಾಗತ’ ಎಂಬ ಫಲಕದೊಂದಿಗೆ ಬಂದವರನ್ನು ಸ್ವಾಗತಿಸುತ್ತಾರೆ. ಇವರ ಹೆಸರು ರುದ್ರಾರಾಧ್ಯ.

೧೫ ವರ್ಷದ ಹಿಂದೆಯೇ ನಿವೃತ್ತಿಯಾಗಿರುವ ರುದ್ರಾರಾಧ್ಯ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು. ಪ್ರಸ್ತುತ ವಿಜಯನಗರ ಮೂರನೇ ಹಂತದ ಮೋರ್ ಸೂಪರ್‌ಮಾರ್ಕೆಟ್ ಬಳಿಯ ಮಹಾಲಕ್ಷಿö್ಮ ಭಂಡಾರ್ ಸಮೀಪ ಇರುವ ಇವರ ಬಾಡಿಗೆ ಮನೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಮಾಡಿದ್ದ ಟೆರೆಸ್ ಗಾರ್ಡನ್ ನೋಡಿ ಇಷ್ಟಪಟ್ಟ ಇವರ ಮನೆ ಪಕ್ಕದ ಖಾಲಿ ನಿವೇಶನದ ಮಾಲೀಕರು ತಮ್ಮ ೬೦*೪೦ ಅಳತೆಯ ಜಾಗವನ್ನು ಇನ್ನೂ ನಾಲ್ಕು ವರ್ಷಗಳವರೆಗೆ ಇವರಿಗೆ ವ್ಯವಸಾಯ ಮಾಡಲು ಬಿಟ್ಟುಕೊಟ್ಟಿದ್ದಾರೆ.

ಟೆರೆಸ್ ಮೇಲಿದೆ ಮಿನಿ ಗಾರ್ಡನ್:
ಕಳೆದ ೩ ವರ್ಷಗಳಿಂದ ಟೆರೆಸ್ ಮೇಲೆ ಗಾರ್ಡನ್ ಮಾಡಿಕೊಂಡಿರುವ ಇವರು ಮನೆಗೆ ಬೇಕಾದ ಹಣ್ಣು, ಹೂವು, ತರಕಾರಿ, ಔಷಧೀಯ ಸಸ್ಯಗಳು ಎಲ್ಲವನ್ನೂ ಬೆಳೆಯುತ್ತಾರೆ. ಪುದೀನಾ, ಕರಿಬೇವು, ಟೊಮೆಟೊ, ಹೀರೇಕಾಯಿ, ಬೆಂಡೆ, ಬದನೆ, ಮೆಂತ್ಯ, ಸೇವಂತಿಗೆ, ಚಪ್ಪರದ ಅವರೇಕಾಯಿ, ನಿಂಬೆಹಣ್ಣು ಮುಂತಾದ ಗಿಡಗಳನ್ನು ಬೆಳೆಸಿದ್ದಾರೆ. ಔಷಧೀಯ ಸಸ್ಯಗಳಾದ ನಾಗದಾಳೆ, ಚಕ್ರಮುನಿ, ಅಗಸೆ, ಲೋಳೆಸರ, ಅಮೃತಬಳ್ಳಿ, ಬೇವು, ಒಂದೆಲಗ ಮುಂತಾದ ಗಿಡಗಳು ಹಾಗೂ ಬೆಳಿಗ್ಗೆ ಮಾತ್ರ ಅರಳುವ `ಒಂದು ಗಂಟೆ ರಾಣಿ’ ಎಂಬ ವಿಶೇಷ ಹೂವು ಸಹ ಇವರ ಸಂಗ್ರಹದಲ್ಲಿವೆ. ವಿಶೇಷವೆಂದರೆ ನರ್ಸರಿಯನ್ನೂ ಇವರೇ ಮಾಡುತ್ತಾರೆ.
ಇನ್ನು ಮನೆ ಪಕ್ಕದ ನಿವೇಶನದಲ್ಲಿ ಮಾಡಿಕೊಂಡಿರುವ ಬಾಳೆ ತೋಟದಲ್ಲಿ ೬೦ ಬಾಳೆಗಿಡಗಳ ಜೊತೆ ಟೊಮೆಟೊ, ಜೋಳ, ಮೆಂತ್ಯ ಸೊಪ್ಪು, ಮೂಲಂಗಿ, ಹಸಿಮೆಣಸಿನಕಾಯಿ, ಹೊನಗೊನೆ ಸೊಪ್ಪಿನಂತಹ ಗಿಡಗಳನ್ನು ಹಾಕಿದ್ದಾರೆ. ಬಾಳೆ ತೋಟವನ್ನು ವಾಣಿಜ್ಯಕ್ಕಾಗಿಯೇ ಮಾಡುತ್ತಿರುವ ಇವರಿಗೆ ಮೊದಲ ಕಟಾವಿನಲ್ಲೇ ೫೦೦ ಕೆ.ಜಿ. ಟೊಮೆಟೊ, ೧೫೦ ಕೆ.ಜಿ. ಹಸಿಮೆಣಸಿನಕಾಯಿ ಬಂದಿವೆ. ಜೊತೆಗೆ ಎಲ್ಲಾ ಬಾಳೆ ಗಿಡಗಳಲ್ಲೂ ೧೫-೨೦ ಕೆ.ಜಿ. ತೂಗುವ ಬಾಳೆಗೊನೆಗಳು ದಷ್ಟಪುಷ್ಟವಾಗಿ ಬೆಳೆದು ನಿಂತಿವೆ. ಎಲ್ಲವನ್ನೂ ನೋಡಿಕೊಳ್ಳಲು ಇವರೊಂದಿಗೆ ಸಹಾಯಕರೊಬ್ಬರಿದ್ದಾರೆ.

ಅದ್ಭುತ ಕೃಷಿವಿಜ್ಞಾನಿ ರುದ್ರಾರಾಧ್ಯ:
ರದ್ರಾರಾಧ್ಯ ಅವರು ತಾವು ಕೆಲಸದಲ್ಲಿರುವ ಸಂದರ್ಭದಲ್ಲಿ ಕೃಷಿ ಕ್ಷೇತ್ರಗಳಲ್ಲಿ ಅದೆಷ್ಟೋ ಅನ್ವೇಷಣೆಗಳನ್ನು ಮಾಡಿದ್ದಾರೆ. `ಒಂದು ಎಕರೆಯಲ್ಲಿ ಕೃಷಿ ಬ್ರಹ್ಮಾಂಡ’ ಎಂಬ ಪುಸ್ತಕ ಬರೆದು ಒಂದು ಕುಟುಂಬ ತಮಗೆ ಸಿಗುವ ಕನಿಷ್ಟ ಜಾಗದಲ್ಲಿ ಹೇಗೆ ಮನೆಗೆ ಬೇಕಾದ ಎಲ್ಲಾ ಹಣ್ಣು, ಹೂವು, ತರಕಾರಿಗಳನ್ನು ಬೆಳೆಯಬಹುದು ಎಂಬುದನ್ನು ಜನರಿಗೆ ತಿಳಿಸಿಕೊಟ್ಟಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದಿಂದ, ಸಂಘ-ಸಂಸ‍್ಥೆಗಳಿಂದ ನೀಡುವ ಪ್ರಶಸ್ತಿಗೆ ಭಾಜನರಾಗಿ ವಿದೇಶಗಳಲ್ಲೂ ಕೃಷಿ ಬಗ್ಗೆ ಉಪನ್ಯಾಸಗಳು, ಕಾರ್ಯಾಗಾರಗಳನ್ನು ನೀಡಿ ಬಂದಿದ್ದಾರೆ.

ಇವರ ಮನೆಯೊಳಗೆ ಕಾಲಿಟ್ಟರೆ ಅತ್ಯಂತ ಪರಿಶುದ್ಧ ಆಮ್ಲಜನಕವನ್ನು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. ಮನೆಗೆ ಬಂದವರನ್ನು ಆದರವಾಗಿ ಬರಮಾಡಿಕೊಳ್ಳುವ ಇವರ ಸರಳತೆ ಇಷ್ಟವಾಗುತ್ತದೆ. ಸಿಕ್ಕಿರುವ ಸ್ವಲ್ಪ ಜಾಗವನ್ನು ಸ್ವಲ್ಪವೂ ವ್ಯರ್ಥ ಮಾಡದೇ ಎಲ್ಲೆಲ್ಲೂ ಹಸಿರು ಬೆಳೆಸಿದ್ದಾರೆ. ನಗರದ ಮಧ್ಯಭಾಗದಲ್ಲೂ ಸುಂದರ ತೋಟ ನಿರ್ಮಿಸಬಹುದು, ಮನೆಯ ಅವಶ್ಯಕತೆಗಳು ಪೂರೈಸಿಕೊಳ್ಳುವುದರ ಜೊತೆಗೆ ಸಂಪಾದನೆಯನ್ನೂ ಮಾಡಬಹುದು. ಎಲ್ಲಕ್ಕಿಂತ ಹೆಚ್ಚಾಗಿ ವಾತಾವರಣ ಶುದ್ಧವಾಗಿಟ್ಟುಕೊಳ್ಳಬಹುದು ಎಂಬ ಪಾಠ ಇವರ ಕೆಲಸದಲ್ಲಿದೆ.

 

%d bloggers like this: