You cannot copy content of this page.
. . .

ಎಲ್ಲವೂ ಆಕಾಶಕ್ಕೆ ‘ಶಿಫ್ಟ್’; ನಿರಂತರ 10 ತಿಂಗಳು ಹಾರಾಡುವ ಹಕ್ಕಿ..!

     ಆಕಾಶದಲ್ಲೇ ಊಟ.. ಹಾರಾಡುತ್ತಲೇ ನಿದ್ದೆ.. ಗಾಳಿಯಲ್ಲಿ ತೇಲುತ್ತಲೇ ಸಂಸಾರ.. ಆಕಾಶ ತಲೆಕೆಳಗಾದರೂ ಭೂಮಿಗೆ ಇಳಿಯೋ ಪ್ರಶ್ನೆಯೇ ಇಲ್ಲ.. ಇದು ತನ್ನ ಎಲ್ಲಾ ಕೆಲಸಗಳನ್ನೂ ಆಕಾಶಕ್ಕೆ ‘ಶಿಫ್ಟ್’ ಮಾಡಿಕೊಂಡಿರುವ ಹಕ್ಕಿಯೊಂದರ ಕಾಯಕ.. ಹೌದು, ಈ ಹಕ್ಕಿ ಹೆಸರೇ ಶಿಫ್ಟ್.. ವರ್ಷದಲ್ಲಿ 10 ತಿಂಗಳ ಕಾಲ ಈ ಹಕ್ಕಿ ನಿರಂತರವಾಗಿ ಹಾರಾಟ ನಡೆಸುತ್ತೆ. ಇದು ಹಾರುತ್ತಿದ್ದಾಗಲೇ ನಿದ್ದೆ ಮಾಡುತ್ತೆ, ಹಾರುತ್ತಲೇ ಆಹಾರವನ್ನು ಹುಡುಕಿಕೊಳ್ಳುತ್ತೆ, ಕೊನೆಗೆ ಮಿಲನ ಕ್ರಿಯೆಯನ್ನೂ ಆಕಾಶದಲ್ಲೇ ನಡೆಸಿಬಿಡುತ್ತೆ. ಮೊಟ್ಟೆಗೆ ಕಾವು ಕೊಡುವುದನ್ನು ಬಿಟ್ಟು ಮಿಕ್ಕೆಲ್ಲವನ್ನೂ ಈ ಹಕ್ಕಿ ಆಕಾಶಕ್ಕೆ ಶಿಫ್ಟ್ ಮಾಡಿಕೊಂಡಿದೆ.

   ಶಿಫ್ಟ್ ಹಕ್ಕಿಯ ಮೂಲ ಯೂರೋಪ್.. ಹಾಗಂತ ಅಲ್ಲೇ ಅದು ನಿಲ್ಲೋದಿಲ್ಲ.. ಯೂರೋಪ್‍ನಿಂದ ಮಧ್ಯ ಆಫ್ರಿಕಾ, ಮಧ್ಯ ಆಫ್ರಿಕಾದಿಂದ ಯೂರೋಪ್‍ ಹೀಗೆ ಜೀವನ ಪೂರ್ತಿ ಸಂಚಾರದಲ್ಲೇ ಕಾಲ ಕಳೆದುಬಿಡುತ್ತೆ. ಹೀಗಾಗಿ ಶಿಫ್ಟ್ ಹಕ್ಕಿ ಯಾವುದೋ ಭೂಭಾಗಕ್ಕೆ ಸೇರಿದ್ದು ಅನ್ನೋದಕ್ಕಿಂತ ಅದು ಆಕಾಶಕ್ಕೆ ಸೇರಿದ್ದು ಅಂದರೆ ಸೂಕ್ತ. ನೀವು ನಂಬ್ತೀರೋ ಬಿಡ್ತೀರೋ ಶಿಫ್ಟ್ ಹಕ್ಕಿ ಸೆಕೆಂಡಿಗೆ 31 ಮೀಟರ್‍ ವೇಗದಲ್ಲಿ ಹಾರಾಟ ನಡೆಸುತ್ತೆ. ಸರಾಸರಿ ಗಂಟೆಗೆ 112 ಕಿಲೋ ಮೀಟರ್‍ ಸಂಚರಿಸುತ್ತೆ. ಕೆಲವು ಶಿಫ್ಟ್‍ ಹಕ್ಕಿಗಳು ಗಂಟೆಗೆ 169 ಕಿಲೋ ಮೀಟರ್‍ ದೂರ ಸಾಗಿದ್ದೂ ಇದೆ. ಈ ಹಕ್ಕಿಗೆ ಆಕಾಶವೇ ಸರ್ವಸ್ವ. ಹೀಗಾಗಿ ಅದು ವರ್ಷದಲ್ಲಿ 10 ತಿಂಗಳು ಪೂರ್ತಿ ಆಕಾಶದಲ್ಲೇ ಇರುತ್ತೆ. ವರ್ಷಕ್ಕೆ ಏನಿಲ್ಲವೆಂದರೂ 2 ಲಕ್ಷ ಕಿಲೋ ಮೀಟರ್‍ ಸಂಚರಿಸುತ್ತೆ ಅಂದರೆ ಆಶ್ಚರ್ಯಪಡೋ ಅವಶ್ಯಕತೆ ಇಲ್ಲ. ಇದು ಹುಬ್ಬೇರಿಸುವಂತಹ ವಿಷಯವೇ ಆದರೂ ಎಲ್ಲರೂ ನಂಬಲೇಬೇಕಾದ ಸತ್ಯ.

    ಭಾರತದಲ್ಲಿರುವ ಗುಬ್ಬಿಗಳಂತೆ ಈ ಶಿಫ್ಟ್ ಹಕ್ಕಿ ಮುಷ್ಠಿಯಲ್ಲಿ ಹಿಡಿದುಕೊಳ್ಳಬಹುದಾದಷ್ಟು ಚಿಕ್ಕದು. ಕಂದುಬಣ್ಣದಿಂದ ಕೂಡಿರುವ ಈ ಹಕ್ಕಿಗೆ ರೆಕ್ಕೆಗಳು ಕೂಡಾ ಪುಟ್ಟವೇ. ಆದರೆ ಇದಕ್ಕೆ ಅದೆಷ್ಟು ಶಕ್ತಿ ಇದೆಯೋ ಏನೋ ಆಯಾಸವೇ ಆಗುವುದಿಲ್ಲ. ಟೆನಾಶಿಯಸ್ ಫ್ರಿಗೇಟ್ ಎಂಬ ಹಕ್ಕಿ ಹಲವಾರು ವಾರ ನಿರಂತರ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಕೆಲ ವರ್ಷಗಳ ಹಿಂದಿನ ತನಕ ಇದೇ ಅತಿ ಹೆಚ್ಚು ಕಾಲ ಹಾರಾಟ ನಡೆಸುವ ಹಕ್ಕಿ ಅನ್ನೋ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಶಿಫ್ಟ್‍ ಹಕ್ಕಿಗಳ ಸಾಧನೆ ಯಾವ ಹಕ್ಕಿಗಳೂ ಸಾಧ್ಯವೇ ಇಲ್ಲ ಅನ್ನೋದನ್ನು ಇದೀಗ ಸಂಶೋದಕರು ಸಾಬೀತು ಮಾಡಿದ್ದಾರೆ.

     ಸ್ವೀಡನ್‍ನ ಲೌಡ್ ವಿಶ್ವವಿದ್ಯಾಲಯದ ಪರಿಸರ ತಜ್ಞ ಹೆಡೆನ್ ಸ್ಟ್ರೋಮ್ ನೇತೃತ್ವದ ತಂಡ 9  ವರ್ಷಗಳ ಕಾಲ ಶಿಫ್ಟ್‍ ಹಕ್ಕಿಯ ಬಗ್ಗೆ ಅಧ್ಯಯನ ನಡೆಸಿದೆ. 13 ಆರೋಗ್ಯವಂತ ಶಿಫ್ಟ್ ಪಕ್ಷಿಗಳನ್ನು ಆಯ್ಕೆ ಮಾಡಿಕೊಂಡ ತಂಡ,ಅವುಗಳಿಗೆ ಸೆನ್ಸಾರ್‍ಗಳನ್ನು ಅಳವಡಿಸಿ ಹಾರಲು ಬಿಟ್ಟಿತ್ತು. ಆಗಲೇ ಶಿಫ್ಟ್‍ ಹಕ್ಕಿಯ ಸಾಮರ್ಥ್ಯ ಅರ್ಥವಾಗಿದ್ದು.

   ಉತ್ತರ ಯೋರೋಪ್ ನಿಂದ ಆಫ್ರಿಕಾದ ಕೇಂದ್ರ ಭಾಗದವರೆಗೂ ಈ ಪಕ್ಷಿಗಳು ವಲಸೆ ಹೋಗುತ್ತವೆ. ಹಾರುವಾಗಲೇ ಗಂಡು-ಹೆಣ್ಣು ಪಕ್ಷಿಗಳು ಕೂಡುತ್ತವೆ. ಸಮುದ್ರದ ಮೇಲ್ಭಾಗದಲ್ಲೇ ಹೆಚ್ಚು ಸಂಚರಿಸುವ ಈ ಹಕ್ಕಿಗಳು ಗಾಳಿಯಲ್ಲೇ ಆಹಾರವನ್ನು ಹೊಂಚುತ್ತವೆ. ಕೀಟಗಳು, ನೊಣಗಳು, ಗಾಳಿಯಲ್ಲಿ ಸಂಚರಿಸುವ ಪುಟ್ಟ ಪುಟ್ಟ ಕ್ರಿಮಿಗಳೇ ಇವುಗಳಿಗೆ ಆಹಾರ. ನಿದ್ದೆ ಬಂದರೆ ಹಾರುತ್ತಲೇ ವಿಶ್ರಾಂತಿ ತೆಗೆದುಕೊಳ್ಳುತ್ತವಂತೆ.

  ಸಂಶೋಧಕರು ಹೇಳೋ ಪ್ರಕಾರ 10 ತಿಂಗಳಲ್ಲಿ ಕೇವಲ 4 ರಾತ್ರಿಗಳು ಶಿಫ್ಟ್‍ ಹಕ್ಕಿಗಳು ವಿಶ್ರಾಂತಿ ಪಡೆದಿದ್ದವಂತೆ. ಇನ್ನೊಂದು ವರ್ಷದಲ್ಲಿ ಕೇವಲ 2 ಗಂಟೆಗಳು ಮಾತ್ರ ನಿದ್ದೆ ಮಾಡಿವೆಯಂತೆ. ಯೂರೋಪ್‍ನಿಂದ ಸೆಪ್ಟೆಂಬರ್‍ನಲ್ಲಿ ಶುರು ಮಾಡಿ ಏಪ್ರಿಲ್‍ವರೆಗೂ ಇವು ಹಾರಾಟ ನಡೆಸುತ್ತವೆ. ಇದರಲ್ಲಿ ಫೆಬ್ರವರಿ ತಿಂಗಳಲ್ಲಿ ಮಾತ್ರ ಕೆಲ ರಾತ್ರಿಗಳು ವಿಶ್ರಾಂತಿ ಪಡೆಯುತ್ತವೆ. ಆಗಲೂ ಅವು ಭೂಮಿಗೆ ಇಳಿಯುವುದಿಲ್ಲ. ಆಫ್ರಿಕಾದಲ್ಲಿ ಸಂತಾನೋತ್ಪತ್ತಿ ಮಾಡುವ ಶಿಫ್ಟ್‍ ಹಕ್ಕಿಗಳು ಕೆಲ ದಿನಗಳ ಮಾತ್ರ ಮನೆಗಳ ಮೇಲೆ, ಮರದ ಕೊಂಬೆಗಳ ಮೇಲೆ ವಾಸಿಸುತ್ತವೆ.

   19 ರಿಂದ 23 ದಿನಗಳೊಳಗಾಗಿ ಮೊಟ್ಟೆಗಳಿಂದ ಮರಿಗಳು ಹೊರಬರುತ್ತವೆ. ನಂತರ 6 ರಿಂದ 8 ವಾರಗಳಲ್ಲಿ ಮರಿಗಳು ಹಾರಾಟ ಶುರು ಮಾಡುತ್ತವೆ. ನಂತರ ಅವು ನಿರಂತರವಾಗಿ ಹಾರುತ್ತಲೇ ಇರುತ್ತವೆ. ವಯಸ್ಸಾದಾಗ, ತೀವ್ರ ಅನಾರೋಗ್ಯಕ್ಕೀಡಾದಾಗ, ರೆಕ್ಕೆಗಳು ಮುರಿದ ಸಂದರ್ಭದಲ್ಲಿ ಮಾತ್ರ ಈ ಹಕ್ಕಿಗಳು ನೆಲಕ್ಕಿಳಿಯುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

 

%d bloggers like this: