You cannot copy content of this page.
. . .

ಉಪ ಸಮರದಲ್ಲಿ ಸೇಬಿನ ಹಾರದ ‘ಪರ್ವ’

49 Views

  ಹಿಂದೆ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡಕ್ಕಾಗಿ ಜನ ಕಿತ್ತಾಡೋದನ್ನು ನೋಡ್ತಿದ್ವಿ. ಈಗ ಕಾಲ ಬದಲಾಗಿದೆ. ಜನ ಚುನಾವಣೆಗಳಲ್ಲಿ ಸೇಬುಗಳಿಗಾಗಿ ಕಿತ್ತಾಡುತ್ತಿದ್ದಾರೆ. ಜಗಳ ಮಾಡಿಕೊಂಡಾದರೂ ಸೇಬು ತಿನ್ನುತ್ತಿದ್ದಾರೆ. ಕಾಶ್ಮೀರಿ ಆಪಲ್‍ ಗಾಗಿ ಒಂದೇ ಪಕ್ಷದ ಕಾರ್ಯಕರ್ತರು ಹೊಡೆದಾಡುವ ಹಂತಕ್ಕೂ ತಲುಪುತ್ತಿದ್ದಾರೆ.   

   2018ರಲ್ಲಿ ಕುಮಾರಸ್ವಾಮಿಯವರ ಕುಮಾರ ಪರ್ವದ ಜೊತೆಗೆ ಸೇಬಿನ ಹಾರದ ಪರ್ವ ಶುರುವಾಗಿತ್ತು.. ಅದು ಈಗಲೂ ಮುಂದುವರೆಯುತ್ತಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಕುಮಾರ ಪರ್ವ ಆರಂಭಿಸಿದ್ದರು. ಆಗ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಕುಮಾರಸ್ವಾಮಿಯವರಿಗೆ ಅಭಿಮಾನಿಗಳು ನೂರಾರು ಕೆಜಿ ತೂಕದ ಸೇಬಿನ ಹಾರಗಳನ್ನು ಹಾಕುವುದಕ್ಕೆ ಶುರು ಮಾಡಿದ್ದರು. ಉಪಚುನಾವಣೆಯಲ್ಲೂ ಈ ಟ್ರೆಂಡ್‍ ಮುಂದುವರೆದಿದೆ. 15 ಕ್ಷೇತ್ರಗಳಲ್ಲೂ ನಾಯಕರಿಗೆ ಹಾಕಿದ ಹಾರಗಳಲ್ಲಿನ ಸೇಬುಗಳಿಗಾಗಿ ಕಾರ್ಯಕರ್ತರು ಕಿತ್ತಾಡಿದ್ದಾರೆ.

   ಇಂದು ಮಾಜಿ ಪ್ರಧಾನಿ ದೇವೇಗೌಡರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರೋಡ್‍ ಶೋ ಮಾಡುವ ಮೂಲಕ ಪ್ರಚಾರ ಮಾಡಿದರು. ಈ ವೇಳೆ ಅಭಿಮಾನಿಗಳು ಕ್ರೇನ್‍ ಮೂಲಕ 400 ಕೆಜಿ ತೂಕದ ಸೇಬಿನ ಹಾರವನ್ನು ದೇವೇಗೌಡರಿಗೆ ಸಮರ್ಪಿಸಿದರು. ಅಲ್ಲಿಯವರೆಗೂ ದೇವೇಗೌಡರನ್ನು ನೋಡುವುದಕ್ಕಾಗಿ ಮುಗಿಬಿದ್ದಿದ್ದ ಕಾರ್ಯಕರ್ತರು, ಹಾರ ಹಾಕಿದ ಮೇಲೆ ಸೇಬುಗಳನ್ನು ಕಿತ್ತುಕೊಳ್ಳಲು ಮುಗಿಬಿದ್ದರು. ಗೌಡರು ಏನು ಮಾತನಾಡಿದರೂ ಅದನ್ನು ಕೇಳಿಸಿಕೊಳ್ಳುವ ವ್ಯವದಾನ ಕಾರ್ಯಕರ್ತರಲ್ಲಿರಲಿಲ್ಲ. ಸೇಬುಗಳನ್ನು ಕಿತ್ತು ತಿನ್ನುವುದರ ಕಡೆಗಷ್ಟೇ ಅವರ ಗಮನವಿತ್ತು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಆಂಜನಪ್ಪ ನಾಮಪತ್ರ ಸಲ್ಲಿಕೆ ವೇಳೆಯೂ 500 ಕೆಜಿ ತೂಕದ ಸೇಬಿನ ಹಾರ ಹಾಕಲಾಗಿತ್ತು. ಆಗಲೂ ಕೂಡಾ ಕಾಂಗ್ರೆಸ್‍ ಕಾರ್ಯಕರ್ತರು ಕಿತ್ತಾಡಿಕೊಂಡು ಸೇಬುಗಳನ್ನು ತಿಂದಿದ್ದರು. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೆ.ಆರ್‍.ಪೇಟೆ ಕ್ಷೇತ್ರದ ಕಿಕ್ಕೇರಿ ಗ್ರಾಮದಲ್ಲಿ ಪ್ರಚಾರ ನಡೆಸುವಾಗ ಬೃಹತ್‍ ಗಾತ್ರದ ಸೇಬಿನ ಹಾರವನ್ನು ಹಾಕಲಾಗಿತ್ತು. ಈ ವೇಳೆ ಸೇಬು ಕೀಳಲು ಕಾರ್ಯಕರ್ತರು ಒಬ್ಬರ ಮೇಲೊಬ್ಬರು ಬಿದ್ದರು. ನೂಕುನುಗ್ಗಲು ಶುರುವಾಯ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ನೋಡಿ ಕೊನೆಗೆ ಪೊಲೀಸರು ಲಾಠಿ ಚಾರ್ಜ್‍ ಮಾಡಿ ಜನರನ್ನು ಚದುರಿಸಿದರು.

  ಇತ್ತ ರಾಣೆಬೆನ್ನೂರು ಕ್ಷೇತ್ರದಲ್ಲೂ ಸಿದ್ದರಾಮಯ್ಯ ಪ್ರಚಾರ ನಡೆಸುವಾಗ ಕವಲತ್ತು ಗ್ರಾಮದಲ್ಲಿ ಅವರ ಅಭಿಮಾನಿಗಳು 500 ಕೆಜಿ ತೂಕದ ಸೇಬಿನ ಹಾರ ಹಾಕಿದರು. ಆಗಲೂ ಅದೇ ಕತೆ. ಜನರು ಸೇಬಿಗಾಗಿಯೇ ಬಂದವರಂತೆ ಆಡಿದರು. ಹೀಗೆ ಎಲ್ಲಾ 15 ವಿಧಾನಸಭಾ ಕ್ಷೇತ್ರಗಳಲ್ಲೂ ಸೇಬಿನ ಹಾವಳಿ ಜಾಸ್ತಿಯಾಗಿದೆ.

  ಕುಮಾರ ಪರ್ವದಿಂದ ಶುರುವಾದ ಸೇಬಿನ ಪರ್ವ ಚುನಾವಣೆ ನಂರತವೂ ಮುಂದುವರೆಯುತ್ತಲೇ ಇತ್ತು. ಡಿ.ಕೆ.ಶಿವಕುಮಾರ್‍ ಜೈಲಿನಿಂದ ಬಿಡುಗಡೆಯಾಗಿ ಬಂದಾಗಲೂ ಹತ್ತಾರು ಸೇಬಿನ ಹಾರಗಳನ್ನು ಹಾಕಲಾಯಿತು. ಒಟ್ಟಾರೆ, ಬೀರು, ಬ್ರಾಂದಿ, ವಿಸ್ಕಿ ಹಂಚಿ ಮತದಾರರ ಆರೋಗ್ಯ ಹಾಳು ಮಾಡುತ್ತಿದ್ದ ಕಾಲ ಹೋಗಿ ಈಗ ಸೇಬು ಹಣ್ಣಿನ ಮೂಲಕ ಆರೋಗ್ಯ ಹಂಚುವ ಕಾಲ ಬಂದಿರುವುದು ಒಳ್ಳೆಯ ಬೆಳವಣಿಗೆಯೇ. ಜೊತೆಗೆ ಕೆಲಸವಿಲ್ಲದೇ ಸುಮನಿದ್ದ ಜೆಸಿಬಿ, ಕ್ರೇನ್‍ ಮಾಲೀಕರಿಗೂ ಕೆಲಸ ಸಿಕ್ಕಂತಾಗಿದೆ.

Leave a Reply

 

%d bloggers like this: